ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ಕೂಡ್ಲೂರು ರಸ್ತೆಯಲ್ಲಿರುವ ಶಿಶಿರ ಹೋಂ ಸ್ಟೇನಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಬಾಡೂಟ ಸಿಗದೆ ಕಾರ್ಯಕರ್ತರು ನಿರಾಸೆಗೊಂಡರು.
ಬಿಜೆಪಿ- ಜೆಡಿಎಸ್ ಮೈತ್ರಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ, ಮಧ್ಯಾಹ್ನ ಕೋಳಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.
ವಿಷಯ ತಿಳಿದು ಚುನಾವಣಾ ಅಧಿಕಾರಿ ಪಿ.ಕೆ. ಬಿನೋಯ್ ನೇತೃತ್ವದ ಅಧಿಕಾರಿಗಳ ತಂಡ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿತು. ಅಡುಗೆ ತಯಾರಾಗುತ್ತಿದ್ದ ಕೋಣೆಗೆ ತೆರಳಿ ಪರಿಶೀಲನೆ ನಡೆಸಿ ಅಡುಗೆ ಕೋಣೆ ಮತ್ತು ಊಟದ ಕೋಣೆಯ ಬಾಗಿಲು ಬಂದ್ ಮಾಡಿ ಎಲ್ಲವನ್ನೂ ವಶಕ್ಕೆ ಪಡೆದರು.
ಸಭೆ ಮುಗಿಯುತ್ತಿದ್ದಂತೆ, ಪಕ್ಕದ ಅಡುಗೆ ಮನೆಯಿಂದ ಮೂಗಿಗೆ ಬಡಿಯುತ್ತಿದ್ದ ಬಾಡೂಟ ಸವಿಯಲು ಊಟದ ಕೋಣೆಯತ್ತ ನುಗ್ಗಿದವರನ್ನು ತಡೆದ ಪೊಲೀಸರು, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಊಟವನ್ನು ರದ್ದುಪಡಿಸಲಾಗಿದೆ ಎಂದು ವಾಪಸ್ ಕಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.