ಕನಕಪುರ: ತಾಲ್ಲೂಕಿನ ಮರಿಸಿದ್ದೇಗೌಡನದೊಡ್ಡಿ, ಅಲಗಾಡಕಲು, ಕೊಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಹೊರವಲಯದಲ್ಲಿರುವ ಹೊಲಗಳಿಗೆ ಎರಡ್ಮೂರು ದಿನಗಳಿಂದ ಬರುತ್ತಿರುವ ಕಾಡಾನೆಗಳು ಹೊಲದಲ್ಲಿ ಬೆಳೆದಿರುವ ರಾಗಿ ಬೆಳೆಯನ್ನು ನಾಶಪಡಿಸಿವೆ.
ಕಾಡಾನೆಗಳ ಓಡಾಟದಿಂದಾಗಿ ಹಲವು ರೈತರು ಬೆಳೆದಿದ್ದ ರಾಗಿ ಸಂಪೂರ್ಣ ನೆಲ ಕಚ್ಚಿದೆ. ಮಳೆ ಇಲ್ಲದೆ ಒಣಗುತ್ತಿದ್ದ ಬೆಳೆಯು ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಚೇತರಿಸಿಕೊಂಡಿತ್ತು. ಬೆಳೆ ಕೈ ತಪ್ಪುವ ಆತಂಕದಲ್ಲಿದ್ದ ನಮಗೆ ಮಳೆಯಿಂದಾಗಿ ಬೆಳೆ ಕೈ ಸೇರುವ ವಿಶ್ವಾಸ ಮೂಡಿತ್ತು. ಆದರೆ, ಕಾಡಾನೆಗಳು ಸತತವಾಗಿ ಹೊಲಕ್ಕೆ ದಾಂಗುಡಿ ಇಟ್ಟಿದ್ದರಿಂದ ಬೆಳೆ ನಾಶವಾಗಿದೆ ಎಂದು ಸ್ಥಳೀಯ ರೈತರು ಅಳಲು ತೋಡಿಕೊಂಡರು.
ಹೊಲಗಳಲ್ಲಿರುವ ಬೆಳೆಯನ್ನು ಕಾಡಾನೆಗಳು ನಾಶ ಮಾಡುತ್ತಿರುವ ಕುರಿತು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಮಳೆ ಕಾರಣಕ್ಕಾಗಿ ಯಾವೊಬ್ಬ ಸಿಬ್ಬಂದಿಯೂ ಗ್ರಾಮಗಳತ್ತ ತಿರುಗಿ ನೋಡಿಲ್ಲ. ಇಲಾಖೆಯವರು ಇನ್ನಾದರೂ ನಮ್ಮ ಹೊಲವನ್ನು ಪರಿಶೀಲಿಸಿ, ಆಗಿರುವ ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.