ಕನಕಪುರ: ವಂಶವೃಕ್ಷ ಮಾಡಿಸಲು ಸಂಬಂಧಪಟ್ಟ ಎಲ್ಲರ ಆಧಾರ್ ಕಾರ್ಡ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸಹಿ ಕೇಳಿರುವುದು ಅವೈಜ್ಞಾನಿಕವಾಗಿದೆ ಎಂದು ರೈತರ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಆರೋಪಿಸಿದರು.
ನಗರದ ರೈತ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ರೈತ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಜಮೀನು ಮಾರಾಟ, ಫೌತಿಖಾತೆ, ಆಸ್ತಿ ವಿಭಾಗ ಸೇರಿದಂತೆ ಹಲವು ಸಂದರ್ಭಗಳಲ್ಲಿ ರೈತರಿಗೆ ವಂಶವೃಕ್ಷದ ಅವಶ್ಯಕತೆ ಇದೆ. ವಂಶವೃಕ್ಷ ಮಾಡಿಸಬೇಕಾದರೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಕೇಳಲಾಗಿದೆ. ಇದರಿಂದ ಕುಟುಂಬಗಳಲ್ಲಿ ಆಸ್ತಿ ವಿವಾದ ಉಂಟಾಗುತ್ತಿದ್ದು, ಪ್ರಕರಣ ದಾಖಲಾಗಿ ಹೆಣ್ಣು ಮಕ್ಕಳು, ಅಣ್ಣ ತಮ್ಮಂದಿರು, ಸೋದರ ಸಂಬಂಧಿಗಳಲ್ಲಿ ವೈಷಮ್ಯ ಉಂಟಾಗಿದೆ ಎಂದು ಹೇಳಿದರು.
ವಂಶವೃಕ್ಷ ಮಾಡಿಸಲು, ಮಹಜರಿಗೆ ಗ್ರಾಮ ಪಂಚಾಯಿತಿ ಸದಸ್ಯರ ಸಹಿ ಅವಶ್ಯವೆಂದು ಕಾನೂನು ರೂಪಿಸಲಾಗಿದೆ. ಗ್ರಾಮಗಳಲ್ಲಿ ನಡೆಯುವ ಚುನಾವಣೆ ಸಂದರ್ಭದಲ್ಲಿ ಆ ಪಕ್ಷ, ಈ ಪಕ್ಷವೆಂದು ಗುಂಪುಗಾರಿಕೆ ಮಾಡಿಕೊಂಡು ಪರಸ್ಪರ ವಿರೋಧಿಗಳಾಗಿರುತ್ತಾರೆ.
ಚುನಾವಣೆಯಲ್ಲಿ ಗೆದ್ದಂತಹ ಗ್ರಾಮ ಪಂಚಾಯಿತಿ ಸದಸ್ಯರು ಮತ್ತೊಂದು ಗುಂಪಿನ ಅಥವಾ ಮತ್ತೊಂದು ಪಕ್ಷದ ಪರವಾಗಿ ಕೆಲಸ ಮಾಡಿದಂತಹ ವ್ಯಕ್ತಿಗಳ ಮಹಜರಿಗೆ ಸಹಿ ಹಾಕಲು ವಿರೋಧ ಮಾಡುತ್ತಾರೆ. ಆಗಲೂ ವಂಶವೃಕ್ಷ ಮಾಡಿಸಿಕೊಳ್ಳಲು ತೊಂದರೆ ಆಗುತ್ತದೆ ಎಂದು ದೂರಿದರು.
ವಂಶವೃಕ್ಷ ಪಡೆಯಲು ಸರ್ಕಾರ ಇಂತಹ ಅವೈಜ್ಞಾನಿಕ ಕಾನೂನು ರೂಪಿಸಿರುವುದು ದುರದೃಷ್ಟಕರ, ಈ ಕೂಡಲೇ ಸರ್ಕಾರವು ವಂಶವೃಕ್ಷ ಮಾಡಲು ಕಡ್ಡಾಯವಾಗಿ ಎಲ್ಲರ ಆಧಾರ್ ಕಾರ್ಡ್ ಕೇಳುವ ಬದಲು ಅರ್ಜಿದಾರರೊಬ್ಬರ ಆಧಾರ್ ಕಾರ್ಡ್ ಮಾತ್ರ ಕೇಳಬೇಕೆಂದು ತಿಳಿಸಿದರು.
ಅದೇ ರೀತಿ ವಂಶವೃಕ್ಷ ಮಹಜರಿಗೆ ಗ್ರಾಮ ಪಂಚಾಯಿತಿ ಸದಸ್ಯರ ಸಹಿ ಕೇಳುವುದನ್ನು ಕೈ ಬಿಡಬೇಕು. ಅದರ ಬದಲಾಗಿ ಗ್ರಾಮ ಸೇವಕ, ಗ್ರಾಮ ಲೆಕ್ಕಗರು ಗ್ರಾಮದಲ್ಲಿಯೇ ಇರುತ್ತಾರೆ. ಅವರಿಂದ ಮಹಜರಿಗೆ ಸಹಿ ಪಡೆಯಬೇಕೆಂದು ಹೇಳಿದರು.
ಸರ್ಕಾರವು ಈ ಕೂಡಲೇ ಈ ಕಾನೂನನ್ನು ಹಿಂಪಡೆಯಬೇಕು. ಇಲ್ಲದಿದ್ದರ ರೈತ ಸಂಘದಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ರೈತ ಸಂಘದ ಸಭೆಯಲ್ಲಿ ಹಾರೋಹಳ್ಳಿ ತಾಲ್ಲೂಕು ಅಧ್ಯಕ್ಷ ಬಸವರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್, ಜಿಲ್ಲಾ ಕಾರ್ಯದರ್ಶಿ ಶಿವರಾಜು, ಯುವ ಘಟಕದ ಅಧ್ಯಕ್ಷ ರವಿಕುಮಾರ್, ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಕಾನೂನು ಸಲಹೆಗಾರ ಕುಮಾರಸ್ವಾಮಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.