ADVERTISEMENT

ರಾಮನಗರದಲ್ಲಿ ‘ಕಣ್ಣೀರ ರಾಜಕಾರಣ’

ಮತದಾರರ ಮುಂದೆ ಅಳುವೇ ಅಸ್ತ್ರ; ಭಾವೋದ್ವೇಗದ ಹೇಳಿಕೆ

ಆರ್.ಜಿತೇಂದ್ರ
Published 6 ಮೇ 2023, 19:44 IST
Last Updated 6 ಮೇ 2023, 19:44 IST
ಮೇಡಮಾರನಹಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ರಾಮನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಕಣ್ಣೀರಿಟ್ಟ ಕ್ಷಣ
ಮೇಡಮಾರನಹಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ರಾಮನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಕಣ್ಣೀರಿಟ್ಟ ಕ್ಷಣ   

ರಾಮನಗರ: ಚುನಾವಣೆ ಪ್ರಚಾರದ ಸಂದರ್ಭ ಅಭ್ಯರ್ಥಿಗಳು, ಪ್ರಚಾರಕರು ಭಾವೋದ್ವೇಗಕ್ಕೆ ಒಳಗಾಗುವ ದೃಶ್ಯ ಈಗ ಸಾಮಾನ್ಯವಾಗಿದೆ. ಹೀಗೆ ಕಣ್ಣೀರು ಹಾಕುವವರಲ್ಲಿ ಎಲ್ಲ ಪಕ್ಷದವರೂ ಇದ್ದಾರೆ. ಈ ಕಣ್ಣೀರು ಕೆಲವೊಮ್ಮೆ ಗೆಲುವಿನ ಟಾನಿಕ್‌ನಂತೆ ಕೆಲಸ ಮಾಡಲಿದೆ ಎಂಬುದು ಬಲ್ಲವರ ಹೇಳಿಕೆ.

ಚುನಾವಣೆ ಘೋಷಣೆ ಆಗುತ್ತಲೇ ಉದ್ವೇಗಕ್ಕೆ ಒಳಗಾಗಿದ್ದ ಟಿಕೆಟ್ ಆಕಾಂಕ್ಷಿಗಳಲ್ಲಿ ಹಲವರು, ಟಿಕೆಟ್‌ ಕೈ ತಪ್ಪಿದ ಸಂದರ್ಭ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ್ದರು. ಟಿಕೆಟ್‌ ಪಡೆದವರು ಖುಷಿಯಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆದಾಗ್ಯೂ ಆಗಾಗ್ಗೆ ಆನಂದ ಭಾಷ್ಪ, ಉದ್ವೇಗದ ಕಂಬನಿ ಮಿಡಿಯುತ್ತಲೇ ಇದ್ದಾರೆ.

ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಶುಕ್ರವಾರ ಸಂಜೆ ಪ್ರಚಾರ ಕೈಗೊಂಡ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ತಾವು ಕಣ್ಣೀರು ಹಾಕಿದ್ದಲ್ಲದೆ, ಮತದಾರರ ಕಣ್ಣಂಚಿನಲ್ಲೂ ನೀರು ತರಿಸಿದರು. ‘ 90ರ ವಯಸ್ಸಿನಲ್ಲಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಈ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಗೆಲ್ಲಿಸಿ ಕಣ್ಣು ಮುಚ್ಚುತ್ತೇನೆ’ ಎಂದು ಗೌಡರು ಹೇಳುವಾಗ, ಜನರ ಕಣ್ಣಾಲಿಗಳು ತುಂಬಿದ್ದವು. ಸುಗ್ಗನಹಳ್ಳಿಯಲ್ಲಿ ಪ್ರಚಾರದ ವೇಳೆ ಗೌಡರು ಗದ್ಗದಿತರಾಗಿ ಕಂಬನಿ ಮಿಡಿದರು.

ADVERTISEMENT

ರಾಮನಗರದ ಜೆಡಿಎಸ್ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಕೆಗೂ ಮುನ್ನ, ಬೆಂಗಳೂರಿನಲ್ಲಿ ತಾತ ಎಚ್‌.ಡಿ. ದೇವೇಗೌಡರಿಂದ ಬಿ ಫಾರಂ ಪಡೆಯುವ ವೇಳೆ ಕಣ್ಣೀರು ಸುರಿಸಿದ್ದರು. ‘ನಾನೊಬ್ಬ ಭಾವಜೀವಿ. ದೇವೇಗೌಡರಂಥ ಹಿರಿಯರ ಕೈಯಿಂದ ಫಾರಂ ಪಡೆದಿದ್ದರಿಂದ ಉದ್ವೇಗ ತಡೆಯಲು ಆಗಲಿಲ್ಲ’ ಎಂದು ನಿಖಿಲ್‌ ಹೇಳಿದ್ದರು.

