ADVERTISEMENT

ಮಾಗಡಿ | ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 6:28 IST
Last Updated 4 ಜುಲೈ 2024, 6:28 IST
ಮಾಗಡಿ ತಾಲ್ಲೂಕಿನ ಮಾಡಬಾಳು ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಪರಿಶೋಧನಾ ಸಭೆಯಲ್ಲಿ ಕಾರ್ಯಕ್ರಮ ವ್ಯವಸ್ಥಾಪಕಿ ಶಿವಮ್ಮ ಮಾತನಾಡಿದರು
ಮಾಗಡಿ ತಾಲ್ಲೂಕಿನ ಮಾಡಬಾಳು ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಪರಿಶೋಧನಾ ಸಭೆಯಲ್ಲಿ ಕಾರ್ಯಕ್ರಮ ವ್ಯವಸ್ಥಾಪಕಿ ಶಿವಮ್ಮ ಮಾತನಾಡಿದರು   

ಮಾಗಡಿ: ತಾಲ್ಲೂಕಿನ ಮಾಡಬಾಳ್ ಗ್ರಾಮ ಪಂಚಾಯಲ್ಲಿ ಬುಧವಾರ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ನಡೆಯಿತು.

ಈ ವೇಳೆ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶಿವಮ್ಮ ಮಾತನಾಡಿ, ನರೇಗಾ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಇಲ್ಲದವರಿಗೆ ಜಾಬ್ ಕಾರ್ಡ್ ಮೂಲಕ ಕೆಲಸ ನೀಡಿ ಕೂಲಿ ಹಣವನ್ನು ನೀಡಲಾಗುತ್ತದೆ. ಆದರೆ, ಕೆಲವರು ಬೇರೆ ಹೆಸರಿನ ಜಾಬ್ ಕಾರ್ಡ್‌ನಲ್ಲಿ ಕಾಮಗಾರಿ ಮಾಡಿಸಿ, ಬೇರೆಯವರ ಖಾತೆಗೆ ಹಣ ಹಾಕಿಸುತ್ತಾರೆ. ಹಾಗೆ ಮಾಡಿದರೆ ಹಣ ನೀಡಬೇಡಿ ಎಂದು ತಿಳಿಸಿದರು.

ನಿಮಗೆ ಮಾಹಿತಿ ಇಲ್ಲದೆ ನಿಮ್ಮ ಹೆಸರಿನ ಜಾಬ್‌ ಕಾರ್ಡ್ ಬಳಕೆ ಮಾಡಿಕೊಳ್ಳಬಾರದು. ಜಾಬ್‌ ಕಾರ್ಡ್‌ ದುರ್ಬಳಕೆ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಪಿಡಿಒ ಅವರು ಗಮನಹರಿಸಬೇಕು ಎಂದು ಹೇಳಿದರು.

ADVERTISEMENT

ಈ ವರ್ಷ ಒಟ್ಟು 494 ಕಾಮಗಾರಿಗಳು ಪಂಚಾಯಿತಿಯಿಂದ ನಡೆದಿದ್ದು, ಇದರಲ್ಲಿ 30 ಮನೆ ಕಾಮಗಾರಿ,  30 ಕೈತೋಟ, 61 ಕೊಟ್ಟಿಗೆ, ಎರಡು ಶಾಲಾ ಕಾಂಪೌಂಡ್, ಐದು ಚೆಕ್ ಡ್ಯಾಂ, 12 ಕಾಂಕ್ರೀಟ್ ರಸ್ತೆ, ಎರಡು ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿ ಒಟ್ಟು ₹1,53,000,00 ಅನುದಾನ ಬಿಡುಗಡೆಯಾಗಿದೆ. ಈ ಅನುದಾನ ಮಾಹಿತಿಯನ್ನು ಪಂಚಾಯಿತಿ ನೋಟಿಸ್ ಬೋರ್ಡ್‌ನಲ್ಲಿ ಏಳು ದಿನ ಹಾಕಲಿದ್ದು, ಏನಾದರೂ ಸಮಸ್ಯೆ ಇದ್ದರೆ ಪಂಚಾಯಿತಿ ಪಿಡಿಒ ಅವರಿಗೆ ದೂರು ನೀಡಬಹುದು ಎಂದರು.

ಗ್ರಾಮದ ಮುಖಂಡ ಕೆಂಪೇಗೌಡ ಮಾತನಾಡಿ, ಜಾಬ್ ಕಾರ್ಡ್ ಪಡೆದ ವ್ಯಕ್ತಿಗಳು ಯಾವಾಗ ಬೇಕಾದರೂ ಕೆಲಸ ಮಾಡಲು ಪಂಚಾಯಿತಿಯಿಂದ ಅವಕಾಶ ಕೊಡಬೇಕು. ಈಗ ಬಹುತೇಕ ಕಾಮಗಾರಿಗಳು ಬೃಹತ್ ಯಂತ್ರಗಳ ಮೂಲಕ ಮಾಡುತ್ತಿದ್ದು, ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಜಾಬ್ ಕಾರ್ಡ್‌ ದುರ್ಬಳಕೆ ಆಗದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ರತ್ನಮ್ಮ, ನಾಗೇಶ್, ನಾಗೇಂದ್ರ ಕುಮಾರ್, ಬಸವರಾಜು, ರಾಜೀವ್, ಜಯರಾಮಯ್ಯ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.