ADVERTISEMENT

ರಾಮನಗರ: ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ

ಕೆಡಿಪಿ ಸಭೆಯಲ್ಲಿ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 5:52 IST
Last Updated 27 ಸೆಪ್ಟೆಂಬರ್ 2024, 5:52 IST
ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ತಾ.ಪಂ. ಇಒ ಪ್ರದೀಪ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ  ಕೆ. ರಾಜು, ತಹಶೀಲ್ದಾರ್ ತೇಜಸ್ವಿನಿ ಹಾಗೂ ಇತರರು ಇದ್ದಾರೆ
ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ತಾ.ಪಂ. ಇಒ ಪ್ರದೀಪ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ  ಕೆ. ರಾಜು, ತಹಶೀಲ್ದಾರ್ ತೇಜಸ್ವಿನಿ ಹಾಗೂ ಇತರರು ಇದ್ದಾರೆ   

ರಾಮನಗರ: ‘ಈ ಬಾರಿಯೂ ತಾಲ್ಲೂಕಿನಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಇದರಿಂದಾಗಿ ತಾಲ್ಲೂಕಿನ ಪ್ರಮುಖ ಬೆಳೆಗಳಾದ ಮಾವು, ತೆಂಗು, ರಾಗಿ ಸೇರಿದಂತೆ ಇತರ ಬೆಳೆಗಳನ್ನು ನೆಚ್ಚಿಕೊಂಡರುವ ರೈತರು ಸಂಕಷ್ಟದಲ್ಲಿದ್ದಾರೆ. ವಿವಿಧ ರೋಗಗಳು ಬೆಳೆಗಳನ್ನು ಕಾಡುತ್ತಿವೆ. ಅಧಿಕಾರಿಗಳು ಕಚೇರಿ ಬಿಟ್ಟು ಕ್ಷೇತ್ರದಲ್ಲಿ ಓಡಾಡಿ, ರೈತರ ನೆರವಿಗೆ ಧಾವಿಸಬೇಕು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಮಳೆ ಕೊರತೆಯಿಂದಾಗಿ ಕೆರೆಗಳು ತುಂಬಿಲ್ಲ. ಇನ್ನೂ ಹದಿನೈದು ದಿನ ಮಳೆ ಬಾರದಿದ್ದರೆ ಈ ಬಾರಿಯೂ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕಾದ ಸ್ಥಿತಿ ಬರುತ್ತದೆ. ಎಂತಹ ಸ್ಥಿತಿ ಎದುರಾದರೂ ಎದುರಿಸಲು ಅಧಿಕಾರಿಗಳು ಸನ್ನದ್ಧವಾಗಿರಬೇಕು’ ಎಂದರು.

‘ರೈತರು ಸಹ ಸಾಂಪ್ರದಾಯಿಕ ಕೃಷಿಗೆ ಜೋತು ಬೀಳದೆ ಲಾಭದಾಯಕ ಆಧುನಿಕ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಅಧಿಕ ಇಳುವರಿಯೊಂದಿಗೆ ಹೆಚ್ಚು ಲಾಭ ಪಡೆಯಲು ಏನೇನು ಮಾಡಬೇಕು ಎಂಬುದರ ಬಗ್ಗೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ರೈತರಿಗೆ ತಿಳಿವಳಿಕೆ ನೀಡಬೇಕು. ಪ್ರಾಯೋಗಿಕವಾಗಿ 200 ಎಕರೆಯಲ್ಲಿ ರೈತರು ವಿವಿಧ ಬೆಳೆಗಳನ್ನು ಬೆಳೆಯುವ ಪ್ರಯತ್ನಕ್ಕೆ ಕೈ ಹಾಕಿ’ ಎಂದು ಸಲಹೆ ನೀಡಿದರು.

ADVERTISEMENT

ಫಲಿತಾಂಶ ಸುಧಾರಿಸಿ: ‘ಎಸ್ಎಸ್‌ಎಲ್‌ಸಿಯಲ್ಲಿ ನಮ್ಮ ಜಿಲ್ಲೆಯ ಫಲಿತಾಂಶವು ತೀವ್ರ ಕುಸಿದಿದೆ. ಅದನ್ನು ಸುಧಾರಿಸಿ ಅಗ್ರ 10 ಸ್ಥಾನದೊಳಗೆ ಬರುವಂತೆ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ನುರಿತ ಶಿಕ್ಷಕರನ್ನು ಒಳಗೊಂಡ ಸಮಿತಿ ರಚಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಕೈ ಹಾಕಿದ್ದು, ಅದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ‘ಸಿಎಸ್‌ಆರ್ ಅನುದಾನದಲ್ಲಿ 5 ಮಾದರಿ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಜಾಗ ಗುರುತಿಸಿ, ತಹಶೀಲ್ದಾರ್‌ಗೆ ಪ್ರಸ್ತಾವ ಸಲ್ಲಿಸಿದೆ. ಈ ವರ್ಷದಲ್ಲಿ ಬನ್ನಿಕುಪ್ಪೆಯಲ್ಲಿ ಪ್ರಾರಂಭವಾಗಿದೆ. ಉಳಿದಂತೆ ಪಾದರಹಳ್ಳಿ ಮತ್ತು ಅವ್ವೇರಹಳ್ಳಿಯಲ್ಲಿ ಅಕ್ಟೋಬರ್ ಮೊದಲ ವಾರ ಭೂಮಿ ಪೂಜೆ ನೆರವೇರಿಸಲಾಗುವುದು. ಹಾರೋಹಳ್ಳಿ ಭಾಗದಲ್ಲಿ ಚೀಲೂರು ಮತ್ತು ಬನವಾಸಿಗಳ ಶಾಲೆಗಳು ಆಯ್ಕೆಯಾಗಿವೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಕನಕಪುರ ಬಿಇಒ ಮಾತನಾಡಿ, ‘ಕನಕಪುರದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ತೊಂದರೆಯಾಗಿದೆ. ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕಿದೆ. ಈ ನಿಟ್ಟಿನಲ್ಲಿ ಶಾಸಕರು ನೆರವಾಗಬೇಕು’ ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಹುಸೇನ್, ‘ಶಿಕ್ಷಕರ ಕೊರತೆ ಕುರಿತು ಶಿಕ್ಷಣ ಸಚಿವರಿಗೆ ಹಾಗೂ ನನಗೆ ಮನವಿ ಪತ್ರ ಕೊಡಿ. ನಾನು ಅವರೊಂದಿಗೆ ಮಾತನಾಡುವೆ’ ಎಂದು ಭರವಸೆ ನೀಡಿದರು.

