ಮಾಗಡಿ: ಚನ್ನಪಟ್ಟಣ ಉಪಚುನಾವಣೆ ಕಾರಣ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಶರತ್ ಕುಮಾರ್ ಹೇಳಿದರು.
ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನ.1ರಂದು ತಾಲ್ಲೂಕು ಕಚೇರಿ ಆವರಣದಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು. ಕನ್ನಡಪರ ಸಂಘಟನೆಗಳು ಸೇರಿ ಬೇರೆ ದಿನ ತಾಲ್ಲೂಕಿನಲ್ಲಿ ಅದ್ದೂರಿಯಾಗಿ ರಾಜೋತ್ಸವ ಆಚರಿಸಲು ತೀರ್ಮಾನಿಸಿವೆ. ಹೀಗಾಗಿ ಮುಂದೊಂದು ದಿನ ಪೂರ್ವಭಾವಿ ಸಭೆ ಕರೆದು ಅದ್ದೂರಿ ಆಚರಣೆಗೆ ಬೇಕಾದ ಸಿದ್ಧತೆ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಎಲ್ಲಾ ಇಲಾಖೆ ಅಧಿಕಾರಿಗಳು ಸಭೆಗೆ ಬರುವಂತೆ ಮಾಹಿತಿ ನೀಡಿದ್ದರೂ, ಯಾರು ಬಂದಿಲ್ಲ. ಅವರಿಗೆಲ್ಲ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದರು.
ನಿರ್ಲಕ್ಷ್ಯ ಬೇಡ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತಿ.ನಾ. ಪದ್ಮನಾಭ, ಎರಡು ದಿನದ ಹಿಂದೆ ಕರೆಯಲಾಗಿದ್ದ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಬಾರದ ಕಾರಣ ಇಂದು ಸಭೆ ಕರೆಯಲಾಗಿತ್ತು. ಆದರೆ ಈ ಸಭೆಗೂ ಕೆಲ ಅಧಿಕಾರಿಗಳು ಗೈರು ಆಗಿದ್ದಾರೆ. ಇಂಥವರ ವಿರುದ್ಧ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್‌ಗೆ ಸರಿಯಾಗಿ ಮಾಹಿತಿ ನೀಡದೆ ಹಿನ್ನೆಲೆ ಸಭೆಗೆ ಮಹತ್ವ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ತಾಲ್ಲೂಕು ಆಡಳಿತ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಬಗರ್ ಹುಕಂ ಸಮಿತಿ ಸದಸ್ಯ ಆಗ್ರೋ ಪುರುಷೋತ್ತಮ್, ಮುಖಂಡರಾದ ಬಾಚೇನಟ್ಟಿ ಮಹಾಂತೇಶ್, ವನಜ, ಬಿಇಒ ಕಚೇರಿಯ ನಾರಾಯಣ್ ಇದ್ದರು.
ನ.29ಕ್ಕೆ ಅದ್ದೂರಿ ರಾಜ್ಯೋತ್ಸವ
ಕನ್ನಡಪರ ಸಂಘಟನೆಗಳು ನ. 29ರಂದು ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು. ಆಗ ತಹಶೀಲ್ದಾರ್ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಆಹ್ವಾನ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸಿ ನಮ್ಮ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದು ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಶ್ರೀಪತಿಯಲ್ಲಿ ರಾಜಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.