ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಗನಹಳ್ಳಿ ಆಶ್ರಯನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ, ಸ್ಥಳೀಯ ರೈತರಿಬ್ಬರು ತಂತಿ ಬೇಲಿ ಹಾಕಿದ್ದಾರೆ. ಇದರಿಂದಾಗಿ ಆಶ್ರಯನಗರ ನಿವಾಸಿಗಳು ಹೊರಗೆ ಬರಲು ಮತ್ತು ಒಳಕ್ಕೆ ಹೋಗಲು ರಸ್ತೆ ಇಲ್ಲದೆ ಪರದಾಡುತ್ತಿದ್ದಾರೆ.
1996ರಲ್ಲಿ ಆಶ್ರಯ ಯೋಜನೆಯಡಿ ರೈತರಿಂದ 2 ಎಕರೆ ಜಾಗವನ್ನು ಖರೀದಿಸಿ, ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಯ ನಗರ ನಿರ್ಮಾಣ ಮಾಡಿ 52 ನಿರಾಶ್ರಿತರಿಗೆ ನಿವೇಶನಗಳನ್ನು ಹಂಚಲಾಗಿತ್ತು.
ನಿವೇಶನ ಪಡೆದವರು ನಿರಾಶ್ರಿತರು ಇಲ್ಲಿ ಮನೆಗಳನ್ನು ಕಟ್ಟಿಕೊಂಡು 30 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆಗಳಿಗೆ ಕಾಂಕ್ರೀಟ್, ಚರಂಡಿ ಎಲ್ಲಾ ಮೂಲಸೌಕರ್ಯಗಳನ್ನು ಅವರಿಗೆ ಕಲ್ಪಿಸಿ ಕೊಡಲಾಗಿದೆ.
ಆದರೆ, ಆಶ್ರಯನಗರಕ್ಕೆ ಮುಖ್ಯರಸ್ತೆಯಿಂದ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆ ಬಂದ್ ಆಗಿದೆ. ರಸ್ತೆ ಇದ್ದ ಜಾಗಕ್ಕೆ ಪಕ್ಕದ ಜಮೀನಿನ ರೈತರಿಬ್ಬರು ತಂತಿ ಬೇಲಿ ಮತ್ತು ಕಾಂಕ್ರೀಟ್ ಸ್ಲ್ಯಾಬ್ ವಾಲ್ ನಿರ್ಮಿಸಿದ್ದಾರೆ. ಇದರಿಂದಾಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲವಾಗಿದೆ.
ಸಂದಿಯೇ ಓಡಾಟ: ‘ಆಶ್ರಯನಗರದ ರಸ್ತೆ ಸಮಸ್ಯೆಯು 6 ತಿಂಗಳಿಂದ ಉದ್ಭವವಾಗಿದೆ. ಗ್ರಾಮದಲ್ಲಿ ವಾಸ ಮಾಡುತ್ತಿದ್ದ ಜನರು ಪಕ್ಕದ ಜಮೀನಿನ ತಂತಿಬೆಲೆಯ ಸಂಧಿಯಲ್ಲಿ ತೂರಿಕೊಂಡು ಓಡಾಡುತ್ತಿದ್ದಾರೆ. ಇಲ್ಲಿ 20ಕ್ಕೂ ಹೆಚ್ಚು ಮಕ್ಕಳು ಅಂಗನವಾಡಿ, ಶಾಲೆ ಮತ್ತು ಕಾಲೇಜಿಗೆಂದು ಹೋಗುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ತಂತಿ ಬೇಲಿ ಹಾಕಿರುವುದರಿಂದ ಜನ ಓಡಾಡಲಾಗದ ಸ್ಥಿತಿ ಇದೆ’ ಎಂದು ಸ್ಥಳೀಯರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.
‘ರಸ್ತೆ ಸಮಸ್ಯೆ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು, ರಾಜಕೀಯ ಮುಖಂಡರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆಶ್ರಯ ಯೋಜನೆಗೆ ರೈತರಿಂದ ಜಮೀನು ಖರೀದಿ ಮಾಡಿದಾಗ ಆಶ್ರಯನಗರಕ್ಕೆ ಹೋಗಲು 20 ಅಡಿ ಜಾಗವನ್ನು ರಸ್ತೆಗೆ ಕಾಯ್ದಿರಿಸಲಾಗಿದೆ. ಆದರೆ ರಸ್ತೆ ಸಂಪರ್ಕವಿದ್ದಂತಹ ಜಾಗವು ತಮಗೆ ಸೇರಿದ್ದು ಎಂದು ರಸ್ತೆ ಮುಂಭಾಗದ ಜಮೀನಿನ ಇಬ್ಬರು ರೈತರು, ರಸ್ತೆ ಜಾಗವನ್ನು ಅಳತೆ ಮಾಡಿಸಿ ಅಲ್ಲಿ ತಂತಿ ಬೇಲಿ ನಿರ್ಮಿಸಿಕೊಂಡಿದ್ದಾರೆ’ ಎಂದರು.
