ಚನ್ನಪಟ್ಟಣ (ರಾಮನಗರ): ‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ಜನ ರೋಸಿ ಹೋಗಿದ್ದು, ಮುಂದೊಂದು ದಿನ ಜೆಡಿಎಸ್– ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ರಾಮನಗರ ನಗರಸಭೆಯನ್ನು ಮಹಾನಗರಪಾಲಿಕೆ ಮಾಡಲಾಗುವುದು. ರಾಮನಗರ– ಚನ್ನಪಟ್ಟಣವನ್ನು ಅವಳಿನಗರಗಳಾಗಿ ಅಭಿವೃದ್ಧಿಪಡಿಸಿ ಶೈಕ್ಷಣಿಕ, ಆರ್ಥಿಕ ಹಾಗೂ ಕೈಗಾರಿಕಾ ಹಬ್ ಮಾಡಲಾಗುವುದು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ತಾಲ್ಲೂಕಿನ ವಿಠ್ಠಲೇನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ‘ಭೂಮಿ ಲೂಟಿ ಹೊಡೆಯುವುದಕ್ಕಾಗಿ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುತ್ತೇವೆ ಎಂದು ಕೆಲವರು ಹೊರಟಿದ್ದಾರೆ. ನೆಲದ ಮಕ್ಕಳಾದ ನಾವು ಮಣ್ಣು ನಂಬಿಕೊಂಡು ಜೀವನ ಮಾಡುವವರೇ ಹೊರತು, ಮಾರಿಕೊಂಡು ಬದುಕುವವರಲ್ಲ’ ಎಂದು ಡಿ.ಕೆ ಸಹೋದರರ ಹೆಸರೇಳದೆ ವಾಗ್ದಾಳಿ ನಡೆಸಿದರು.
ತಮ್ಮ ತಂದೆ ಎಚ್.ಡಿ. ದೇವೇಗೌಡರು ಹಿಂದೆ ವಿಠ್ಠಲೇನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದನ್ನು ನೆನೆದ ಎಚ್‌ಡಿಕೆ, ಗ್ರಾಮದೊಂದಿಗೆ ದೇವೇಗೌಡರು ಹೊಂದಿರುವ ಬಾಂಧವ್ಯವನ್ನು ಮೆಲುಕು ಹಾಕಿದರು.
ಕುತಂತ್ರದಿಂದ ಸೋತಿರುವೆ: ‘ಹಿಂದಿನ ಎರಡು ಚುನಾವಣೆಗಳಲ್ಲಿ ಕುತಂತ್ರದಿಂದ ಸೋತಿದ್ದೇನೆ. ಆದರೂ ನನಗೆ ಜನ ಬೆಂಬಲ, ಆಶೀರ್ವಾದ ಕಡಿಮೆಯಾಗಿಲ್ಲ. ನನಗಿದು ಅನಿರೀಕ್ಷಿತ ಚುನಾವಣೆ. ಜೆಡಿಎಸ್ ರೈತರ ಪಕ್ಷ. ರೈತರ ಸಾಲಮನ್ನಾ ಮಾಡಿ ರೈತರ ಪರ ನಿಂತಿದ್ದು ಕುಮಾರಣ್ಣ. ಇದೆಲ್ಲವನ್ನು ನಿಮ್ಮ ಹೃದಯದಲ್ಲಿ ಸ್ಮರಿಸಿಕೊಂಡು ನನಗೆ ಮತ ನೀಡಿ’ ಎಂದು ನಿಖಿಲ್ ತಮ್ಮ ಪ್ರಚಾರ ಭಾಷಣದಲ್ಲಿ ಮನವಿ ಮಾಡಿದರು.
