ರಾಮನಗರ: ಪಿಎಸ್‌ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಅಕ್ರಮ ರಾಜ್ಯದಾದ್ಯಂತ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಸಂಶಯ ಬಲವಾಗುತ್ತಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ರಾಮನಗರ ಜಿಲ್ಲೆ ಮಾಗಡಿಯ ವಿವಿಧ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಮತ್ತು ಪತ್ರಕರ್ತ ಸೇರಿದಂತೆ ಹತ್ತು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಳೆದ ಮಾರ್ಚ್–ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಆರೂ ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿರುವ ಸಂಗತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಹಾಗೂ ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಅವರನ್ನು ಪೊಲೀಸರು ಮಂಗಳವಾರ ಸಂಜೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಆತ ನೀಡಿದ ಮಾಹಿತಿ ಆಧರಿಸಿ ಉಳಿದ ಹತ್ತು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಕೆಂಪೇಗೌಡ ಶಾಲೆಯ ಪ್ರಾಚಾರ್ಯ ಶ್ರೀನಿವಾಸ,ಹಿಂದಿ ಶಿಕ್ಷಕ ಕೃಷ್ಣಮೂರ್ತಿ, ವಿವಿಧ ಶಾಲೆಗಳ ಶಿಕ್ಷಕರಾದ ಸುಬ್ರಹ್ಮಣ್ಯ (ವಿಜ್ಞಾನ), ಶ್ರೀನಿವಾಸ (ಸಮಾಜ ವಿಜ್ಞಾನ) ಅರ್ಜುನ್ (ಕನ್ನಡ), ಅಲೀಂ ಉಲ್ಲಾ (ಹಿಂದಿ), ನಾಗರಾಜು (ಇಂಗ್ಲಿಷ್), ಲೋಕೇಶ್ ಮತ್ತು ಸ್ಥಳೀಯ ಪತ್ರಕರ್ತ ವಿಜಯ್‌ಕುಮಾರ್ ಎಂಬುವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಈಗಾಗಲೇ ಪೊಲೀಸರು ಆರೋಪಿ ಗಳೆಲ್ಲರ ಮೊಬೈಲ್ ವಶಕ್ಕೆ ಪಡೆದಿದ್ದು, ಅದರಲ್ಲಿಯ ಮಾಹಿತಿ ಜಾಲಾಡುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನೂ ವಶಕ್ಕೆ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆರೋಪಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆ: ಮಾಗಡಿಯ ರಂಗನಾಥಸ್ವಾಮಿ ಪ್ರೌಢ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ಇತ್ತು. ಅಲ್ಲಿನ ಹಿಂದಿ ಶಿಕ್ಷಕ ಕೃಷ್ಣಮೂರ್ತಿ ಪರೀಕ್ಷೆ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಅವರು ಪ್ರತಿ ಪರೀಕ್ಷೆಯ ಆರಂಭದ 15 ನಿಮಿಷಕ್ಕೆ ಮುನ್ನವೇ ಮೊಬೈಲ್‌ನಲ್ಲಿ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ಅದನ್ನು ಕೆಂಪೇಗೌಡ ಪ್ರೌಢಶಾಲೆಯ ಕ್ಲರ್ಕ್ ರಂಗೇಗೌಡ ಅವರಿಗೆ ರವಾನಿಸುತ್ತಿದ್ದರು. ರಂಗೇಗೌಡ ಆಯಾ ಪರೀಕ್ಷೆಯವಿಷಯ ತಜ್ಞರನ್ನು ಕೂರಿಸಿಕೊಂಡು ಅವರಿಂದ ಅದಕ್ಕೆ ಉತ್ತರ ಬರೆಯಿಸಿ ಅದನ್ನು ಮತ್ತೆ ಪರೀಕ್ಷಾ ಕೇಂದ್ರಕ್ಕೆ ರವಾನಿಸುತ್ತಿದ್ದರು. ಆ ಉತ್ತರವನ್ನು ಇಡೀ ಪರೀಕ್ಷಾ ಕೇಂದ್ರದ ಮಕ್ಕಳಿಗೆ ಹೇಳಿಕೊಡುತ್ತಿದ್ದರು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮಾಹಿತಿ ನೀಡಿದರು.
‘ಮಾಗಡಿಯ ಇತರ ಪರೀಕ್ಷಾ ಕೇಂದ್ರಗಳಲ್ಲಿಯೂ ಇದೇ ರೀತಿ ಅಕ್ರಮ ನಡೆದಿರುವ ಸಾಧ್ಯತೆಗಳ ಬಗ್ಗೆಯೂ ತನಿಖೆ ಕೈಗೊಂಡಿದ್ದೇವೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲಾಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದೆವು ಎಂದು ಆರೋಪಿಗಳು ಹೇಳಿದ್ದಾರೆ. ಹಣ ಪಡೆದು ಉತ್ತರ ಹೇಳಿಕೊಡಲಾಗಿದೆಯೇ ಎಂಬ ಕುರಿತು ತನಿಖೆ ನಡೆಸಿದ್ದೇವೆ’ ಎಂದರು.
