ADVERTISEMENT

ಕನಕಪುರ: ಸಾವಯವ ಕೃಷಿಯಲ್ಲಿ ನಲ್ಲಹಳ್ಳಿ ಕೃಷಿಕನ ಸಾಧನೆ

ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಮೋಸವಿಲ್ಲ

ಬರಡನಹಳ್ಳಿ ಕೃಷ್ಣಮೂರ್ತಿ
Published 17 ಸೆಪ್ಟೆಂಬರ್ 2024, 5:12 IST
Last Updated 17 ಸೆಪ್ಟೆಂಬರ್ 2024, 5:12 IST
<div class="paragraphs"><p>ಸಾವಯವ ಕೃಷಿಯಲ್ಲಿ ಬೆಳೆದಿರುವ ಭತ್ತ</p></div>

ಸಾವಯವ ಕೃಷಿಯಲ್ಲಿ ಬೆಳೆದಿರುವ ಭತ್ತ

   

ಕನಕಪುರ: ಕೃಷಿ ಎನ್ನುವುದು ಲಾಭವೂ ಹೌದು, ನಷ್ಟವೂ ಹೌದು. ವ್ಯವಸ್ಥಿತವಾದ ರೀತಿಯಲ್ಲಿ ಕೃಷಿ ಮಾಡಿದರೆ ಖಂಡಿತವಾಗಿ ಭೂಮಿ ನಮ್ಮ ಕೈ ಹಿಡಿಯುತ್ತದೆ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ ತಾಲ್ಲೂಕಿನ ಉಯ್ಯಂಬಳ್ಳಿಯ ನಲ್ಲಹಳ್ಳಿ ಗ್ರಾಮದ ಎನ್.ಎಸ್. ಶಿವಕುಮಾರ್.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ, ದೊಡ್ಡ ಉದ್ಯೋಗ, ವ್ಯವಹಾರವನ್ನು ಮಾಡುವ ಶಕ್ತಿ ಇದ್ದರೂ ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಬೇಕೆಂದು ಭೂಮಿಯನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಶಿವಕುಮಾರ್.

ADVERTISEMENT

ನಲ್ಲಹಳ್ಳಿ ಗ್ರಾಮದ ಪಟೇಲ್ ಎನ್.ಎಸ್. ಶಿವಣ್ಣಗೌಡರ ಮಗ ಶಿವಕುಮಾರ್ ತಂದೆಯಿಂದ ದೊರೆತ 16 ಎಕರೆ ಜಮೀನಿನಲ್ಲಿ ವೈವಿಧ್ಯಮಯ ಕೃಷಿ ಮಾಡಿ ಯಶಸ್ಸು ಕಂಡ ರೈತ.

ತಮ್ಮ ಶಾಲಾ ದಿನಗಳಲ್ಲೇ ಕೃಷಿಯ ಬಗ್ಗೆ ಆಸಕ್ತಿ ಬೆಳಸಿಕೊಂಡ ಶಿವಕುಮಾರ್ ತಂದೆಯ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತಮಗಿದ್ದ 16 ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ರಾಗಿ, ಭತ್ತ ಹಾಗೂ ಇತರೆ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆಯುತ್ತಿದ್ದಾರೆ. ಮನೆ ಮುಂದೆ ಸಹ ವಿಶಾಲವಾದ ಜಾಗದಲ್ಲಿ ಎಲ್ಲಾ ರೀತಿಯ, ಎಲ್ಲಾ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ.

2000 ಅಡಿಕೆ ಮರ, 600 ತೆಂಗಿನ ಮರಗಳು, 100 ತೇಗದ ಮರ, 100 ರೋಸ್ ವುಡ್, 40 ಹೊನ್ನೆ ಮರ, 40 ಶ್ರೀಗಂಧ ಮರಗಳನ್ನು ತಮ್ಮ ಜಮೀನಿನಲ್ಲಿ ಬೆಳೆಸಿದ್ದಾರೆ, ಅಡಕೆ ಮತ್ತು ತೆಂಗಿನ ಮರಗಳು ಫಸಲು ಕೊಡುತ್ತಿವೆ. ಹೊನ್ನೆ, ತೇಗ, ರೋಸ್ ವುಡ್ ಮರಗಳು ಕಟಾವಿಗೆ ಬಂದಿವೆ.

ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಬೆಳೆದ ಬೆಳೆಗಳು ವಿಷಯುಕ್ತವಾಗುತ್ತಿವೆ, ಫಲವತ್ತಾದ ಭೂಮಿ ಬರಡಾಗುತ್ತಿದೆ. ಇದನ್ನು ಮನಗಂಡು ತಮ್ಮ ಹದಿನಾರು ಎಕರೆ ಜಮೀನಿಗೆ ರಸಗೊಬ್ಬರ ಬಳಸದೆ ಸಾವಯವ ಕೃಷಿಯನ್ನೇ ನಂಬಿದ್ದಾರೆ. ಸಾವಯವ ಕೃಷಿ ಮನುಷ್ಯನಿಗೂ ಒಳ್ಳೆಯದು, ಭೂಮಿಗೂ ಒಳ್ಳೆಯದು ಎನ್ನುವ ಶಿವಕುಮಾರ್ ಅವರ ತೋಟ ಅಡಿಕೆ–ತೆಂಗು, ಹೊನ್ನೆ, ತೇಗ, ರೋಸ್ ವುಡ್ ಮರಗಳಿಂದ ನಳನಳಿಸುತ್ತದೆ.

ಜಮೀನಿಗೆ ಹಾರೋಬೆಲೆ ಜಲಾಶಯದಿಂದ ನಾಲೆಯ ಮೂಲಕ ನೀರಿನ ವ್ಯವಸ್ಥೆಯೂ ಇದೆ. ಆದರೆ, ಅವರು ಬೋರ್‌ವೆಲ್‌ ನೀರನ್ನೇ ಜಮೀನಿಗೆ ಬಳಸುತ್ತಿದ್ದಾರೆ. ಕೂಲಿ ಕಾರ್ಮಿಕರ ಸಮಸ್ಯೆ ಇರುವುದರಿಂದ ತೋಟದಲ್ಲಿ ಸಾಧ್ಯವಾದಷ್ಟು ಕೆಲಸಗಳಿಗೆ ಮಷೀನುಗಳನ್ನೇ ಅವಲಂಭಿಸಿದ್ದಾರೆ. ಸ್ಪ್ರಿಂಕ್ಲರ್ ಮತ್ತು ಡ್ರಿಪ್ ಇರಿಗೇಶನ್ ಮಾಡಿದ್ದಾರೆ. ಟ್ರ್ಯಾಕ್ಟರ್ ಮತ್ತು ಯಂತ್ರಗಳನ್ನು ಬಳಸಿ ಉಳುಮೆ ಮಾಡುವುದು, ಕಳೆ ತೆಗಿಯುವ ಕೆಲಸವನ್ನು ಸ್ವತಹ ಶಿವಕುಮಾರ್ ಅವರೇ ಮಾಡಿಕೊಳ್ಳುತ್ತಾರೆ.

ತೆಂಗಿನ ಮರಗಳಿಗೆ ನುಸಿ ರೋಗ ಬರುವುದಕ್ಕೂ ಮೊದಲು ವಾರ್ಷಿಕವಾಗಿ 10 ಲಕ್ಷದಷ್ಟು ವರಮರ ಬರುತ್ತಿತ್ತು, ನುಸಿ ರೋಗ ಬಂದಮೇಲೆ ಮರಗಳು ಸೊರಗುತ್ತಿದ್ದು ಬಸಲು ಕಡಿಮೆಯಾಗಿದೆ, ಈಗ ಅಡಿಕೆ ಮತ್ತು ತೆಂಗು ಎರಡರಿಂದ ವಾರ್ಷಿಕವಾಗಿ ₹ 5–6 ಲಕ್ಷದಷ್ಟು ವರಮಾನ ಬರುತ್ತಿದೆ.

ಭತ್ತ ಮತ್ತು ರಾಗಿ ಬೆಳೆಯನ್ನು ಜೀವಾಮೃತ ಮತ್ತು ಕೊಟ್ಟಿಗೆ ಗೊಬ್ಬರ ಬಳಸಿ ಬೆಳೆಯಲಾಗುತ್ತಿದೆ, ಎಲ್ಲಾ ರೀತಿಯ ಹಣ್ಣಿನ ಗಿಡ ಬೆಳೆಸಿರುವುದರಿಂದ ತಮ್ಮ ಮನೆಗಷ್ಟೇ ಅಲ್ಲದೆ, ನೆಂಟರಿಷ್ಟರಿಗೆ, ಮನೆಗೆ ಬರುವ ಅತಿಥಿಗಳಿಗೆ ಸಂತೃಪ್ತಿಯಾಗುವಷ್ಟು ಹಣ್ಣುಗಳು ಸಿಗುತ್ತಿವೆ.

