ಚನ್ನಪಟ್ಟಣ: ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಯಿತು.
ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿಯಿಂದ ಇದೇ ಮೊದಲ ಬಾರಿಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆದಿಚುಂಚನಗಿರಿ ಶಾಖಾ ಮಠಧ ಶಾಂತಾನಂದನಾಥ ಸ್ವಾಮೀಜಿ, ‘ನಾಡಪ್ರಭು ಕೆಂಪೇಗೌಡ ಅವರ ಚಿಂತನೆ, ಆಡಳಿತ ವೈಖರಿ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಸಮೃದ್ಧ ನಾಡು ಕಟ್ಟಲು ಶ್ರಮಿಸಬೇಕು’ ಕರೆ ನೀಡಿದರು.
ಕೆಂಪೇಗೌಡರ ಜಯಂತಿ ಆಚರಿಸುವುದು ಮುಖ್ಯವಲ್ಲ. ಅವರು ನಾಡಿಗೆ ನೀಡಿದ ಕೊಡುಗೆಗಳು, ದೂರದೃಷ್ಟಿ ಬಗ್ಗೆ ಚಿಂತನೆ ಮಾಡುವುದು ಅಗತ್ಯ. ಇಂದಿನ ಯುವ ಸಮೂಹ ಕೆಂಪೇಗೌಡರ ತತ್ವ, ಆದರ್ಶಗಳನ್ನು ಮೈಗೂಡಿಕೊಂಡು ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಕೆ. ವೆಂಕಟರಾಮೇಗೌಡ, ‘ಒಕ್ಕಲಿಗ ಸಮುದಾಯದವರು ಜಾಗೃತರಾಗಿ ಸಂಘಟಿತರಾಗಬೇಕು. ಒಕ್ಕಲಿಗ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು’ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಚಂದ್ರು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಸಾಧನೆ, ಚಿಂತನೆ, ದೂರದೃಷಿ, ಆಡಳಿತ ಶೈಲಿಯನ್ನು ಪರಿಚಯಿಸಿಕೊಟ್ಟರು.
ಉದ್ಯಮಿ ಪ್ರಸನ್ನ ಪಿ.ಗೌಡ, ರಾಷ್ಟ್ರೀಯ ಯುವ ಪ್ರತಿಷ್ಠಾನದ ಅಧ್ಯಕ್ಷ ಪ್ರಮೋದ್ ಎಂ. ಶ್ರೀನಿವಾಸ್, ಮುಖಂಡ ಗೋವಿಂದಹಳ್ಳಿ ನಾಗರಾಜು, ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಪ್ರಮುಖರಾದ ಧರಣೀಶ್ ರಾಂಪುರ, ರವೀಶ್ ಎಲೇಕೇರಿ, ಬಿ.ಟಿ.ನಾಗೇಶ್, ಡಿ.ಕೆ.ಕಾಂತರಾಜು, ಎಂ.ಎನ್.ಆನಂದಸ್ವಾಮಿ, ರಮೇಶ್ ಗೌಡ, ತಿಪ್ರೇಗೌಡ, ವಂದಾರಗುಪ್ಪೆ ಚಂದ್ರಣ್ಣ, ಶಿವಲಿಂಗಯ್ಯ, ಪ್ರಮೋದ್, ಸುನೀಲ್, ಪಿ.ಡಿ.ರಾಜು, ಚಂದ್ರುಸಾಗರ್, ಎಲೇಕೇರಿ ಮಂಜುನಾಥ್, ಮೆಹರೀಶ್, ಹರೂರು ರಾಜಣ್ಣ, ಬೇವೂರು ಯೋಗೇಶ್, ತಿಟ್ಟಮಾನರಹಳ್ಳಿ ಅಭಿಲಾಷ್, ಮೆಂಗಳ್ಳಿ ಮಹೇಶ್, ಚೇತನ್ ಕೀಕರ್, ಮಳೂರುಪಟ್ಟಣ ರವಿ, ವಿಜಯ್ ರಾಂಪುರ, ಶಂಭೂಗೌಡ, ಡಾ.ಬಿ.ಟಿ.ನೇತ್ರಾವತಿಗೌಡ, ಇತರರು ಭಾಗವಹಿಸಿದ್ದರು.
ಇದಕ್ಕೂ ಮೊದಲು ನಗರದ ಮಂಗಳವಾರಪೇಟೆಯ ಬಸವನಗುಡಿ ವೃತ್ತದಿಂದ ವಿವಿಧ ಜಾನಪದ ಕಲಾತಂಡಗಳು ಹಾಗೂ ಮಹಿಳೆಯರ ಪೂರ್ಣಕುಂಭದೊಂದಿಗೆ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು ಬೃಹತ್ ಮೆರವಣಿಗೆ ನಡೆಸಲಾಯಿತು. ಜೋಡೆತ್ತುಗಳು, ಕುರಿ ಹಾಗೂ ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕಂಸಾಳೆ ಕುಣಿತ, ಬೃಹತ್ ಗೊಂಬೆಗಳ ಪ್ರದರ್ಶನ ಎಲ್ಲರ ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.