ADVERTISEMENT

ಚನ್ನಪಟ್ಟಣ ಉಪಚುನಾವಣೆ | ಜೆಡಿಎಸ್‌ನ ಜಯಮುತ್ತು ‘ಮೈತ್ರಿ’ ಅಭ್ಯರ್ಥಿ?

ಟಿಕೆಟ್ ಮುಂಚೂಣಿಯಲ್ಲಿ ಕ್ಷೇತ್ರದ ತಾಲ್ಲೂಕು ಅಧ್ಯಕ್ಷ; ಸ್ಥಳೀಯ ಮುಖಂಡನಿಗೆ ನಾಯಕರ ಮಣೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 6:25 IST
Last Updated 24 ಅಕ್ಟೋಬರ್ 2024, 6:25 IST
ಎಚ್‌.ಸಿ. ಜಯಮುತ್ತು
ಎಚ್‌.ಸಿ. ಜಯಮುತ್ತು   

ರಾಮನಗರ: ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧಿಸಲು ಸಿ.ಪಿ. ಯೋಗೇಶ್ವರ್ ನಿರಾಕರಿಸಿ ಕಾಂಗ್ರೆಸ್‌ ಸೇರಿದ ಬೆನ್ನಲ್ಲೇ, ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಕುತೂಹಲ ಮೈತ್ರಿಕೂಟದಲ್ಲಿ ಗರಿಗೆದರಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸ್ಥಳೀಯ ಸಿಪಿವೈ ವಿರುದ್ಧ, ಸ್ಥಳೀಯ ಮುಖವಾಗಿರುವ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್‌.ಸಿ. ಜಯಮುತ್ತು ಅವರಿಗೆ ಟಿಕೆಟ್ ನೀಡುವ ಕುರಿತು ಪಕ್ಷದೊಳಗೆ ಚರ್ಚೆ ಜೋರಾಗಿದೆ.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಕ್ಷೇತ್ರಕ್ಕೆ ‘ನಾನೇ ಮೈತ್ರಿ ಅಭ್ಯರ್ಥಿ’ ಎಂದು ಯೋಗೇಶ್ವರ್ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆಗ ಜಯಮುತ್ತು ಅವರು, ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಎಂದು ತಿರುಗೇಟು ನೀಡಿದ್ದರು. ಅಂದಿನಿಂದಲೂ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ನಿಖಿಲ್ ಹೆಸರೇ ಕೇಳಿ ಬರುತ್ತಿದೆ.

ADVERTISEMENT

‘ಉಪ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ್ದ ನಿಖಿಲ್, ಪಕ್ಷ ಸಂಘಟನೆ ಮಾಡುವುದಾಗಿ ಹೇಳುತ್ತಲೇ ಬರುತ್ತಿದ್ದಾರೆ. ಅವರ ಬಳಿಕ, ಅನಿತಾ ಕುಮಾರಸ್ವಾಮಿ ಹೆಸರು ಸಹ ಕೇಳಿಬಂದಿತ್ತು. ಅವರು ಸಹ ಆಸಕ್ತಿ ತೋರದಿರುವುದರಿಂದ ಜಯಮುತ್ತುಗೆ ಟಿಕೆಟ್ ಒಲಿಯುವ ಸಾಧ್ಯತೆ ಹೆಚ್ಚಾಗಿದೆ.

ಗೆಲುವೇ ಸವಾಲು: ‘ಯೋಗೇಶ್ವರ್‌ ಅವರೇ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ ಕ್ಷೇತ್ರವು ಎನ್‌ಡಿಎ ತೆಕ್ಕೆಯಲ್ಲೇ ಇರುತ್ತಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಅವರು ಪಕ್ಷ ತೊರೆದಿದ್ದಾರೆ. ಕ್ಷೇತ್ರದಲ್ಲಿ ಜನರ ಒಲವು ಸಹ ಅವರ ಕಡೆಗೆ ಇದ್ದು, ಇದೀಗ ಕಾಂಗ್ರೆಸ್‌ ಸೇರಿರುವ ಅವರಿಗೆ ಆ ಪಕ್ಷದ ಮತಬಲವೂ ಸಿಕ್ಕಿದೆ. ಹಾಗಾಗಿ, ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವವರಿಗೆ ಗೆಲುವಿನ ಸಾಧ್ಯತೆ ಕಡಿಮೆ ಇದೆ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವ ಕಾಪಾಡಿಕೊಂಡು ಮತಗಳು ಚದುರದಂತೆ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಪಕ್ಷದ ನಾಯಕ ಕುಮಾರಸ್ವಾಮಿ ಅವರ ಮೇಲಿದೆ. ಹಾಗಾಗಿ, ಮತಗಳನ್ನು ಕ್ರೋಢಿಕರಿಸಬಲ್ಲ ಸ್ಥಳೀಯ ಮುಖಂಡ ಜಯಮುತ್ತು ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ನಾಯಕರು ತೀರ್ಮಾನಿಸಿದ್ದಾರೆ. ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಗುರುವಾರ ಕ್ಷೇತ್ರದ ಮುಖಂಡರ ಸಭೆ ಕರೆದಿದ್ದು, ಅಲ್ಲಿ ಹೆಸರು ಘೋಷಣೆಯಾಗಲಿದೆ’ ಎಂದು ಹೇಳಿದರು.

ಪಕ್ಷದ ಶಿಸ್ತಿನ ಸಿಪಾಯಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾಗಿರುವ ಎಚ್‌.ಸಿ. ಜಯಮುತ್ತು ಅವರು ನಾಯಕರ ನಂಬುಗೆ ಗಳಿಸಿರುವ ಪಕ್ಷದ ಶಿಸ್ತಿನ ಸಿಪಾಯಿ. ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಅವರು 2016ರಿಂದ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾಗಿದ್ದಾರೆ. ತಾಲ್ಲೂಕಿನ ಹಾರೋಹಳ್ಳಿ ಗ್ರಾಮದವರಾದ 42 ವರ್ಷದ ಜಯಮುತ್ತು ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಹಾಗೂ ಒಕ್ಕಲಿಗರ ಸಂಘದ ನಿರ್ದೇಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.