ADVERTISEMENT

ಕೆಂಪಾಪುರ ನಾಡಪ್ರಭು ಕೆಂಪೇಗೌಡ ಐಕ್ಯವಾದ ಸ್ಥಳ: ‘ಜ್ಯೋತಿ’ಗಾಗಿ ಮಾತ್ರ ಸೀಮಿತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 5:03 IST
Last Updated 27 ಜೂನ್ 2024, 5:03 IST
ಮಾಗಡಿ ತಾಲ್ಲೂಕಿನಕ ಕೆಂಪಾಪುರದಲ್ಲಿರುವ ಕೆಂಪೇಗೌಡ ಅವರ ಸಮಾಧಿ
ಮಾಗಡಿ ತಾಲ್ಲೂಕಿನಕ ಕೆಂಪಾಪುರದಲ್ಲಿರುವ ಕೆಂಪೇಗೌಡ ಅವರ ಸಮಾಧಿ   

ಮಾಗಡಿ: ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವನ್ನು ಇಂದು ನಾಡಿನಾದ್ಯಂತ ವಿಜೃಂಭಣೆಯಿಂದ ಸರ್ಕಾರ ಆಚರಿಸುತ್ತಿದೆ. ಆದರೆ, ಕೆಂಪೇಗೌಡರು ಐಕ್ಯವಾಗಿರುವ, ಅವರ ಸಮಾಧಿ ಇರುವ ಕೆಂಪಾಪುರವನ್ನು ನಿರ್ಲಕ್ಷ್ಯ ಮಾಡಲಾಗಿದೆ.

ಹಾಗಾಗಿ, ಕೆಂಪಾಪುರವು ವರ್ಷಕ್ಕೊಮ್ಮೆ ಕೆಂಪೇಗೌಡರ ಜಯಂತಿ ದಿನದಂದು ಜ್ಯೋತಿ ಕೊಂಡೊಯ್ಯುವುದಕ್ಕೆ ಮಾತ್ರ ಸೀಮಿತವಾಗಿದೆ ಎಂಬುದು ಗ್ರಾಮಸ್ಥರ ಬೇಸರ.

ಮಾಗಡಿ ತಾಲ್ಲೂಕು ಕೆಂಪೇಗೌಡ ಅವ ತವರು ತಾಲ್ಲೂಕು. ಹಿಂದೆ ಗೌಡರು ಈ ತಾಲ್ಲೂಕನ್ನು ಆಡಳಿತ ಕೇಂದ್ರವಾಗಿ ಮಾಡಿಕೊಂಡು ಕೆರೆ–ಕಟ್ಟೆ, ಕಲ್ಯಾಣಿ, ಪ್ರಸಿದ್ಧ ದೇವಾಲಯನ್ನು ನಿರ್ಮಿಸಿ ಅಭಿವೃದ್ಧಿ ಮಾಡಿದ್ದಾರೆ. ಆದರೆ, ಅವರು ಐಕ್ಯವಾಗಿರುವ ಕೆಂಪಾಪುರದ ಸಮಾಧಿ ಸ್ಥಳ ಯಾವುದೇ ಸರ್ಕಾರ ಬಂದರೂ ಅಭಿವೃದ್ಧಿ ಕಂಡಿಲ್ಲ.

ADVERTISEMENT

12 ವರ್ಷಗಳಿಂದಲೂ ಜನಪ್ರತಿನಿಧಿಗಳು ಕೆಂಪಾಪುರವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ, ಪರಿಣಾಮ ಮಾತ್ರ ಶೂನ್ಯವಾಗಿದೆ.

ಗ್ರಾಮ ಸ್ಥಳಾಂತರ: ಕೆಂಪೇಗೌಡಅ ವರು ಐಕ್ಯವಾಗಿರುವ ಸ್ಥಳವನ್ನು ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಗ್ರಾಮವನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಕೆಂಪಾಪುರದ ಸಮೀಪದಲ್ಲೇ ರಾಜ್ಯ ಸರ್ಕಾರ 5 ಎಕರೆ ಸರ್ಕಾರಿ ಜಾಗವನ್ನು ಗ್ರಾಮಸ್ಥರಿಗೆ ನೀಡಲಾಗಿದೆ. ಇಲ್ಲಿ  ಗ್ರಾಮಸ್ಥರಿಗಾಗಿ ಪ್ರತ್ಯೇಕ ಬಡಾವಣೆ (ಗ್ರಾಮ) ನಿರ್ಮಾನಕ್ಕಾಗಿ ಜಾಗ ಗುರುತಿಸಲಾಗಿದೆ.  ಈಗಾಗಲೇ ಸರ್ಕಾರದಿಂದ 55ಕ್ಕೂ ಹೆಚ್ಚು ಮನೆ ಮಾಲೀಕರಿಗೆ ಪರಿಹಾರದ ಹಣವನ್ನೂ ನೀಡಲಾಗಿದೆ. ಆದರೆ, ಈ ಜಾಗದ ಹಕ್ಕುಪತ್ರ ನೀಡದ ಕಾರಣ ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.

