ಕನಕಪುರ: ನೈಸರ್ಗಿಕ ಬೆಟ್ಟ ಗುಡ್ಡಗಳ ಮಣ್ಣನ್ನು ಅಕ್ರಮವಾಗಿ ತೆಗೆಯುವುದರಿಂದ ಬೆಟ್ಟ–ಗುಡ್ಡಗಳು ಕುಸಿತವಾಗಿ ಅಪಾರ ಸಾವು–ನೋವು ಸಂಭವಿಸುತ್ತವೆ ಎಂದು ಗೊತ್ತಿದ್ದರೂ ಅಕ್ರಮವಾಗಿ ಬೆಟ್ಟ–ಗುಡ್ಡಗಳ ಮಣ್ಣು ತೆಗೆಯುವ ಪ್ರಕ್ರಿಯೆ ಮಾತ್ರ ನಿಂತಿಲ್ಲ.
ಇಂತಹ ಅಕ್ರಮ ಚಟುವಟಿಕೆ ಕಣ್ಣು ಮುಂದೆ ನಡೆಯುತ್ತಿದ್ದರೂ ಸಂಬಂಧಪಟ್ಟವರು ಕಿಂಚಿತ್ತು ಅದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲವೇನು ಎಂಬಂತೆ ಮೌನ ವಹಿಸಿದ್ದಾರೆ.
ತಾಲ್ಲೂಕಿನ ಹನುಮನಹಳ್ಳಿ ಗುರುಕಾರ್ ಗುಡ್ಡ, ಬಣಂತಮಾರಮ್ಮ ಬೆಟ್ಟ, ಮಹಾರಾಜರಕಟ್ಟೆ, ಜಕ್ಕೇಗೌಡನ ದೊಡ್ಡಿ, ಒರಳಗಲ್ಲು, ಮುನೇಶ್ವರನ ಬೆಟ್ಟ, ಕೋಡಿಹಳ್ಳಿ, ಗರಳಾಪುರ, ಕೂತಗಳೆ, ಮರಳಬೇಕುಪ್ಪೆ, ಹೊಸಕೋಟೆ, ಹೊಸದುರ್ಗ, ಕೋಳಗೊಂಡನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೈಸರ್ಗಿಕವಾಗಿರುವ ಬೆಟ್ಟ ಗುಡ್ಡಗಳ ಮಣ್ಣನ್ನು ವ್ಯವಸ್ಥಿತವಾಗಿ ತೆಗೆದು ನೆಲಸಮ ಮಾಡಲಾಗುತ್ತಿದೆ. ಪ್ರಭಾವಿಗಳು, ರಾಜಕೀಯ ಧುರೀಣರು ಬೆಟ್ಟ ಗುಡ್ಡಗಳ ಮಣ್ಣನ್ನು ಅಕ್ರಮವಾಗಿ ತೆಗೆದು ಸಾಗಿಸಿ ತಮಗೆ ಬೇಕಾದಂತೆ ಬಳಸುತ್ತಿದ್ದಾರೆ.
ಮತ್ತೊಂದು ಕಡೆ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾರಣಕ್ಕೆ ಗುತ್ತಿಗೆದಾರರು ಸ್ಥಳೀಯ ಪ್ರಭಾವಿಗಳ ಸಹಕಾರ ಪಡೆದು ರಸ್ತೆ ಬದಿಯಲ್ಲಿನ ಗುಡ್ಡಗಳ ಮಣ್ಣು ತೆಗೆದು ನೆಲಸಮಗೊಳಿಸುತ್ತಿದ್ದಾರೆ.
ಪ್ರಾಕೃತಿಕವಾಗಿ ಸಾವಿರಾರು ವರ್ಷಗಳಿಂದ ಕಲ್ಲು ಬಂಡೆ ಸಮೇತ ಗುಡ್ಡ ಮತ್ತು ಬೆಟ್ಟಗಳು ಬೆಳೆದುಕೊಂಡಿವೆ. ಅಂತಹ ಗುಡ್ಡಗಳ ಬುಡದಲ್ಲಿ ಇರುವ ಮಣ್ಣನ್ನು ಕಾನೂನು ಬಾಹಿರವಾಗಿ ಹಿಟಾಚಿ, ಜೆಸಿಬಿ ಬಳಸಿ 50 ಅಡಿಗಳಿಗೂ ಹೆಚ್ಚು ಆಳವಾಗಿ ಮಣ್ಣು ತೆಗೆಯುತ್ತಿದ್ದಾರೆ.
