ಹಾರೋಹಳ್ಳಿ: 3ನೇ ಕಾರ್ತಿಕ ಸೋಮವಾರದ ಪ್ರಯುಕ್ತ ತಟ್ಟೆಕೆರೆ ಬಳಿಯ ಕಣಿವೆ ಮಹದೇಶ್ವರ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು. ವಿಶೇಷ ಪೂಜೆಯಲ್ಲಿ ಸುತ್ತಮುತ್ತಲಿನಿಂದ ನೂರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು.
ಹಾರೋಹಳ್ಳಿ ತಾಲ್ಲೂಕಿನ ತಟ್ಟೆಕೆರೆ ಬಳಿಯ ಕಣಿವೆ ಮಹದೇಶ್ವರ ದೇವಸ್ಥಾನದಲ್ಲಿ ಕಣಿವೆ ಮಹದೇಶ್ವರ ಸೇವಾ ಮಂಡಳಿ ವತಿಯಿಂದ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರಿಂದಾಗಿ ದೇವಸ್ಥಾನದಲ್ಲಿ ಭಾರಿ ಜನದಟ್ಟಣೆ ಕಂಡುಬಂದಿತು. ಸರತಿ ಸಾಲಿನಲ್ಲಿ ಬಂದ ಭಕ್ತರು ದೇವರ ದರ್ಶನ ಪಡೆದರು.
ಹರಕೆ ಹೊತ್ತ ಭಕ್ತರು ದೇವರಿಗೆ ದೀಪ ಹಚ್ಚಿ ಹರಕೆ ತೀರಿಸಿಕೊಂಡರು. ದೇವಸ್ಥಾನದ ಆವರಣದಲ್ಲಿ ನೂಕು ನುಗ್ಗಲು ಉಂಟಾಗದಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಹಾರೋಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು.
ಉಚಿತ ವಿವಾಹ: ಕಣಿವೆ ಮಹದೇಶ್ವರ ದೇಗುಲದಲ್ಲಿ ಕಡೆಯ ಕಾರ್ತಿಕ ಸೋಮವಾರದಂದು 15 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಲು ಕೋರಲಾಗಿದೆ ದೇಗುಲ ಆಡಳಿತ ಮಂಡಳಿ ಮನವಿ ಮಾಡಿದೆ.
ಸೇವಾ ಮಂಡಳಿಯ ಅಧ್ಯಕ್ಷ ವೈ.ಪಾರ್ಥಸಾರಥಿ, ಉಪಾಧ್ಯಕ್ಷ ನವೀನ್ ಕುಮಾರ್, ಶಿವನಪ್ಪ, ಮಹದೇವಯ್ಯ, ಬೀರಪ್ಪ, ಅಂಗಡಿ ನಾಗೇಶ್, ಎಂ.ಮಹದೇವಯ್ಯ, ಟಿ.ಎಲ್.ಮಲ್ಲೇಗೌಡ, ಡಿ.ಎಸ್.ಭುಜಂಗಯ್ಯ, ಸೋಮಶೇಖರ್, ಪಟೇಲ್ ವೆಂಕಟೇಶ್, ಬಸವರಾಜು (ಜಾನಿಯಪ್ಪ),ಕೆಂಪಣ್ಣ, ಚಿಕ್ಕ ಉರುಗಯ್ಯ, ಸೇವಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.