ಮಾಗಡಿ ಜೆಡಿಎಸ್‌ ಅಭ್ಯರ್ಥಿ ಎ. ಮಂಜುನಾಥ್‌ ತಮ್ಮ ಭಾಷಣಗಳಲ್ಲಿ ಆಗಾಗ್ಗೆ ಪಕ್ಷ ನಿಷ್ಠೆ ಪ್ರದರ್ಶಿಸುತ್ತ ಬಂದಿದ್ದಾರೆ. ಏ. 29ರಂದು ಮಾಗಡಿಯಲ್ಲಿ ನಡೆದ ಸಮಾವೇಶದಲ್ಲೂ ಅದು ವ್ಯಕ್ತವಾಗಿತ್ತು. ‘ನಾನು ದೇವೇಗೌಡರ ಮನೆಯ ನಿಯತ್ತಿನ ನಾಯಿ. ಎಂದಿಗೂ ಪಕ್ಷಕ್ಕೆ ದ್ರೋಹ ಬಗೆಯಲಾರೆ’ ಎಂದು ಮಂಜುನಾಥ್‌ ಮನ ಮಿಡಿಯುವಂತೆ ಮಾತನಾಡುವಾಗ ಅವರ ಕಣ್ಣಲ್ಲೂ ನೀರು ಜಿನುಗಿತ್ತು. ಅದನ್ನು ಕಂಡ ದೇವೇಗೌಡರ ಕಣ್ಣು ಸಹ ಒಸರಿತ್ತು.

ಕಣ್ಣೀರು ಹಾಕುವಲ್ಲಿ ಕಾಂಗ್ರೆಸ್ ನಾಯಕರು ಸಹ ಹಿಂದೆ ಬಿದ್ದಿಲ್ಲ. ರಾಮನಗರ ಕ್ಷೇತ್ರದಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಈ ಬಾರಿಯೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಆಗಾಗ್ಗೆ ಅವರು ಭಾವೋದ್ವೇಗಕ್ಕೆ ಒಳಗಾಗುವುದೂ ಇದೆ. ಹಾರೋಹಳ್ಳಿ ತಾಲ್ಲೂಕಿನ ಮೇಡಮಾರನಹಳ್ಳಿಯಲ್ಲಿ ಮಾತನಾಡುವ ವೇಳೆ ಇಕ್ಬಾಲ್‌ ‘ನಿಮ್ಮ ಮನೆ ಮಗನಂತೆ ನನ್ನನ್ನು ಸಲಹಿದ್ದೀರಿ’ ಎಂದು ಕಣ್ಣೀರು ಹಾಕಿದ್ದಾರೆ.

ಆದರೆ ಜಿಲ್ಲೆಯಲ್ಲಿ ಈವರೆಗೆ ಬಿಜೆಪಿ ಅಭ್ಯರ್ಥಿಗಳಾಗಲೀ, ಅವರ ಪ್ರಚಾರಕರಾಗಲಿ ಕಣ್ಣೀರು ಹಾಕಿದ ಉದಾಹರಣೆಗಳು ಸಿಕ್ಕಿಲ್ಲ.

ಗಡ್ಡ ಬಿಟ್ಟ ಡಿಕೆಶಿ; ಸುರೇಶ್‌ ಕಣ್ಣಲ್ಲೂ ನೀರು!

ಡಿ.ಕೆ. ಸಹೋದರರು ಬಂಡೆಯಷ್ಟೇ ಗಟ್ಟಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಸಂಸದ ಡಿ.ಕೆ. ಸುರೇಶ್‌ ಸಹ ಭಾವನೆಗಳನ್ನು ತಡೆಯಲಾಗದೇ ಭಾಷ್ಪ ಸುರಿದಿದ್ದಾರೆ. ಕನಕಪುರದಲ್ಲಿ ಕೆಲ ದಿನಗಳ ಹಿಂದೆ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಸುರೇಶ್‌ ‘ಡಿ.ಕೆ. ಶಿವಕುಮಾರ್ ಗಡ್ಡ ಏಕೆ ಬಿಟ್ಟಿದ್ದಾರೆ ಎಂದು 13ರಂದು ತೀರ್ಮಾನ ಆಗುತ್ತದೆ‘ ಎನ್ನುತ್ತಲೇ ಮಾತು ನಿಲ್ಲಿಸುತ್ತಾರೆ. ಅಷ್ಟರಲ್ಲೇ ಅವರ ಕಣ್ಣಿಂದ ನೀರು ಜಿನುಗುತ್ತದೆ. ಕೆಲ ಕ್ಷಣಗಳ ಕಾಲ ಸುರೇಶ್‌ ಮಾತೇ ಬಾರದಂತೆ ನಿಲ್ಲುತ್ತಾರೆ. ನಂತರ ಶಾಲಿನಲ್ಲಿ ಕಣ್ಣೀರು ಒರೆಸಿಕೊಂಡು ಮಾತು ಆರಂಭಿಸುತ್ತಾರೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲೂ ಸದ್ದು ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.