ADVERTISEMENT

ಕನಕಪುರಕ್ಕೆ ಅನುದಾನ ತರುವ ಕೆಲಸವಾಗಲಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 5:55 IST
Last Updated 27 ಸೆಪ್ಟೆಂಬರ್ 2024, 5:55 IST
ಕನಕಪುರ ನಗರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಉಪಾಧ್ಯಕ್ಷ ಸೈಯದ್ ಸಾಧಿಕ್, ಕಮಿಷನರ್ ಮಹದೇವ್ ಉಪಸ್ಥಿತರಿದ್ದರು
ಕನಕಪುರ ನಗರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಉಪಾಧ್ಯಕ್ಷ ಸೈಯದ್ ಸಾಧಿಕ್, ಕಮಿಷನರ್ ಮಹದೇವ್ ಉಪಸ್ಥಿತರಿದ್ದರು   

ಕನಕಪುರ: ಚನ್ನಪಟ್ಟಣ ಕ್ಷೇತ್ರಕ್ಕೆ ಸುಮಾರು ₹ 500 ಕೋಟಿಯಷ್ಟು ಅನುದಾನ ನೀಡಿದ್ದಾರೆ. ಇದೇ ಕ್ಷೇತ್ರದವರಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕನಕಪುರ ಕ್ಷೇತ್ರಕ್ಕೆ ಅನುದಾನ ಕೊಡುವಂತೆ ಒಕ್ಕೋರಲಿನಿಂದ ಒತ್ತಾಯಿಸಬೇಕೆಂದು ಸದಸ್ಯರಾದ ಜಯರಾಮ ಮತ್ತು ಸ್ಟುಡಿಯೋ ಚಂದ್ರು ತಿಳಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕನಕಪುರ ಪಟ್ಟಣದ ಅಭಿವೃದ್ಧಿ ಸೇರಿದಂತೆ ಕುಂದು ಕೊರತೆ, ಸರ್ಕಾರದಿಂದ ಅನುದಾನ ತರುವ ವಿಷಯದ ಬಗ್ಗೆ ಚರ್ಚೆ ನಡೆಯಿತು.

ನಗರಸಭೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಕಳೆದೊಂದು ವರ್ಷದಿಂದ ನಗರಸಭೆಗೆ ಯಾವುದೇ ಅನುದಾನ ಬಂದಿಲ್ಲ. ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕನಕಪುರ ಕ್ಷೇತ್ರಕ್ಕೂ ಅನುದಾನ ಕೊಡುವಂತೆ ಸರ್ವ ಸದಸ್ಯರು ಒತ್ತಾಯಿಸಬೇಕೆಂದು ಸದಸ್ಯರು ಆಗ್ರಹಿಸಿದರು.

ADVERTISEMENT

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ನಿಯಂತ್ರಿಸಲು ಕೋರಲಾಗಿತ್ತು. ನಗರಸಭೆಯಿಂದ ಸಂತಾನ ಹರಣ ಚಿಕಿತ್ಸೆಯನ್ನು ಮಾಡಿರುವುದಾಗಿ ತಿಳಿಸಿದ್ದಾರೆ. ಆದರೂ ಬೀದಿ ನಾಯಿಗಳ ನಿಯಂತ್ರಣವಾಗಿಲ್ಲ ಎಂದು ಸದಸ್ಯರು ದೂರಿದರು.

