ADVERTISEMENT

ಕನಕಪುರ: ಅಮಾನತುಗೊಂಡಿದ್ದ ವೈದ್ಯೆ ಮರು ನಿಯೋಜನೆಗೆ ವಿರೋಧ

ಭ್ರೂಣಲಿಂಗ ಅಕ್ರಮವಾಗಿ ಪತ್ತೆ ಮಾಡಿದ ಆರೋಪ: ಪ್ರಗತಿಪರ ಸಂಘಟನೆ ಒಕ್ಕೂಟ ಖಂಡನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 5:15 IST
Last Updated 19 ನವೆಂಬರ್ 2024, 5:15 IST

ಕನಕಪುರ: ಭ್ರೂಣಲಿಂಗವನ್ನು ಅಕ್ರಮವಾಗಿ ಪತ್ತೆ ಮಾಡಿದ ಆರೋಪದಡಿ ಅಮಾನತುಗೊಂಡಿರುವ ಪಟ್ಟಣದ ವೈದ್ಯೆ ಡಾ. ದಾಕ್ಷಾಯಿಣಿ ಅವರನ್ನು ಮತ್ತೆ ಅದೇ ಜಾಗದಲ್ಲಿ ಮುಂದುವರಿಸುತ್ತಿರುವುದು ಸರಿಯಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.

ನಗರದ ಕೋಟೆ ಗಣೇಶ ದೇವಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಾ. ದಾಕ್ಷಾಯಿಣಿ ಅವರು ಬಸ್ ನಿಲ್ದಾಣದ ಬಳಿ ಇರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಸ್ಕ್ಯಾನಿಂಗ್ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಭ್ರೂಣಲಿಂಗ ಪತ್ತೆ ಮಾಡಿದ ಆರೋಪದಡಿ, ಕ್ರಿಮಿನಲ್ ಪ್ರಕರಣ ದಾಖಲಾಗಿ ಅಮಾನತುಗೊಂಡಿದ್ದರು’ ಎಂದರು.

‘ವೈದ್ಯೆ ಮೇಲಿರುವ ಆರೋಪದ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಆರೋಗ್ಯ ಇಲಾಖೆಯು ಮತ್ತೆ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿದೆ. ಇದರಿಂದ ಅವರು ಸಾಕ್ಷಿಗಳನ್ನು ನಾಶಮಾಡುವ ಸಾಧ್ಯತೆ ಮತ್ತು ಅವರು ತಪ್ಪೇ ಮಾಡಿಲ್ಲವೆಂಬಂತೆ ಸಂದೇಶ ಹೋಗುತ್ತದೆ’ ಎಂದು ದೂರಿದರು.

ADVERTISEMENT

‘ವೈದ್ಯರ ಕೊರತೆ ಕಾರಣವನ್ನು ನೀಡಿ ಸರ್ಕಾರ ಮತ್ತೆ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿದೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಅವರು ಅಮಾನತುಕೊಂಡಿದ್ದ ಸಂದರ್ಭದಲ್ಲಿ ಅವರ ಸ್ಥಳವನ್ನು ಖಾಲಿ ತೋರಿಸಿದ್ದರೆ, ಬೇರೆ ಕಡೆಯಿಂದ ಇಲ್ಲಿಗೆ ವೈದ್ಯರು ವರ್ಗಾವಣೆ ಮಾಡಿಕೊಂಡು ಬರುತ್ತಿದ್ದರು. ದಾಕ್ಷಾಯಿಣಿ ಅವರ ಪ್ರಭಾವದಿಂದ ಅವರ ಸ್ಥಳವನ್ನು ಖಾಲಿ ತೋರಿಸಿರಲಿಲ್ಲ’ ಎಂದು ಆರೋಪಿಸಿದರು.

‘ಬೇರೆ ಕಡೆಗೆ ವರ್ಗಾವಣೆಗೊಂಡಿದ್ದ ದಾಕ್ಷಾಯಿಣಿ ಅವರು ಅಲ್ಲಿಗೆ ಹೋಗಿ ಕರ್ತವ್ಯ ನಿರ್ವಹಿಸಿಲ್ಲ. ಹಠ ಹಿಡಿದು ಇದೇ ಜಾಗಕ್ಕೆ ಬರಬೇಕೆಂದು ತಮ್ಮ ಪ್ರಭಾವ ಬಳಸಿ ಇಲಾಖೆ ಮೇಲೆ ಒತ್ತಡ ತಂದು ಕೆಲಸಕ್ಕೆ ಮತ್ತೆ ಬಂದಿದ್ದಾರೆ. ಇಲಾಖೆ ಮತ್ತೆ ಇದೇ ಸ್ಥಳದಲ್ಲಿ ನಿಯೋಜನೆ ಮಾಡಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ಕನ್ನಡ ಸಂಘಟನೆಯ ಪ್ರಶಾಂತ್, ನಗರಸಭೆ ಸದಸ್ಯ ಸ್ಟುಡಿಯೋ ಚಂದ್ರು ಮಾತನಾಡಿ, ‘ಡಾ. ದಾಕ್ಷಾಯಿಣಿ ಅವರು ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿಯನ್ನು ತಮ್ಮ ಖಾಸಗಿ ಕ್ಲಿನಿಕ್ ಗೆ ಕರೆಸಿಕೊಳ್ಳುತ್ತಾರೆ. ಅಲ್ಲಿಗೆ ಹೋದವರಿಗೆ ಮಾತ್ರ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುತ್ತಾರೆ. ಇಲ್ಲವಾದಲ್ಲಿ ಬೆಂಗಳೂರಿಗೆ ಕಳಿಸಿ ಕೊಡುತ್ತಾರೆ. ಸರ್ಕಾರದ ಎಲ್ಲಾ ಸವಲತ್ತು, ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಗಬ್ಬಾಡಿ ಕಾಡೇಗೌಡ, ರೇಷ್ಮೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಡಿ.ಕೆ. ರಾಮಕೃಷ್ಣ, ವೈಭವ ಕರ್ನಾಟಕದ ಅಧ್ಯಕ್ಷ ಪುಟ್ಟಲಿಂಗಯ್ಯ, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್, ಜಯ ಕರ್ನಾಟಕ ಜನಪರ ವೇದಿಕೆ ಗಿರೀಶ್, ಆರ್‌ಟಿಐ ಕಾರ್ಯಕರ್ತ ಕಿಶೋರ್, ರೈತ ಸಂಘದ ಕನಕಪುರ ತಾಲ್ಲೂಕು ಅಧ್ಯಕ್ಷ ಕುಮಾರ್, ಹಾರೋಹಳ್ಳಿ ತಾಲ್ಲೂಕು ಅಧ್ಯಕ್ಷ ಬಸವರಾಜು, ಮುಖಂಡರಾದ ಮುನಿಸಿದ್ದೇಗೌಡ, ರವಿ, ಸಿದ್ದರಾಜು, ರವಿಕುಮಾರ್, ಕೆಂಪಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.