ಗ್ರಾಮಸ್ಥರಿಗೆ ಮನೆ ನಿರ್ಮಾಣಕ್ಕಾಗಿ 30x40 ಅಳತೆಯ ನಿವೇಶನವನ್ನೂ ನಿಗದಿ ಮಾಡಿ, ಮಾಜಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಅವರ ನೇತೃತ್ವದಲ್ಲಿ 10 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ.

ಆದರೆ,  ಚುನಾವಣೆ ನಂತರ ಕಾಂಗ್ರೆಸ್  ಅಧಿಕಾರಕ್ಕೆ ಬಂದ ಮೇಲೆ ಸರಿಯಾಗಿ ನಿವೇಶನ ಹಂಚಿಕೆಯಾಗಿಲ್ಲ. ಈ ಕಾರಣಕ್ಕೆ ಕಳೆದ ಒಂದು ವರ್ಷದಿಂದಲೂ ಯಾರಿಗೂ ಹಕ್ಕುಪತ್ರ ನೀಡಿಲ್ಲ ಇದರಿಂದ ಕೆಂಪಾಪುರ ಗ್ರಾಮಸ್ಥರಿಗೆ ಆತಂಕ ಉಂಟಾಗಿದೆ.

ನಮಗೆ ನಿವೇಶನ ಹಂಚಿಕೆ ಮಾಡಿದರೆ ಸರ್ಕಾರ ನೀಡಿರುವ ಹಣದಲ್ಲಿ ಮನೆ ಕಟ್ಟಿಕೊಳ್ಳುತ್ತೇವೆ. ಈಗ ನಿವೇಶನ ಇಲ್ಲದೆ ಹಣವು ಕೂಡ ಖರ್ಚಾಗುತ್ತಿದ್ದು ಇನ್ನೂ ಎರಡು ವರ್ಷಗಳು ಕಳೆದರೆ ನಮ್ಮ ಬಳಿ ಹಣವಿಲ್ಲದೆ ನಾವು ಗುಡಿಸಿನಲ್ಲಿ ವಾಸ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರ ಕೂಡಲೇ ನಮಗೆ ನಿವೇಶನವನ್ನು ಹಂಚಿ ಮೂಲ ಸೌಲಭ್ಯಗಳನ್ನು ಬಡಾವಣೆಗೆ ನೀಡಬೇಕು ಎಂದು ಕೆಂಪಾಪುರದ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸಮಾಧಿ ಶಿಥಿಲ : ಕೆಂಪೇಗೌಡರ ಸಮಾಧಿ ಗೋಪುರ ಶಿಥಿಲವಾಗಿದ್ದು ಕಲ್ಲುಗಳು ಬಿರುಕು ಬಿಟ್ಟಿವೆ. ಬಿರುಕು ಬಿಟ್ಟಿರುವ ಕಲ್ಲುಗಳಿಗೆ ಆಧಾರವಾಗಿ ಮತ್ತೊಂದು ಕಲ್ಲನ್ನು ನೀಡಲಾಗಿದೆ. ಸಾಕಷ್ಟು ಹಳೆಯದಾದ ಇಟ್ಟಿಗೆ ಗೋಪುರ ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿದೆ.

ಪ್ರತಿ ವರ್ಷ ಕೆಂಪೇಗೌಡರು ಹುಟ್ಟಿದ ದಿನದಂದು ಸಮಾಧಿಗೆ, ಗೋಪುರಕ್ಕೆ ಹೂವಿನ ಹಾರ ಹಾಕಿ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ುಳಿದ ದಿನಗಳಲ್ಲಿ ಸಮಾಧಿ ಸ್ಥಳವನ್ನು ನೋಡುವವರೇ ಇಲ್ಲದಂತಾಗಿದೆ.

₹ 20 ಕೋಟಿಯಲ್ಲಿ ಅಭಿವೃದ್ಧಿ: ಕೆಂಪೇಗೌಡ ಪ್ರಾಧಿಕಾರದಿಂದ ಕೆಂಪೇಗೌಡರ ಸಮಾಧಿ ಸ್ಥಳ ಹಾಗೂ ಮಾಗಡಿ ಕೋಟೆ ಅಭಿವೃದ್ಧಿಗೆ ₹ 50 ಕೋಟಿ  ಬಿಡುಗಡೆಯಾಗಿದೆ. ₹ 20 ಕೋಟಿಯಲ್ಲಿ ಶೀಘ್ರದಲ್ಲೇ ಕೆಂಪಾಪುರ ಸಮಾಧಿ ಸ್ಥಳ ಅಭಿವೃದ್ಧಿ ಮಾಡಿ ಪ್ರವಾಸಿ ಸ್ಥಳವಾಗಿ ಮಾಡಲಾಗುತ್ತದೆ ಎಂದು  ಶಾಸಕ ಎಚ್‌.ಸಿ. ಬಾಲಕೃಷ್ಣ ತಿಳಿಸಿದ್ದಾರೆ.

