ADVERTISEMENT

ರಾಮನಗರ | ಕನ್ನಡ ನಾಮಫಲಕಕ್ಕೆ ಕರವೇ ಅಭಿಯಾನ: ಅಂಗಡಿ ಮಾಲೀಕರಿಗೆ ಕರತಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 15:17 IST
Last Updated 8 ಮಾರ್ಚ್ 2024, 15:17 IST
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಅಳವಡಿಕೆ ಮಾಡಿಕೊಳ್ಳುವಂತೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ರಾಮನಗರದಲ್ಲಿ ಅಭಿಯಾನ ನಡೆಸಿ, ಕರಪತ್ರ ವಿತರಿಸಿದರು
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಅಳವಡಿಕೆ ಮಾಡಿಕೊಳ್ಳುವಂತೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ರಾಮನಗರದಲ್ಲಿ ಅಭಿಯಾನ ನಡೆಸಿ, ಕರಪತ್ರ ವಿತರಿಸಿದರು   

ರಾಮನಗರ: ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಯಂತೆ, ವಾಣಿಜ್ಯ ಮಳಿಗೆಗಳು, ಅಂಗಡಿಗಳು, ಬೋರ್ಡ್‌ಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಅಳವಡಿಕೆ ಮಾಡಿಕೊಳ್ಳುವಂತೆ, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರದಲ್ಲಿ ಇತ್ತೀಚೆಗೆ ಅಭಿಯಾನ ನಡೆಸಿದರು.

ನಗರದ ರಸ್ತೆಗಳಲ್ಲಿ ವಾಹನದಲ್ಲಿ ಈ ಬಗ್ಗೆ ಮೈಕ್‌ನಲ್ಲಿ ಉದ್ಘೋಷ ಮಾಡುತ್ತಾ ತೆರಳಿದ ವೇದಿಕೆಯ ಪದಾಧಿಕಾರಿಗಳು, ಕನ್ನಡ ಭಾಷೆಯ ನಾಮಫಲಕ ಅಳವಡಿಸಿಕೊಳ್ಳುವಂತೆ ಅಂಗಡಿಗಳು, ಮಳಿಗೆಗಳು, ವಾಣಿಜ್ಯ ಸಂಕೀರ್ಣಗಳ ಕಟ್ಟಡಗಳ ಮಾಲೀಕರಿಗೆ ಕರಪತ್ರ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕಬ್ಬಾಳೇಗೌಡ, ‘ರಾಜ್ಯ ಸರ್ಕಾರ ಇತ್ತೀಚೆಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ಜಾರಿಗೊಳಿಸಿದೆ. ಆದರೆ, ರಾಜ್ಯದಲ್ಲಿ ಸರಿಯಾಗಿ ಬಂದಿಲ್ಲ. ಇದೀಗ ಕಾಯ್ದೆಗೆ ತಿದ್ದುಪಡಿ ತಂದು ಕಟ್ಟುನಿಟ್ಟಿನ ಜಾರಿಗೆ ಮುಂದಾಗಿದೆ. ಕನ್ನಡ ಕಟ್ಟುವಲ್ಲಿ ತೊಡಗಿಸಿಕೊಂಡಿರುವ ವೇದಿಕೆಯ, ಕಾಯ್ದೆ ಬಗ್ಗೆ ಅರಿವು ಮೂಡಿಸುತ್ತಾ ಕನ್ನಡ ನಾಮಫಲಕ ಅಳವಡಿಸುವಂತೆ ಜಾಗೃತಿ ಮೂಡಿಸುತ್ತಿದೆ’ ಎಂದರು.

ADVERTISEMENT

‘ಜಿಲ್ಲಾ ಕೇಂದ್ರದಲ್ಲಿರುವ ಅಂಗಡಿ–ಮಳಿಗೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ನಾಮಫಲಕ ಅಳವಡಿಸಲು ಸೂಚಿಸಲಾಗುತ್ತಿದೆ. ನಮ್ಮ ಸಂಘಟನೆ ಬೇರೆ ಭಾಷೆ ಹಾಗೂ ಭಾಷಿಕರ ವಿರೋಧಿಯಲ್ಲ. ಆದರೆ, ಕನ್ನಡಿಗರಿಗೆ ಆಗುತ್ತಿರುವ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಉಳಿವಿನ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಹೇಳಿದರು.

ವೇದಿಕೆಯ ಮುಖಂಡರಾದ ದೇವರಾಜು, ಕೆಂಪಣ್ಣ, ಸಾಗರ್, ಪುಟ್ಟಸ್ವಾಮಿ, ಶಂಭುಗೌಡ, ನಿತೀನ್, ರಘುರಾಮ್, ಮಾದೇಗೌಡ, ವೆಂಕಟೇಶ್, ತಿಮ್ಮರಾಜು, ಶ್ರೀನಿವಾಸ್, ಜಯರಾಮ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.