ರೋಗದ ಮೇಲೆ ನಿಗಾ ಇರಲಿ: ‘ವೃಷಭಾವತಿ ನದಿ ಅಕ್ಕಪಕ್ಕದ ಗ್ರಾಮಗಳಲ್ಲಿ ಹಸುಗಳಿಗೆ ಸಿಡುಬು, ಕೊಟ್ಟಗಾಳು ಪಂಚಾಯ್ತಿ ವ್ಯಾಪ್ತಿಯಲ್ಲಿ ಚಪ್ಪೆ ರೋಗ ಹರಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಪಶುಪಾಲನಾ ಇಲಾಖಾ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು. ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಚತೆ ಇಲ್ಲ. ವೈದ್ಯರು ಈ ಬಗ್ಗೆ ನಿಗಾ ಇಡಬೇಕು’ ಎಂದರು.

ಬಿಸಿಎಂ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಆ ಬಗ್ಗೆ ಖಚಿತಪಡಿಸಿಕೊಳ್ಳಲು, ನಾನು ಯಾವ ಸಮಯದಲ್ಲಿ ಬೇಕಾದರೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ವಾರ್ಡನ್‌ಗಳು ಸ್ವಚ್ಚತೆಗೆ ಒತ್ತು ನೀಡಬೇಕು. ಮಕ್ಕಳಿಗೆ ಬಿಸಿ ನೀರು ಸೇರಿದಂತೆ ಹಾಸ್ಟೆಲ್‌ನಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು. ವಿದ್ಯಾರ್ಥಿಗಳಿಗೆ ಕೊಡುವ ಆಹಾರದ ಪಟ್ಟಿಯನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.

ಸಭೆಗೆ ಕೆಲ ಅಧಿಕಾರಿಗಳು ಗೈರಾಗಿದ್ದಕ್ಕೆ ಗರಂ ಆದ ಹುಸೇನ್, ಗೈರಾದವರಿಗೆ ನೋಟಿಸ್ ನೀಡಿ ಎಂದು ತಾಲ್ಲೂಕು ಪಂಚಾಯಿತಿ ಇಒ ಪ್ರದೀಪ್ ಅವರಿಗೆ ಸೂಚಿಸಿದರು. ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ತಾಲ್ಲೂಕು ಗ್ಯಾರಂಟಿ‌ ಸಮಿತಿ ಅಧ್ಯಕ್ಷರಾದ ವಿ.ಹೆಚ್. ರಾಜು, ಅಶೋಕ್, ತಹಶೀಲ್ದಾರ್ ತೇಜಸ್ವಿನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು

‘ಬಡವರು ಕಣ್ಣೀರು ಹಾಕ್ತಿದಾರೆ’

‘ಆಹಾರ ಇಲಾಖೆಯವರು ಜಿಲ್ಲೆಯಲ್ಲಿ 11873 ಪಡಿತರ ಚೀಟಿಗಳನ್ನು ರದ್ದು ಮಾಡಿದ್ದೀರಿ. ಇದರಿಂದಾಗಿ ಬಡವರು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳಿಲ್ಲದವರು ತಂದೆ– ತಾಯಿ ಇಲ್ಲದವರು ಗುಡಿಸಿಲಿನಲ್ಲಿ ವಾಸಿಸುವವರು ಹಾಗೂ ಕೂಲಿ ಮಾಡುವವವರ ಚೀಟಿಗಳನ್ನು ಯಾವ ಮಾನದಂಡದ ಮೇಲೆ ರದ್ದು ಮಾಡಿದ್ದೀರಿ? ಅವರ ಅನ್ನ ಕಿತ್ತುಕೊಳ್ಳುತ್ತಿದ್ದೀರಾ? ಹಿಂದೆ ಯಾವ ಸರ್ಕಾರವೂ ಮಾಡದ ಕೆಲಸವನ್ನು ನೀವ್ಯಾಕೆ ಮಾಡುತ್ತಿದ್ದೀರಿ. ಬಿಪಿಎಲ್ ಸರಕಾರ ಮಾಡದ ಕಾರ್ಯವನ್ನು ನೀವು ಅಧಿಕಾರಿಗಳು ಮಾಡುತ್ತಿದ್ದೀರಾ?’ ಎಂದು ಹುಸೇನ್ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ‘ಸರ್ಕಾರದ ಆದೇಶದಂತೆ ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗುತ್ತಿದೆ’ ಎಂದರು.

ಆಗ ಹುಸೇನ್ ‘ಇದನ್ನು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ತಾನೆ. ಅದು ಬಿಟ್ಟು ಏಕಾಏಕಿ ರದ್ದುಪಡಿಸಿ ನೈಜ ಫಲಾನುಭವಿಗಳಿಗೂ ತೊಂದರೆ ಮಾಡಿದರೆ ಹೇಗೆ?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.