ಸದಸ್ಯ ವಿಜಯ್ ಕುಮಾರ್, ವೆಂಕಟೇಶ್ ಮಾತನಾಡಿ, ನಗರಸಭೆಯಿಂದ ಅನುಮತಿ ಪಡೆಯದೆ ಮನೆಗಳಿಗೆ ಗ್ಯಾಸ್ ಪೈಪ್ ಲೈನ್ ಅಳವಡಿಸಲಾಗುತ್ತಿದೆ, ಗುಣಮಟ್ಟವಿಲ್ಲದ ಕಳಪೆ ಪೈಪುಗಳನ್ನು ಅಳವಡಿಸುತ್ತಿದ್ದು, ಮುಂದೆ ಗ್ಯಾಸ್ ಸೋರಿಕೆಯಿಂದ ಸಮಸ್ಯೆಗಳಾಗಬಹುದು. ಅದಕ್ಕಾಗಿ ನಗರಸಭೆಯಲ್ಲಿ ಭದ್ರತಾ ಠೇವಣಿ ಇಟ್ಟು ಕಾಮಗಾರಿ ಮಾಡಲು ಅವಕಾಶ ನೀಡಬೇಕೆಂದು ತಿಳಿಸಿದರು.

ನಗರದಲ್ಲಿ ಪಾದಾಚಾರಿ ಓಡಾಟಕ್ಕೆ ಬಿಟ್ಟಿದ್ದ ಜಾಗವನ್ನು ಪುಟ್ಬಾತ್ ವ್ಯಾಪಾರಿಗಳು ಒತ್ತುವರಿ ಮಾಡಿ ಅಂಗಡಿ ಇಟ್ಟು ಜನರು ಓಡಾಡದಂತೆ ಮಾಡಿದ್ದಾರೆ. ನಗರ ಸಭೆಯವರು ಮತ್ತು ಪೊಲೀಸರು ಒತ್ತುವರಿ ಜಾಗವನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಸದಸ್ಯ ರಾಮದುರ್ಗಯ್ಯ ಮಾತನಾಡಿ, ಪೌರಕಾರ್ಮಿಕರಿಗಾಗಿ ನಗರಸಭೆಯಿಂದ ನಿರ್ಮಾಣ ಮಾಡಿರುವ ಮನೆಗಳನ್ನು 3 ವರ್ಷ ಕಳೆದರೂ ಹಸ್ತಾಂತರ ಮಾಡಿಲ್ಲ, ಬಳಕೆ ಮಾಡುವ ಮುನ್ನವೇ ಕಟ್ಟಡಗಳು ಹಾಳಾಗುತ್ತಿವೆ, ಮೊದಲು ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಕುರುಪೇಟೆ ವಾರ್ಡಿನಲ್ಲಿ ಎರಡು ಚರಂಡಿ ಬಿಟ್ಟರೆ ಮತ್ತೆ ಯಾವುದೇ ಕಾಮಗಾರಿಗಳನ್ನು ಮಾಡಿಲ್ಲ. ರಸ್ತೆಗೆ ಜಲ್ಲಿ ಸುರಿದು ತಿಂಗಳು ಕಳೆದಿದೆ, ಆ ರಸ್ತೆಯಲ್ಲಿ ಜನರು ಓಡಾಡಲು ಕಷ್ಟ ಪಡುತ್ತಿದ್ದಾರೆ. ನೀರಿನ ಸಮಸ್ಯೆ ಇದ್ದು ನಗರಸಭೆ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ಕುರುಪೇಟೆ ವಾರ್ಡಗಳನ್ನು ನಿರ್ಲಕ್ಷ ಮಾಡಲಾಗಿದೆ, ಅಲ್ಲಿಯೂ ರಸ್ತೆ ಚರಂಡಿ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಸಭೆಯಲ್ಲಿ ಅನೇಕರು ದೂರಿದರು.

ನಗರಸಭೆ ಕಮಿಷನರ್ ಮಹದೇವ ಮಾತನಾಡಿ, ಕಟ್ಟಿರುವ ಮನೆಗಳ ಹಸ್ತಾಂತರಕ್ಕೆ ಆಶ್ರಯ ಸಮಿತಿಲ್ಲಿರುವ ಡಿ.ಕೆ.ಸುರೇಶ್ ಅವರ ಬಳಿ ಮಾತನಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ನಗರ ಸಭೆಯ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸೈಯದ್ ಸಾಧಿಕ್ ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.