ಮಾಗಡಿ: ಅಂಕಗಳಿಕೆ ದಿಢೀರ್ ಏರಿಕೆ
ಪ್ರಕರಣದ ಪ್ರಮುಖ ಆರೋಪಿ ರಂಗೇಗೌಡ ಎಂಬುವರ ಪುತ್ರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಉತ್ತಮ ಅಂಕ ಪಡೆದಿದ್ದಾಳೆ. ಪರೀಕ್ಷೆ ವೇಳೆ ಮಗಳಿಗೂ ಸಹಾಯ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಪರೀಕ್ಷೆ ಅಕ್ರಮ ನಡೆದಿರುವ ಕೆಂಪೇಗೌಡ ಶಾಲೆ ಶೇ 100ರಷ್ಟು ಫಲಿತಾಂಶ ಪಡೆದಿದೆ. ಒಟ್ಟು 65 ವಿದ್ಯಾರ್ಥಿಗಳ ಪೈಕಿ 54 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ ಉಳಿದವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು 625ಕ್ಕೆ 624 ಅಂಕ ಪಡೆದಿದ್ದಾರೆ.
ಮಾಗಡಿಯ ಇನ್ನೂ ನಾಲ್ಕಾರು ಶಾಲೆಗಳು ಇದೇ ಮಾದರಿಯ ಫಲಿ ತಾಂಶ ದಾಖಲಿಸಿದ್ದು, ಅಂಕ ಗಳಿಕೆ ಪ್ರಮಾಣದಲ್ಲಿಯೂ ಸಾಕಷ್ಟು ಏರಿಕೆ ಕಂಡುಬಂದಿದೆ. ಈ ಎಲ್ಲದರ ಬಗ್ಗೆ ವಿವರಣೆ ನೀಡುವಂತೆ ಪೊಲೀಸರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಇಒ ತಲೆದಂಡ ಸಾಧ್ಯತೆ
ಅಕ್ರಮದ ಮಾಹಿತಿ ಗೊತ್ತಿದ್ದರೂ ಕ್ರಮ ಕೈಗೊಳ್ಳದ ಆರೋಪದ ಮೇಲೆ ಮಾಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಯತಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಸಂಗತಿ ಯತಿಕುಮಾರ್ ಅವರಿಗೆ ಮೊದಲೇ ತಿಳಿದಿತ್ತು. ಆರೋಪಿಗಳ ಬಗ್ಗೆ ಗೊತ್ತಿದ್ದರೂ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮಕ್ಕೆ ಮುಂದಾಗಲಿಲ್ಲ ಎಂದು ದೂರಲಾಗಿದೆ.
ಪ್ರತಿಕ್ರಿಯೆಗೆ ಯತಿಕುಮಾರ್ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ. ಬುಧವಾರ ಇಡೀ ದಿನ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.
ಬ್ಲಾಕ್‌ಮೇಲ್ ಮಾಡಿ ಸಿಕ್ಕಿಬಿದ್ದರು!
ಏಪ್ರಿಲ್ 11ರಂದು ವಿಜ್ಞಾನ ಪರೀಕ್ಷೆ ನಡೆದಿದ್ದು, ಅಂದು 10.30ಕ್ಕೆ ಆರೋಪಿ ರಂಗೇಗೌಡ ಪ್ರಶ್ನೆಪತ್ರಿಕೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಕೃಷ್ಣಮೂರ್ತಿಗೆ ಕಳುಹಿಸುವ ಬದಲಾಗಿ ಶಿಕ್ಷಕರ ಗುಂಪೊಂದಕ್ಕೆ ಹಾಕಿದ್ದರು. ನಂತರ ಎಚ್ಚೆತ್ತು ಅದನ್ನು ಡಿಲಿಟ್ ಮಾಡಿದ್ದರು. ಅಷ್ಟರಲ್ಲೇ ಶಿಕ್ಷಕ ಲೋಕೇಶ್ ಗುಂಪಿನಿಂದ ಪ್ರಶ್ನೆಪತ್ರಿಕೆಯನ್ನು ತಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡಿದ್ದರು.
ಇದನ್ನೇ ಇಟ್ಟುಕೊಂಡು ಶಿಕ್ಷಕ ಲೋಕೇಶ್, ರಂಗೇಗೌಡ ಅವರನ್ನು ಬ್ಲಾಕ್‌ಮೇಲ್ ಮಾಡಿ ₹10 ಸಾವಿರ ಪಡೆದಿದ್ದರು. ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತ ವಿಜಯ್‌ಕುಮಾರ್ ಸಹ ರಂಗೇಗೌಡ ಅವರನ್ನು ಬೆದರಿಸಿ ಹಣ ವಸೂಲಿ ಮಾಡಿದ್ದರು. ಈ ಇಬ್ಬರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇದಕ್ಕೆ ರಂಗೇಗೌಡ ಒಪ್ಪಿರಲಿಲ್ಲ. ಹೀಗಾಗಿ ಲೋಕೇಶ್ ಬೇರೊಂದು ಹೆಸರಿನಲ್ಲಿ ಮಾಗಡಿ ಪೊಲೀಸರಿಗೆ ಪತ್ರ ಬರೆದು ವಿಷಯ ಬಹಿರಂಗಪಡಿಸಿದರು ಎಂದು ತಿಳಿದುಬಂದಿದೆ.
ರಂಗೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಮಂಗಳವಾರ ಸಂಜೆ ರಾಮನಗರ ಡಿಡಿಪಿಐ ಗಂಗಣ್ಣಸ್ವಾಮಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗಂಗಣ್ಣಸ್ವಾಮಿ ಅವರು ಕಚೇರಿಯಲ್ಲೂ ಸಿಗಲಿಲ್ಲ, ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
**
10 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಎಲ್ಲ ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವುದು ಗೊತ್ತಾಗಿದ್ದು, ಶಿಕ್ಷಣ ಇಲಾಖೆಗೂ ಮಾಹಿತಿ ನೀಡಿದ್ದೇವೆ.
-ಕೆ. ಸಂತೋಷ್ ಬಾಬು, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.