ಟೆಂಡರ್ ಹಂತದಲ್ಲಿ ಇದ್ದು ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಐಕ್ಯ ಸ್ಥಳಕ್ಕೆ ಕಾಯಕಲ್ಪ ನೀಡುವ ಮೂಲಕ ಕೆಂಪೇಗೌಡ ಅವರಿಗೆ ಗೌರವ ಸಮರ್ಪಿಸಲಾಗುವುದು. ಒಂದು ವರ್ಷದೊಳಗೆ ಅಭಿವೃದ್ಧಿ ಕಾಮಗಾರಿ ಪೂರ್ಣವಾಗುತ್ತದೆ ಎನ್ನುತ್ತಾರೆ ಅವರು.

ಶ್ರೀಗಳಿಂದ ಪಾದಯಾತ್ರೆ: ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿ ಸ್ಥಳ ಪತ್ತೆಯಾದ ಸಮಯದಲ್ಲಿ ಕೆಂಪೇಗೌಡರ ಸ್ಥಳವನ್ನು ಅಭಿವೃದ್ಧಿಪಡಿಸಬೇಕು ಹಾಗೂ ಸರ್ಕಾರರದಿಂದ ಕೆಂಪೇಗೌಡ ಜಯಂತಿ ಆಚರಣೆ ಮಾಡಬೇಕು ಎಂದು ಸರ್ಕಾರದ ಗಮನ ಸೆಳೆಯಲು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಲಾಗಿತ್ತು.

ಹಲವು ಮಠಾಧ್ಯಕ್ಷರು ಸೇರಿ ಮಾಗಡಿ ಕೋಟೆ ಮೈದಾನದಿಂದ ಕೆಂಪಾಪುರದವರೆಗೂ ಮಾಡಿದ ಪಾದಯಾತ್ರೆಯ ಪರಿಣಾಮ ಜೂನ್‌ 27ರಂದು ಕೆಂಪೇಗೌಡ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಘೋಷಿಸಿದೆ.

ಸಮಾಧಿಯ ಕಲ್ಲು ಬಿರುಕು ಬಿಟ್ಟಿರುವುದು
ಕೆಂಪಾಪುರ ಗ್ರಾಮಸ್ಥರಿಗೆ  ಮನೆ ನಿರ್ಮಿಸಲು ರಾಜ್ಯ ಸರ್ಕಾರ  ಐದು ಎಕರೆ ಮಂಜೂರು  5 ಎಕರೆ ಬಡಾವಣೆ ಜಾಗ ನಿಮರ್ಾಣ ಮಾಡಿರುವುದು

ನೀಲನಕ್ಷೆ ಸಿದ್ಧ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಂಪೇಗೌಡ ಪ್ರಾಧಿಕಾರದ ರಚಿಸಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪ್ರಾಧಿಕಾರದಿಂದ ಸಮಾಧಿ ಸ್ಥಳ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಎಚ್‌.ಸಿ.ಬಾಲಕೃಷ್ಣ ಶಾಸಕ ಮಾಗಡಿ ಸರ್ಕಾರದ ನಿರ್ಲಕ್ಷ್ಯ ಕಳೆದ ಬಿಜೆಪಿ ಸರ್ಕಾರದಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಕೆಂಪಾಪುರ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಜಾಗವನ್ನು ಗ್ರಾಮಸ್ಥರಿಗೆ ಮೀಸಲಿರಿಸಿದ್ದೆ.  ಅವರಿಗೆ ಉಚಿತವಾಗಿ 30X40 ಅಳತೆಯ ನಿವೇಶನದ ಜೊತೆಗೆ ಸಾಕುಪ್ರಾಣಿಗಳಿಗಾಗಿ 10X10 ಅಳತೆಯ ಜಾಗವನ್ನು ಕೂಡ ನೀಡುವ ಕೆಲಸ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಪತನವಾದ ನಂತರ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಎ.ಮಂಜುನಾಥ್ ಮಾಜಿ ಶಾಸಕ ಮಾಗಡಿ ಪ್ರತಿ ವರ್ಷ ಸ್ಮರಿಸಿ ಕೆಂಪೇಗೌಡರು ಎಲ್ಲಾ ಜನಾಂಗಕ್ಕೂ ಅನುಕೂಲವಾಗುವ ನಿಟ್ಟಿನಲ್ಲಿ ತಮ್ಮ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಹೆಸರು ಉಳಿಸುವ ನಿಟ್ಟಿನಲ್ಲಿ ಮಾಗಡಿಯಲ್ಲಿ  ಕೆಂಪೇಗೌಡ ಅವರ ಕಂಚಿನ ಪ್ರತಿಮೆ ನಿರ್ಮಿಸಿ ಪ್ರತಿವರ್ಷವೂ ಅವರ ಜಯಂತಿ ಆಚರಿಸುವಂತಾಗಬೇಕು
ಎಚ್.ಎಂ.ಕೃಷ್ಣಮೂರ್ತಿ ಅಧ್ಯಕ್ಷ ಕೆಂಪೇಗೌಡ ಅಭಿವೃದ್ಧಿ ಸಮಿತಿ ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.