ಈ ರೀತಿ ಮಣ್ಣು ತೆಗೆಯುವುದರಿಂದ ಬೆಟ್ಟ ಗುಡ್ಡದ ಬುಡ ಸಡಿಲವಾಗುತ್ತಿವೆ. ಅಲ್ಲದೆ, ಗುಡ್ಡದಲ್ಲಿ ಸಿಗುವ ದಪ್ಪ ದಪ್ಪ ಬಂಡೆಗಳನ್ನು ಅಸ್ಥಿರಗೊಳಿಸಿ ಅಲ್ಲಿಯೇ ಬಿಡಲಾಗುತ್ತಿದೆ. ಈ ರೀತಿಯ ಬಂಡೆ ಕಲ್ಲುಗಳು ಯಾವ ಸಂದರ್ಭದಲ್ಲಿ ಬೇಕಾದರೂ ಉರುಳಿ ಬೀಳಬಹುದು.
ಗುಡ್ಡ ಬುಡ ಸಡಿಲವಾಗಿರುವುದರಿಂದ ಹೆಚ್ಚು ಮಳೆ ಆದಾಗ ಕುಸಿಯಬಹುದು. ಇಂತಹ ಅನಾಹುತ ಮಡಿಕೇರಿ, ಕೊಡಗು, ಮಲೆನಾಡು ಪ್ರದೇಶಗಳಲ್ಲಿ ಆಗಿ ಸಾಕಷ್ಟು ಸಾವು ನೋವು ಕಣ್ಮುಂದೆ ಸಂಭವಿಸಿದೆ
ಅಂತಹ ಅವಘಡಗಳು ಆದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಂಡು ಕುಸಿತಕ್ಕೆ ಕಾರಣ ಹುಡುಕುತ್ತದೆ. ಬೆಟ್ಟಗುಡ್ಡಗಳ ಮಣ್ಣು ತೆಗೆಯದಂತೆ ಕ್ರಮ ವಹಿಸಲು ಮುಂದಾಗುತ್ತದೆ. ಆದರೆ, ತಾಲ್ಲೂಕಿನಲ್ಲಿ ತಮ್ಮ ಕಣ್ಮುಂದೆ ಗುಡ್ಡಗಳ ಮಣ್ಣು ತೆಗೆಯುತ್ತಿದ್ದರೂ ಸಂಬಂಧಪಟ್ಟವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಅರಣ್ಯ ಭೂಮಿ ಗೋಮಾಳ ಪ್ರದೇಶವನ್ನು ಕಬಳಿಸಿ ಒತ್ತುವರಿ ಮಾಡುವವರು ಹೆಚ್ಚಾಗಿ, ಗುಡ್ಡಗಳ ಮಣ್ಣ ಬಸಿದು ಸಮತಟ್ಟು ಮಾಡುತ್ತಿದ್ದಾರೆ. ಸರ್ಕಾರ ಸಾಗುವಳಿಗೆ ಕೊಡಬೇಕಾದರೆ ಸಮತಟ್ಟಾದ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಮಾಡಿರಬೇಕು. ಆದರೆ, ಇದನ್ನು ಪಾಲಿಸುತ್ತಿಲ್ಲ.
