ಕನಕಪುರ: ಸುಗಮ ಆಡಳಿತ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ಕಚೇರಿಗಳು ಒಂದೇ ಕಡೆ ಇರಬೇಕು ಎಂಬ ಆಶಯದಿಂದ, ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಸೌಧವನ್ನು ನಿರ್ಮಿಸಲಾಗಿದೆ. ಆದರೆ, ಕೆಲ ಇಲಾಖೆಗಳ ಕಚೇರಿಗಳು ಆಡಳಿತ ಸೌಧದಲ್ಲಿ ಇನ್ನೂ ನೆಲೆಯೂರಿಲ್ಲ. ಇದರಿಂದಾಗಿ, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಬೇರೆಡೆಗೆ ಅಲೆಯಬೇಕಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿದ್ದ ಹಳೆ ತಾಲ್ಲೂಕು ಕಚೇರಿ ತುಂಬಾ ಕಿರಿದಾಗಿತ್ತು. ಇಲಾಖೆಗಳ ಕಚೇರಿಗಳು ಒಂದೊಂದು ಮೂಲೆಯಲ್ಲಿವೆ. ಇದನ್ನು ಅರಿತ ಸ್ಥಳೀಯ ಶಾಸಕರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಎಲ್ಲಾ ಕಚೇರಿಗಳನ್ನು ಒಂದೇ ಕಡೆ ತಂದು ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ಉಪ ನೋಂದಣಾಧಿಕಾರಿ ಕಚೇರಿ, ಅಬಕಾರಿ ಇಲಾಖೆ, ಸರ್ವೇ ಇಲಾಖೆ, ಸರ್ಕಾರಿ ಶಾಲೆ, ಬಯಲು ರಂಗ ಮಂದಿರ, ಉಪ ಖಜಾನೆ ಇಲಾಖೆಗಳ ಕಚೇರಿಗಳಿದ್ದ ಕಟ್ಟಡದಲ್ಲಿ ಹೊಸದಾದ ಹಾಗೂ ಸುಸಜ್ಜಿತವಾದ ಮೂರು ಅಂತಸ್ತಿನ ತಾಲ್ಲೂಕು ಆಡಳಿತ ಸೌಧ ತಲೆ ಎತ್ತಿ ನಿಂತಿದೆ. 2018ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಕಟ್ಟಡ ಉದ್ಘಾಟಿಸಿದ್ದರು.
ಬಾರದ ಕಚೇರಿಗಳು: ಹೊಸದಾಗಿ ನಿರ್ಮಿಸಿರುವ ಆಡಳಿತ ಸೌಧಕ್ಕೆ ಉಪ ನೋಂದಣಾಧಿಕಾರಿ ಕಚೇರಿ ಮತ್ತು ಅಬಕಾರಿ ಕಚೇರಿಗೆ ಸ್ಥಳಾಂತರವಾಗದೆ ಇಂದಿಗೂ ಕಿರಿದಾದ ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲೂ ನೋಂದಣಾಧಿಕಾರಿ ಕಚೇರಿಯನ್ನು ಆಡಳಿತ ಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನೆ ಮತ್ತು ಹೋರಾಟಗಳು ಸಹ ನಡೆದಿವೆ. ಆದರೂ ಪ್ರಯೋಜನವಾಗಿಲ್ಲ.
ಮೂರು ಅಂತಸ್ತಿನ ಆಡಳಿತ ಸೌಧದ ಎರಡನೇ ಅಂತಸ್ತಿನಲ್ಲಿ ಈಗಲೂ ಹಲುವು ಕೊಠಡಿಗಳು ಖಾಲಿ ಇವೆ. ಆದರೂ, ಕೆಲ ಕಚೇರಿಗಳು ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಾ, ಸರ್ಕಾರದ ಬೊಕ್ಕಸಕ್ಕೆ ಭಾರವಾಗಿವೆ.
ನಿರ್ವಹಣೆ ಕೊರತೆ: ಈಗಾಗಲೇ ಹಲವು ಕಚೇರಿಗಳಿಗಳಿರುವ ಆಡಳಿತ ಸೌಧವು ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದೆ. ಕಟ್ಟಡದಲ್ಲಿ ಸ್ವಚ್ಛತೆ ಸಮಸ್ಯೆ ಇದೆ. ನಿತ್ಯ ವಿವಿಧ ಕೆಲಸ–ಕಾರ್ಯಗಳಿಗಾಗಿ ಕಚೇರಿಗಳಿಗೆ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಗಳ ನಿರ್ವಹಣೆ ಸರಿಯಾಗಿಲ್ಲದಿರುವುದರಿಂದ ಗಬ್ಬೆದ್ದು ನಾರುತ್ತಿವೆ. ದೊಡ್ಡ ಕಟ್ಟಡವಿದ್ದರೂ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಇದರಿಂದಾಗಿ ಅಮೂಲ್ಯ ದಾಖಲೆಗಳಿಗೆ ರಕ್ಷಣೆ ಇಲ್ಲವಾಗಿದೆ.