‘ಕುಮಾರಣ್ಣ ಅವರು ಸಾರಾಯಿ ಮತ್ತು ಲಾಟರಿ ನಿಷೇಧ ಮಾಡಿದರು. ದೇವೇಗೌಡರು ಇಗ್ಗಲೂರು ಡ್ಯಾಂ ಕಟ್ಟಿ ನೀರಾವರಿ ಯೋಜನೆ ಕೊಟ್ಟಿದ್ದಾರೆ. ಕುಮಾರಣ್ಣ ಕೂಡ ಸತ್ತೆಗಾಲದಿಂದ ನೀರಾವರಿ ಯೋಜನೆ ತಂದಿದ್ದಾರೆ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ. ಯಾವ ಜಾತಿಯೂ ಈ ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲ’ ಎಂದು ತಿಳಿಸಿದರು.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ವಕ್ತಾರ ಅಶ್ವತ್ಥ ನಾರಾಯಣಗೌಡ, ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮಾಜಿ ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಅಶ್ವಿನ್ ಕುಮಾರ್ ಸೇರಿದಂತೆ ಮೈತ್ರಿಕೂಟದ ಮುಖಂಡರು ಪ್ರಚಾರಕ್ಕೆ ಸಾಥ್ ನೀಡಿದರು.
***
ದೇವೇಗೌಡರು ಮತ್ತು ಬಿಜೆಪಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನೀವು ಕೊಟ್ಟ ಶಕ್ತಿ ಮೇಲೆ ದುಡಿಮೆ ಮಾಡಲು ಬಂದಿದ್ದೇನೆ. ದಯವಿಟ್ಟು ನನ್ನನ್ನ ಆಶೀರ್ವದಿಸಿ. ನಿಮ್ಮ ಕಷ್ಟದಲ್ಲಿ ಭಾಗಿಯಾಗಲು ಅವಕಾಶ ಕೊಡಿ
-ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ
ಪುನೀತ್‌ಗೆ ನಮನ
ಕತ್ತಲಲ್ಲೂ ಪ್ರಚಾರ ವಳಗೆರೆದೊಡ್ಡಿಯಲ್ಲಿ ಮತ ಯಾಚಿಸಿದ ನಿಖಿಲ್ ಅವರು ನಟ ಪುನೀತ್ ರಾಜಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಗ್ರಾಮದ ಅಪ್ಪು ಪಾರ್ಕ್‌ನಲ್ಲಿರುವ ಪುನೀತ್ ಭಾವಚಿತ್ರಕ್ಕೆ ಮಂಗಳಾರತಿ ಮಾಡಿ ಪುಷ್ಪನಮನ ಸಲ್ಲಿಸಿದರು. ತಂದೆ ಕುಮಾರಸ್ವಾಮಿ ಅವರೊಂದಿಗೆ ಪುಟ್ಟಪುಟ್ಟಪ್ಪನದೊಡ್ಡಿ ಬೆಳೆಕೆರೆ ಮುದುಗೆರೆ ಮಾರ್ಚನಹಳ್ಳಿ ಶೆಟ್ಟಹಳ್ಳಿ ಗ್ರಾಮಗಳಲ್ಲಿ ರಾತ್ರಿ ಮೆರವಣಿಗೆ ಮಾಡಿ ಪ್ರಚಾರ ನಡೆಸಿ ಭಾಷಣ ಮಾಡಿದರು. ಗೆಲುವಿನ ಸಿಹಿ ಕೊಡುತ್ತೇವೆ: ನಿಖಿಲ್ ಮಾತಿಗೆ ಪ್ರತಿಕ್ರಿಯಿಸಿದ ಕಾರ್ಯಕರ್ತರು ‘ಮಂಡ್ಯ ಮತ್ತು ರಾಮನಗರದಂತೆ ನಾವು ನಿಮಗೆ ಸೋಲಿನ ನೋವು ಕೊಡುವುದಿಲ್ಲ. ಬದಲಿಗೆ ಗೆಲುವಿನ ಸಿಹಿ ನೀಡುತ್ತೇವೆ’ ಎಂದು ಭರವಸೆ ನಿಡಿದರು. ಜೆಡಿಎಸ್ ಸೇರಿದ ‘ಕೈ’ ಮುಖಂಡರು ಚನ್ನಪಟ್ಟಣ (ರಾಮನಗರ): ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಮನಗರ–ಚನ್ನಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಶಾರದಾ ಚಂದ್ರಶೇಖರ್ ಮಂಗಳವಾರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ತಾಲ್ಲೂಕಿನ ಬೈರಶೆಟ್ಟಿಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.