ADVERTISEMENT

ಹಸಿರುಕ್ರಾಂತಿಯ ಹರಿಕಾರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 6:01 IST
Last Updated 6 ಏಪ್ರಿಲ್ 2024, 6:01 IST
ಕನಕಪುರ ತಾಲ್ಲೂಕು ಕಚೇರಿಯಲ್ಲಿ ನಡೆದ ಡಾ.ಬಾಬು ಜಗಜೀವನ್‌ ರಾಮ್‌ ಜಯಂತಿ ಕಾರ್ಯಕ್ರಮದಲ್ಲಿ ಡಾ.ಸ್ಮಿತಾ ರಾಮ್‌ ಮಾತನಾಡಿದರು
ಕನಕಪುರ ತಾಲ್ಲೂಕು ಕಚೇರಿಯಲ್ಲಿ ನಡೆದ ಡಾ.ಬಾಬು ಜಗಜೀವನ್‌ ರಾಮ್‌ ಜಯಂತಿ ಕಾರ್ಯಕ್ರಮದಲ್ಲಿ ಡಾ.ಸ್ಮಿತಾ ರಾಮ್‌ ಮಾತನಾಡಿದರು   

ಕನಕಪುರ: ದೇಶವನ್ನು ಹಸಿವಿನಿಂದ ಮುಕ್ತಗೊಳಿಸಿ ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಮಾಡುವ ಮೂಲಕ ಬಾಬು ಜಗಜೀವನ್ ರಾಂ ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ತಹಶೀಲ್ದಾರ್ ಡಾ.ಸ್ಮಿತಾ ರಾಮ್‌ ತಿಳಿಸಿದರು.

ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಶುಕ್ರವಾರ ನಡೆದ ಬಾಬು ಜಗಜೀವನ್ ರಾಂ ಜಯಂತಿಯಲ್ಲಿ ಅವರು ಮಾತನಾಡಿದರು.

ಜಗಜೀವನ್‌ ರಾಂ‌ ಅವರು 1908 ಏಪ್ರಿಲ್ 5ರಲ್ಲಿ ಬಿಹಾರದಲ್ಲಿ ಜನಿಸಿದ ಅವರು ಚಿಕ್ಕ ವಯಸ್ಸಿನಲ್ಲಿ ಕೇಂದ್ರ ಸಚಿವರಾಗಿ ಇತಿಹಾಸ ಸೃಷ್ಠಿಸಿದ್ದಾರೆ. ಸುದೀರ್ಘ 50 ವರ್ಷಗಳ ಕಾಲ ರಾಜಕಾರಣಿಯಾಗಿ ದೇಶದಲ್ಲಿ ಎದುರಾದ ಹಲವು ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ದೇಶವನ್ನು ಪಾರು ಮಾಡಿದ್ದಾರ ಎಂದು ಸ್ಮರಿಸಿದರು.

ADVERTISEMENT

ಕಾರ್ಮಿಕ ಇಲಾಖೆ ಸಚಿವರಾಗಿ ಹಲವಾರು ಅಮೂಲಾಗ್ರ ಬದಲಾವಣೆ ತರುವ ಮೂಲಕ ಕಾರ್ಮಿಕ ವರ್ಗದ ಹಿತ ಕಾಪಾಡಿದರು. ಕಾರ್ಮಿಕರ ಭವಿಷ್ಯ ನಿಧಿಯನ್ನು ಪ್ರಾರಂಭಿಸಿ ಭವಿಷ್ಯ ಕಟ್ಟಿಕೊಟ್ಟಿದ್ದಾರೆ ಎಂದರು.

ಶಿಕ್ಷಕ ಪರಮೇಶ್‌ ಡಾ.ಬಾಬು ಜಗಜೀವನ್‌ ರಾಂ‌ ಕುರಿತು ವಿಶೇಷ ಉಪನ್ಯಾಸ ನೀಡಿ, ಜಗಜೀವನ ರಾಂ ಅವರು ಬ್ರಿಟೀಷ್ ಸರ್ಕಾರದ ಅವಧಿಯಲ್ಲಿ ತಮ್ಮ 28 ನೇ ವಯಸ್ಸಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು. ಅವರಲ್ಲಿದ್ದ ಕಿಚ್ಚು ಹೋರಾಟ ಅವರನ್ನು ದಾರ್ಶನಿಕ ವ್ಯಕ್ತಿಯನ್ನಾಗಿ ಮಾಡಿತು ಎಂದು ಹೇಳಿದರು.

ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ದಲಿತ ಮುಖಂಡ ನೀಲಿ ರಮೇಶ್‌ ಮಾತನಾಡಿ ದೇಶದಲ್ಲಿ ಆಹಾರದ ಕ್ಷಾಮ ಎದುರಾದಾಗ ಕೃಷಿ ವಲಯದಲ್ಲಿ ಸುಧಾರಣೆ ತಂದು ದೇಶಕ್ಕೆ ಆಹಾರದ ಭದ್ರತೆ ಕಲ್ಪಿಸಿ ಹಸಿರು ಕ್ರಾಂತಿ ಮೂಲಕ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ.  ಅವರ ತತ್ವ ಆದರ್ಶ ಪಾಲನೆ ಮಾಡಿ ಅವರ ಜಯಂತಿಗೆ ಅರ್ಥ ಬರುವಂತೆ ಬದುಕಬೇಕಿದೆ ಎಂದು ತಿಳಿಸಿದರು.

ತಾಲ್ಲೂಕು ಕಚೇರಿ ಶಿರಸ್ತೇದಾರ್ ಜಗದೀಶ್, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಮೋಹನ್ ಬಾಬು, ಸಮಾಜ ಕಲ್ಯಾಣ ಇಲಾಖೆ ಜಯಪ್ರಕಾಶ್, ನೌಕರರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಸಾಹಿತಿ ಕೂಗಿ ಗಿರಿಯಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.