ಭೂಮಿ ಮೇಲಿನ ಪ್ರಕೃತಿ, ನೈಸರ್ಗಿಕ ಸಂಪತ್ತು, ಬೆಟ್ಟಗುಡ್ಡಗಳು ಎಲ್ಲರಿಗೂ ಸೇರಬೇಕಾದದ್ದು. ಆದರೆ, ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬೆಟ್ಟ-ಗುಡ್ಡಗಳನ್ನು ಕರಗಿಸಿ ಪರಿಸರ ಅಸಮತೋಲನ ಮಾಡುತ್ತಿದ್ದಾರೆ. ವಿಪತ್ತುಗಳು ಸಂಭವಿಸಿದಾಗ ಎಲ್ಲರೂ ಅದನ್ನು ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅಕ್ರಮಗಳು ಕಂಡು ಬಂದಾಗ ಅಥವಾ ಯಾರಾದರೂ ಗಮನಕ್ಕೆ ತಂದಾಗ ಪ್ರಾಮಾಣಿಕವಾಗಿ ದಿಟ್ಟತನದಿಂದ ಅಕ್ರಮ ತಡೆಗಟ್ಟಬೇಕು. ಕಾನೂನಿನಡಿ ಅಕ್ರಮ ಎಸಗುವವರನ್ನು ಶಿಕ್ಷಿಸಬೇಕು. ಆಗ ಮಾತ್ರ ಪರಿಸರ ಉಳಿಸಬಹುದು. ಮುಂದಾಗುವ ಅನಾಹುತ ತಡೆಗಟ್ಟಬಹುದು ಎನ್ನುವುದು ಸ್ಥಳೀಯರ ಅಭಿಮತ.
ಅಕ್ರಮಕ್ಕೆ ರಾಜಕೀಯ ಸಹಕಾರ
ರಸ್ತೆ ವಿಸ್ತರಣೆ ಮಾಡಲು ಗುತ್ತಿಗೆ ಪಡೆದವರು ಗುಡ್ಡೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ. ಅದನ್ನು ಪ್ರಶ್ನೆ ಮಾಡಿದರೆ ಪ್ರಭಾವಿಗಳಿಂದ ಫೋನ್ ಮಾಡಿಸುತ್ತಾರೆ. ಇದಕ್ಕೆ ರಾಜಕೀಯ ಪ್ರಭಾವಿಗಳು ಸಹಕರಿಸುತ್ತಾರೆ. ಅದು ನಿಲ್ಲಬೇಕು. ಭಟ್ಟರು ಅಂದಾನಿಗೌಡ ಕನಕಪುರ ಅಕ್ರಮ ತಡಗಟ್ಟಬೇಕಿದೆ ಪ್ರಭಾವಿಗಳು ಅಕ್ರಮವಾಗಿ ಅರಣ್ಯ ಗೋಮಾಳ ಪ್ರದೇಶವನ್ನು ಒತ್ತುವರಿ ಮಾಡಿ ಜಮೀನು ಮಾಡುತ್ತಾರೆ. ಸಾಗುವಳಿ ಸಿಕ್ಕ ಮೇಲೆ ಗುಡ್ಡ ಬಸಿಯುತ್ತಾರೆ. ಸರ್ಕಾರ ಗುಡ್ಡವನ್ನು ಯಾವ ರೀತಿ ಸಾಗವಳಿಗೆ ಕೊಡುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಇದನ್ನು ತಡೆಗಟ್ಟಬೇಕಿದೆ. ನಾಗಾರ್ಜುನಗೌಡ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಕನಕಪುರ. ಅಧಿಕಾರಿಗಳನ್ನೇ ಹೊಣೆ ಮಾಡಬೇಕು ರಿಯಲ್ ಎಸ್ಟೇಟ್ ಮಾಡುವವರು ರಸ್ತೆ ವಿಸ್ತರಣೆ ಮಾಡಲು ಗುತ್ತಿಗೆ ಪಡೆದವರು ಅಕ್ರಮವಾಗಿ ಗೋಮಾಳ ಜಾಗ ಸರ್ಕಾರಿ ಗುಡ್ಡಗಳಲ್ಲಿ ಮಣ್ಣು ತೆಗೆಯುತ್ತಿದ್ದಾರೆ. ಅದನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಬೂಬು ಹೇಳುತ್ತಾರೆ. ಇಂತಹ ಅಕ್ರಮಗಳಿಗೆ ಅಧಿಕಾರಗಳು ಕಾರಣರಾಗಿದ್ದು ಅವರನ್ನೇ ಹೊಣೆ ಮಾಡಬೇಕಿದೆ. ಚೀಲೂರು ಮುನಿರಾಜು ರಾಜ್ಯ ಸಂಚಾಲಕ ರೈತ ಸಂಘ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.