‘ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಮುಚ್ಚಿರುವ ರಸ್ತೆಯನ್ನು ಬಿಡಿಸಿ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವಂತಹ ಪ್ರಮುಖ ರಸ್ತೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವಂತಿಲ್ಲ. ಆ ಜಾಗ ಖಾಸಗಿಯವರದ್ದಾದರೂ ಜನರ ಓಡಾಟಕ್ಕೆ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಡಬೇಕು. ಆಶ್ರಯನಗರದ ಸಮಸ್ಯೆ ಗಮನಿಸಿ ಬಗೆಹರಿಸಲಾಗುವುದುಬೈರಪ್ಪ ಕಾರ್ಯನಿರ್ವಾಹಕ ಅಧಿಕಾರಿ ಕನಕಪುರ ತಾಲ್ಲೂಕು ಪಂಚಾಯಿತಿ
‘ಪೋಡಿ ರದ್ದಾದರೆ ಸಮಸ್ಯೆಗೆ ಪರಿಹಾರ’
‘ಆಶ್ರಯ ನಗರಕ್ಕೆ 2 ಎಕರೆ ಜಮೀನನ್ನು ಸರ್ವೆ ನಂಬರ್ 128ರಲ್ಲಿ ಖರೀದಿ ಮಾಡಿದಾಗ ರಸ್ತೆಗಾಗಿಯೇ 20 ಅಡಿ ಜಾಗವನ್ನು ಮೀಸಲಿರಿಸಲಾಗಿದೆ. ನಂತರದಲ್ಲಿ ಜಮೀನು ಖರೀದಿಸಿದ್ದ ಇಬ್ಬರು ರೈತರು ಪೋಡಿ ಮಾಡಿಸಿದಾಗ ರಸ್ತೆ ಜಾಗವನ್ನು ಕೈ ಬಿಡಿಸಿದ್ದಾರೆ. ರಸ್ತೆ ಸಮಸ್ಯೆಗೆ ಇದೇ ಮೂಲ ಕಾರಣ. ಹಾಗಾಗಿ ಪೋಡಿಯನ್ನು ರದ್ದುಪಡಿಸುವಂತೆ ತಹಶೀಲ್ದಾರ್ ಮತ್ತು ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಪೋಡಿ ರದ್ದಾಗದಿರುವುದರಿಂದ ರಸ್ತೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಪೋಡಿ ರದ್ದಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ಪಿಸಿಡಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಕ್ಕದ ಜಮೀನಿನಲ್ಲಿ ರಸ್ತೆ ಬಿಡಿಸಿಕೊಳ್ಳಲಿ’
‘ನಾವು ಖರೀದಿ ಮಾಡಿರುವಂತಹ ಜಾಗದಲ್ಲಿ ರಸ್ತೆ ಬರುವುದಿಲ್ಲ. ನಾವು ಸರ್ವೇ ಮಾಡಿಸಿಯೇ ನಮ್ಮ ಜಾಗವನ್ನು ಹದ್ದುಬಸ್ತು ಮಾಡಿಸಿ ತಂತಿ ಬೇಲಿ ಹಾಕಿಕೊಂಡಿದ್ದೇವೆ. ಆಶ್ರಯ ಸಮಿತಿಗೆ ಜಾಗ ಮಾರಾಟ ಮಾಡಿರುವಂತಹ ರೈತರ ಜಮೀನು ಪಕ್ಕದಲ್ಲೇ ಇದೆ. ಅದರಲ್ಲೇ ಊರಿಗೆ ಓಡಾಡಲು ರಸ್ತೆಯನ್ನು ಬಿಡಿಸಿಕೊಳ್ಳಬೇಕಿದೆ’ ಎಂದು ಜಮೀನಿನ ಮುಂಭಾಗದ ರೈತ ಶಶಿಕುಮಾರ್ ಹೇಳಿದರು. ‘ಮನವಿ ಕೊಟ್ಟರೂ ಸಮಸ್ಯೆ ನೀಗಿಲ್ಲ’ ‘ಆಶ್ರಯ ಯೋಜನೆಯಡಿ ಮನೆ ವಿತರಿಸಿರುವ ತಾಲ್ಲೂಕು ಆಡಳಿತವು ಅಗತ್ಯ ಮೂಲಸೌಕರ್ಯಗಳನ್ನು ಸಹ ಕಲ್ಪಿಸಿದೆ. ಆದರೆ ರಸ್ತೆ ಸಮಸ್ಯೆ ಮಾತ್ರ ಇದುವರೆಗೆ ಬಗೆಹರಿದಿಲ್ಲ. ನಾವು ಸ್ಥಳೀಯ ಪಂಚಾಯಿತಿಗೆ ದೂರು ನೀಡಿದ್ದೇವೆ. ಜನಸ್ಪಂದನ ಸಭೆಯಲ್ಲಿ ಸ್ಥಳೀಯ ಶಾಸಕರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದು ಬಗೆಹರಿಸುವಂತೆ ಮನವಿ ಮಾಡಿದ್ದೇವೆ. ಪೊಲೀಸರಿಗೂ ಇಲ್ಲಿನ ಸಮಸ್ಯೆಯ ಮಾಹಿತಿ ಇದೆ. ಆದರೂ ರಸ್ತೆ ಸಮಸ್ಯೆ ಬಗ್ಗೆ ಹರಿದಿಲ್ಲ. ನಾವು ಹೊರಗೆ ಹೋಗಲಾಗದೆ ದಿಗ್ಬಂದನದಲ್ಲಿದ್ದೇವೆ’ ಎಂದು ಆಶ್ರಯ ನಗರದ ನಿವಾಸಿ ರುದ್ರೇಶ್ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.