ಕಟ್ಟಡದ ಬಳಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ಇಲ್ಲದಿರುವುದರಿಂದ, ಕಚೇರಿ ಮುಂಭಾಗದಲ್ಲೇ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಬೇಕಾಗಿದೆ. ಇದರಿಂದಾಗಿ ಎಂ.ಜಿ. ರಸ್ತೆಯುದ್ಧಕ್ಕೂ ಹಾಗೂ ಕಚೇರಿಯೊಳಗೆ ಹೋಗುವ ಮುಖ್ಯದ್ವಾರದ ಉದ್ದಕ್ಕೂ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಮತ್ತು ಕಚೇರಿಗೆ ಹೋಗುವವರಿಗೆ ತೊಂದರೆಯಾಗುತ್ತಿದೆ.
ಮೂರು ಅಂತಸ್ತಿಗೂ ಒಂದೇ ಕಡೆ ವಿದ್ಯುತ್ ಸಂಪರ್ಕ ನೀಡಿ ಮೀಟರ್ ಅಳವಡಿಸಿರುವುದರಿಂದ, ಕೆಲ ಇಲಾಖೆಯವರು ವಿದ್ಯುತ್ ಬಿಲ್ ಬಾಕಿ ಉಳಿಸಿದರೆ ಇಡೀ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂನವರು ಕಡಿತಗೊಳಿಸುತ್ತಾರೆ. ಆಗಾಗ ಇಂತಹ ಸಮಸ್ಯೆ ಮಾಮೂಲಿಯಾಗಿದೆ. ಅಂತಹ ಸಂದರ್ಭದಲ್ಲಿ ಬಳಕೆ ಮಾಡಲು ಜನರೇಟರ್ ಇದ್ದರೂ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ.
ಲಿಫ್ಟ್ ಆಪರೇಟರ್ ಇಲ್ಲ: ಕಟ್ಟಡದ ಮೂರು ಅಂತಸ್ತಿಗೆ ಓಡಾಡಲು ಲಿಫ್ಟ್ ಅಳವಡಿಸಲಾಗಿದೆ. ಆದರೆ, ಅದಕ್ಕೆ ಆಪರೇಟರ್ ಇಲ್ಲ. ಇದರಿಂದಾಗಿ ಲಿಫ್ಟ್ ಆಪರೇಟ್ ಮಾಡಲು ತಿಳಿಯದವರು ಮೆಟ್ಟಿಲುಗಳನ್ನೇ ಹತ್ತಿಕೊಂಡು ಓಡಾಡುತ್ತಾರೆ. ಕಟ್ಟಡದ ಮೇಲ್ವಿಚಾರಣೆಯ ಹೊಣೆ ತಹಶೀಲ್ದಾರ್ ಅವರದ್ದು. ಅದಕ್ಕಾಗಿ, ಕಟ್ಟಡದಲ್ಲಿರುವ ವಿವಿಧ ಇಲಾಖೆಗಳಿಂದ ಕಟ್ಟಡ ನಿರ್ವಹಣೆಗೆಂದು ನಿರ್ವಹಣಾ ವೆಚ್ಚವನ್ನು ಪಡೆಯಲಾಗುತ್ತಿದೆ. ಆದರೂ ಕಟ್ಟಡದ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳಿವೆ ಎನ್ನುತ್ತಾರೆ ಸಾರ್ವಜನಿಕರು.
- 2018ರಲ್ಲಿ ಉದ್ಘಾಟನೆಯಾದ ಆಡಳಿತ ಸೌಧ ಹಳೆ ಕಟ್ಟಡ ಕೆಡವಿ ಹೊಸದಾಗಿ ಕಟ್ಟಡ ನಿರ್ಮಾಣ ನಿರ್ವಹಣೆ ಇಲ್ಲದ ಶೌಚಾಲಯ, ಕೈ ಕೊಡುವ ವಿದ್ಯುತ್
ತಾಲೂಕು ಆಡಳಿತ ಸೌಧದಲ್ಲಿ ಎಲ್ಲವೂ ಚೆನ್ನಾಗಿದೆ. ಯಾವುದೇ ಸಮಸ್ಯೆಗಳಿಲ್ಲ. ಯಾವ ಕೊಠಡಿಗಳು ಖಾಲಿ ಇಲ್ಲ. ಸಮಸ್ಯೆಯಾಗಿದೆ ಎಂದು ಯಾರು ಬಂದು ನಮಗೆ ದೂರು ನೀಡಿಲ್ಲ– ಡಾ. ಸ್ಮಿತಾ ರಾಮ್ ತಹಶೀಲ್ದಾರ್ ಕನಕಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.