ಹಣ್ಣಿನ ತೋಟ ಮತ್ತು ಅಡಿಕೆ–ತೆಂಗಿನ ತೋಟವು ಪ್ರಾಣಿ ಪಕ್ಷಿಗಳಿಗೂ ಆಹಾರದ ಕೇಂದ್ರ ಸ್ಥಾನವಾಗಿದ್ದು ಎಲ್ಲಾ ಜಾತಿಯ ಪಕ್ಷಿಗಳು ಇಲ್ಲಿ ಆಶ್ರಯ ಪಡೆದಿವೆ, ಮನೆ ಅಂಗಳ ಮತ್ತು ತೋಟವು ಪಕ್ಷಿಗಳಿಂದ ಸದಾ ಗಿಜಗುಡುತ್ತಿರುತ್ತದೆ.

ಹೈನುಗಾರಿಕೆ

ಕೃಷಿಯ ಜೊತೆ–ಜೊತೆಗೆ ನಾಟಿ ಕೋಳಿ, ನಾಟಿ ಹಸುಗಳನ್ನು ಕೂಡ ಸಾಕುತ್ತಿದ್ದಾರೆ ಶಿವಕುಮಾರ್. ಹಾಲು, ಮೊಸರು, ತುಪ್ಪ, ಕೋಳಿ ಮಾಂಸ, ಕೋಳಿ ಮೊಟ್ಟೆಗೆ ಕೊರತೆ ಇಲ್ಲ. 

ಕೋಟ್: ಹಿಂದಿನ ಕಾಲದಲ್ಲಿ ಕೃಷಿಯೇ ಎಲ್ಲರ ಬದುಕಾಗಿತ್ತು, ಸಣ್ಣ ಸಣ್ಣ ಭೂಮಿ ಇದ್ದವರೂ ಅದನ್ನೇ ನಂಬಿ ಬದುಕು ಸಾಗಿಸುತ್ತಿದ್ದರು. ಈಗ ಭೂಮಿಯನ್ನು ನಂಬಿ ಬದುಕುವವರ ಸಂಖ್ಯೆ ಕಡಿಮೆಯಾಗಿದೆ. ಸರಿಯಾದ ಮಳೆ ಇಲ್ಲ, ಕೃಷಿ ಕೂಲಿಗೆ ಜನ ಸಿಗುತ್ತಿಲ್ಲ. ರಾಸಾಯನಿಕ ಬಳಸಿ ಭೂಮಿಯ ಫಲವತ್ತತೆಯನ್ನೂ ನಾವೇ ನಾಶ ಮಾಡಿದ್ದೇವೆ. ಕೃಷಿಯ ಬಗ್ಗೆ ಜನರಿಗೆ ಆಶಕ್ತಿಯೂ ಕಡಿಮೆಯಾಗಿದೆ. ನಿರ್ಲಕ್ಷ್ಯ ಮತ್ತು ತತ್ಸಾರದಿಂದ ಕೃಷಿ ಮಾಡುವುದರಿಂದ ನಷ್ಟವಾಗುತ್ತಿದೆ. ಆದರೆ, ಶ್ರದ್ಧೆಯಿಂದ ಯೋಜನಾ ಬದ್ಧವಾಗಿ ಕೃಷಿ ಮಾಡಿದರೆ ಖಂಡಿತವಾಗಿಯೂ ಲಾಭವಾಗುತ್ತದೆ. ನಾವು ಅದನ್ನು ಗೌರವದಿಂದ ಕಂಡರೆ ಭೂಮಿ ನಮ್ಮನ್ನು ಪೊರೆಯುತ್ತದೆ.  ಕೃಷಿಯಿದ ನನಗೆ ಲಾಭವೂ ಇದೆ, ಖುಷಿಯೂ ಇದೆ.

ತೆಂಗು ಮತ್ತು ಅಡಿಕೆಯ ತೋಟ
ಮನೆಯ ಮುಂದೆ ಬೆಳೆಸಿರುವ ಹಣ್ಣಿನ ಗಿಡಗಳು
ಮನೆ ಮುಂದೆ ಬೆಳೆಸಿರುವ ವಿವಿಧ ಬಗೆಯ ಹಣ್ಣಿನ ಗಿಡ

ಎನ್.ಎಸ್.ಶಿವಕುಮಾರ್, ನಲ್ಲಹಳ್ಳಿ ಗ್ರಾಮದ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.