ADVERTISEMENT

ಚನ್ನಪಟ್ಟಣ ಉ‍ಪಚುನಾವಣೆ | ‘ಕೈ’ ಸೇರಿ ಹರಕೆಯ ಕುರಿಯಾದ ಯೋಗೇಶ್ವರ್: ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 7:28 IST
Last Updated 25 ಅಕ್ಟೋಬರ್ 2024, 7:28 IST
<div class="paragraphs"><p>ಸುದ್ದಿಗೋಷ್ಠಿಯಲ್ಲಿ&nbsp;ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿದರು</p></div>

ಸುದ್ದಿಗೋಷ್ಠಿಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿದರು

   

ರಾಮನಗರ: ಅಧಿಕಾರದಲ್ಲಿರುವ ಪಕ್ಷಕ್ಕೆ ಪಕ್ಷಾಂತರ ಮಾಡಿಕೊಂಡೇ ಬಂದಿರುವ ಸಿ.ಪಿ. ಯೋಗೇಶ್ವರ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಹರಕೆಯ ಕುರಿಯಾಗಿದ್ದಾರೆ ಎಂದು ಬಿಜೆಪಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನಲ್ಲಿ ಯೋಗೇಶ್ವರ್ ಮೊದಲ ಸಾಲಿನ ನಾಯಕರಾಗುವುದಿಲ್ಲ. ಬದಲಿಗೆ, ಮೂರನೇ ಸಾಲಿನ ನಾಯಕನಾಗಿ ಹಿಂದಕ್ಕೆ ಸರಿದಿದ್ದಾರೆ ಎಂದು ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಂದು ವ್ಯಂಗ್ಯವಾಡಿದರು.

ADVERTISEMENT

ವೈಯಕ್ತಿಕ ಅನುಕೂಲಕ್ಕಾಗಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆಯೇ ಹೊರತು, ಅಭಿವೃದ್ಧಿಗಾಗಿ ಅಲ್ಲ. ಪ್ರತಿ ಚುನಾವಣೆಗೆ ಒಂದೊಂದು ಪಕ್ಷದ ಪರ ವಾಲುವುದೇ ಅವರ ಚಾಳಿ ಎಂದು ಟೀಕಿಸಿದರು.

ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಿಸುವ ಸಲುವಾಗಿ ನಾನು, ಡಾ.‌ಅಶ್ವತ್ಥನಾರಾಯಣ ಸೇರಿದಂತೆ ಬಿಜೆಪಿ ನಾಯಕರು ಪ್ರಯತ್ನ ಮಾಡಿದೆವು. ಕಡೆಗೆ ಜೆಡಿಎಸ್ ಟಿಕೆಟ್ ನೀಡಲು ಎಚ್.ಡಿ. ಕುಮಾರಸ್ವಾಮಿ ಒಪ್ಪಿಕೊಂಡರು. ಅದನ್ನೂ ನಿರಾಕರಿಸಿದಾಗ ಬಿಜೆಪಿಯಿಂದಲೇ‌ ಕಣಕ್ಕಿಳಿಸಲು ಮುಂದಾದರು. ಆದರೆ, ಅಷ್ಟೊತ್ತಿಗಾಗಲೇ ಯೋಗೇಶ್ವರ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ, ರಾತ್ರೋರಾತ್ರಿ ಆ ಪಕ್ಷ ಸೇರಿ ಬಿಜೆಪಿಗೆ ದ್ರೋಹ ಬಗೆದರು ಎಂದರು.

ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿರುವುದರಿಂದ ಕಣದಲ್ಲಿ ತೀವ್ರ ಪೈಪೋಟಿ ಏರ್ಪಡಲಿದೆ. ನಿಖಿಲ್ ಗೆಲುವಿಗೆ ಎರಡೂ ಪಕ್ಷಗಳ ನಾಯಕರು ಪಣ ತೊಟ್ಟಿದ್ದು, ಅವರ ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಟುಂಬ ರಾಜಕಾರಣಕ್ಕೆ ಬಿಜೆಪಿ ವಿರೋಧವಿದೆ. ನಿಖಿಲ್ ಸ್ಪರ್ಧೆ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದ ಭಾಗವಾದರೂ, ಮೈತ್ರಿ ಭಾಗವಾಗಿ ನಾವು ಮೈತ್ರಿ ಧರ್ಮ ಪಾಲನೆ ಮಾಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ಚನ್ನಪಟ್ಟಣದ ಜನ ಕಾಂಗ್ರೆಸ್ ಅನ್ನು ಯಾವ ಕಾರಣಕ್ಕೂ ನಂಬಿಲ್ಲ‌. ಮುಂದೆಯೂ ನಂಬುವುದಿಲ್ಲ. ಯೋಗೇಶ್ವರ್ ಸೋಲಲಿದ್ದು, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.