ADVERTISEMENT

ಕನಕಪುರ | ದಲಿತ ಯುವಕನ ಕೈ ಕಡಿದ ಪ್ರಕರಣ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 8:17 IST
Last Updated 24 ಜುಲೈ 2024, 8:17 IST
ಕನಕಪುರದ ಮಳಗಾಳು ಗ್ರಾಮದ ಎನ್.ಕೆ. ಕಾಲೊನಿಗೆ ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಮಂಗಳವಾರ ಭೇಟಿ ನೀಡಿ, ಘಟನೆ ಕುರಿತು ದಲಿತ ಮುಖಂಡರಿಂದ ಮಾಹಿತಿ ಪಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಇದ್ದಾರೆ
ಕನಕಪುರದ ಮಳಗಾಳು ಗ್ರಾಮದ ಎನ್.ಕೆ. ಕಾಲೊನಿಗೆ ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಮಂಗಳವಾರ ಭೇಟಿ ನೀಡಿ, ಘಟನೆ ಕುರಿತು ದಲಿತ ಮುಖಂಡರಿಂದ ಮಾಹಿತಿ ಪಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಇದ್ದಾರೆ   

ಕನಕಪುರ (ರಾಮನಗರ): ಪಟ್ಟಣದ ಮಳಗಾಳು ಗ್ರಾಮದ ಎನ್.ಕೆ. ಕಾಲೊನಿಯಲ್ಲಿ ಒಕ್ಕಲಿಗ ಸಮುದಾಯದ ಯುವಕರ ಗುಂಪು ದಲಿತ ಯುವಕನ‌ ಕೈ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕನಕಪುರ ಟೌನ್ ಪೊಲೀಸರು ಮಂಗಳವಾರ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಶಶಾಂಕ್, ದರ್ಶನ್, ಪ್ರತೀಕ್ ಹಾಗೂ ಶಿವಶಂಕರ್ ಬಂಧಿತರು. ಪ್ರಮುಖ ಆರೋಪಿ ಹರ್ಷ ಅಲಿಯಾಸ್ ಕೈಮ ಸೇರಿದಂತೆ ಉಳಿದ ಮೂವರು ತಲೆ ಮರೆಸಿಕೊಂಡಿದ್ದಾರೆ.

ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಅವರು ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರೊಂದಿಗೆ ಕಾಲೊನಿಗೆ ಭೇಟಿ ನೀಡಿದರು. ಘಟನಾ ಸ್ಥಳವನ್ನು ಪರಿಶೀಲಿಸಿದ ಅವರು, ಹಲ್ಲೆಗೊಳಗಾದ ಕುಟುಂಬದವರು, ಸ್ಥಳೀಯರು ಹಾಗೂ ದಲಿತ ಮುಖಂಡರೊಂದಿಗೆ ಮಾತನಾಡಿ ಘಟನೆ ಕುರಿತು ಮಾಹಿತಿ ಪಡೆದರು.

ಜೀವಕ್ಕೆ ಭದ್ರತೆ ಒದಗಿಸಿ: ‘ಘಟನೆ ನಡೆದಾಗಿನಿಂದ ಕಾಲೊನಿಯಲ್ಲಿ ಆತಂಕ ಆವರಿಸಿದೆ. ಯಾರು, ಯಾವಾಗ ಬಂದು ಹಲ್ಲೆ ನಡೆಸುತ್ತಾರೊ ಎಂಬ ಆತಂಕದಲ್ಲೇ ಬದುಕುತ್ತಿದ್ದೇವೆ. ಹೊರಗಡೆ ಹೋಗುವುದಕ್ಕೂ ಭಯವಾಗುತ್ತಿದೆ. ನಮ್ಮ ಜೀವಕ್ಕೆ ಭದ್ರತೆ ಒದಗಿಸಬೇಕು’ ಎಂದು ಐಜಿಪಿ ಬಳಿ ಮಹಿಳೆಯರು ಅಳಲು ತೋಡಿಕೊಂಡರು.

ADVERTISEMENT

‘ರೌಡಿಸಂನಲ್ಲಿ ಸಕ್ರಿಯವಾಗಿರುವ ಆರೋಪಿಗಳು ಹಿಂದಿನಿಂದಲೂ ಕಿರುಕುಳ ನೀಡುತ್ತಲೇ ಇದ್ದರು. ಈ ಕುರಿತು ಪೊಲೀಸರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿರಲಿಲ್ಲ. ಜಿಲ್ಲೆಯಿಂದ ಗಡಿಪಾರಾಗಿದ್ದ ರೌಡಿಯೊಬ್ಬ ತನ್ನ ಸಹಚರರೊಂದಿಗೆ ಬಂದು ಕೃತ್ಯ ಎಸಗಿರುವುದು ಪೊಲೀಸರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ತಾಲ್ಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ವಾರದ ಅಂತರದಲ್ಲಿ ದಲಿತರ ಮೇಲೆ ಎರಡು ಕಡೆ ಮಾರಣಾಂತಿಕ ಹಲ್ಲೆ ನಡೆದಿವೆ’ ಎಂದು ಸ್ಥಳೀಯ ದಲಿತ ಮುಖಂಡರಾದ ಧಮ್ಮ ದೀವಿಗೆ ಟ್ರಸ್ಟ್‌ನ ಮಲ್ಲಿಕಾರ್ಜುನ್ ಹಾಗೂ ಇತರರು ದೂರಿದರು.

ಕ್ರಮದ ಭರವಸೆ: ಸ್ಥಳೀಯರ ಅಳಲು ಆಲಿಸಿದ ಐಜಿಪಿ, ‘ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯರು ನಿರಾತಂಕದಿಂದ ಬದುಕುವಂತೆ ಪೊಲೀಸ್ ಭದ್ರತೆ ಒದಗಿಸಲಾಗುವುದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಘಟನೆ ಹಿನ್ನೆಲೆಯಲ್ಲಿ ಎನ್‌.ಕೆ. ಕಾಲೊನಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕನಕಪುರದ ಮಳಗಾಳು ಗ್ರಾಮದ ಎನ್.ಕೆ. ಕಾಲೊನಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.