ADVERTISEMENT

ಕೆಂಪೇಗೌಡರ ಅಭಿವೃದ್ಧಿ ದೃಷ್ಟಿಕೋನ ಮಾದರಿ

ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ; ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 6:29 IST
Last Updated 28 ಜೂನ್ 2024, 6:29 IST
<div class="paragraphs"><p> ಕೆಂಪೇಗೌಡರ ಪ್ರತಿಮೆಗೆ ಗುರುವಾರ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಎಡಿಸಿ ಶಿವಾನಂದಮೂರ್ತಿ, ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ. ಚಂದ್ರಯ್ಯ ಹಾಗೂ ಗಣ್ಯರು ಮಾಲಾರ್ಪಣೆ ಮಾಡಿದರು</p></div>

ಕೆಂಪೇಗೌಡರ ಪ್ರತಿಮೆಗೆ ಗುರುವಾರ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಎಡಿಸಿ ಶಿವಾನಂದಮೂರ್ತಿ, ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ. ಚಂದ್ರಯ್ಯ ಹಾಗೂ ಗಣ್ಯರು ಮಾಲಾರ್ಪಣೆ ಮಾಡಿದರು

   

ರಾಮನಗರ: ‘ಜನಮನದಲ್ಲಿ ಬೆರೆತಿರುವ ಕೆಂಪೇಗೌಡರು ಈ ನಾಡಿನ ಸಂಸ್ಕೃತಿಯ ಭಾಗವಾಗಿದ್ದಾರೆ. ಅವರ ಅಭಿವೃದ್ಧಿಯ ದೃಷ್ಟಿಕೋನ ಇಂದಿಗೂ ಮಾದರಿಯಾದುದು. ಬೆಂಗಳೂರು ಇಂದು ಜಾಗತಿಕವಾಗಿ ಹೆಸರು ಮಾಡಿದ್ದರೆ, ಅದಕ್ಕೆ ಕೆಂಪೇಗೌಡರ ಅಭಿವೃದ್ಧಿಯ ದೂರದೃಷ್ಟಿಯೇ ಕಾರಣ’ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಬಣ್ಣಿಸಿದರು.

ಜಿಲ್ಲಾಡಳಿತ, ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಹಾಗೂ ರಾಮನಗರ ತಾಲ್ಲೂಕು ಒಕ್ಕಲಿಗರ ಸಂಘದ ಸಹಯೋಗದಲ್ಲಿ, ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಕೆಂಪೇಗೌಡರು ತಮ್ಮ ಆಡಳಿತಾವಧಿಯಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೂ ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದರು. ಆದರೆ, ಈಗ ಕರ್ನಾಟಕದವವರು ತಮ್ಮ ರಾಜ್ಯ ಬಿಟ್ಟು ಹೊರಗೆ ಹೋಗುವುದಿಲ್ಲ. ನಾನು ಕೇರಳದವನಾದರೂ ಇಲ್ಲಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲ್ಲಿಯವರು ತಮ್ಮ ಜಿಲ್ಲೆ ಮತ್ತು ರಾಜ್ಯಕ್ಕಷ್ಟೇ ಸೀಮಿತವಾಗಬಾರದು. ಅವಕಾಶಗಳು ಸಿಕ್ಕಾಗ ದೇಶ–ವಿದೇಶಗಳಿಗೆ ಹೋಗಿ ತಮ್ಮ ಅಸ್ತಿತ್ವ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.

ಮಾಜಿ ಶಾಸಕ‌ ಕೆ. ರಾಜು, ‘ಜನಪರ ಆಡಳಿತ ನೀಡಿದವರಲ್ಲಿ ಕೆಂಪೇಗೌಡರು ಪ್ರಮುಖರು. ಸಿದ್ದರಾಮಯ್ಯ ಅವರು ಮೊದಲನೇ ಸಲ ಮುಖ್ಯಮಂತ್ರಿಯಾಗಿದ್ದಾಗ ಕೆಂಪೇಗೌಡರ ಜಯಂತಿ ಆಚರಣೆಯನ್ನು ಜಾರಿಗೆ ತಂದರು. ಅಂದಿನಿಂದ ರಾಜ್ಯದಾದ್ಯಂತ ಜಯಂತಿ ಆಚರಿಸಲಾಗುತ್ತಿದೆ’ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ಹಾಗೂ ಗಣ್ಯರು ಮಾಲಾರ್ಪಣೆ ಮಾಡಿದರು.

ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಕ್ಕಲಿಗ ಸಮುದಾಯದ ಬಿ.ಎನ್. ಶಿವಣ್ಣ, ಸಾಹಿತಿ ಅರುಣ್ ಕವಣಾಪುರ, ಪತ್ರಕರ್ತ‌ ಶಶಿಕುಮಾರ್, ಟೇಕ್ವಾಂಡೊ ಕ್ರೀಡಾಪಟು ಶಾನ್ವಿ, ಸಬ್ಬಕೆರೆ ಶಿವಲಿಂಗಪ್ಪ, ರೇವಣ್ಣ ಬಾನಂದೂರು, ಹನುಮಂತೇಗೌಡ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಬಮೂಲ್ ನಿರ್ದೇಶಕ ಪಿ. ನಾಗರಾಜ್, ಡಿಡಿಪಿಐ ವಿ.ಸಿ. ಬಸವರಾಜೇಗೌಡ, ತಾ.ಪಂ. ಇಒ ಪ್ರದೀಪ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು ಟಿ.ಜಿ, ರಾಮನಗರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮೇಲಿಂಗು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್ ಹಾಗೂ ಇತರರು ಇದ್ದರು.

ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ. ಚಂದ್ರಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಕೆ. ರವಿ ಅತಿಥಿಗಳನ್ನು ಸ್ವಾಗತಿಸಿದರು. ಶಿವಸ್ವಾಮಿ ನಿರೂಪಣೆ ಮಾಡಿದರು.

ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗಣ್ಯರು ಸನ್ಮಾನಿಸಿದರು

ಜನಾನುರಾಗಿ ಎಲ್ಲರನ್ನೂ ತಲುಪಬೇಕಿದೆ’

ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿದ ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ‘ಜನಾನುರಾಗಿಯಾಗಿದ್ದ ಕೆಂಪೇಗೌಡರ ಅಭಿವೃದ್ಧಿಯ ದೂರದೃಷ್ಟಿಯ ಪ್ರಸ್ತುತತೆ ಮತ್ತು ವಿಚಾರಗಳು ಶಾಲಾ ಮಕ್ಕಳಾದಿಯಾಗಿ ಎಲ್ಲಾ ಸಮುದಾಯಗಳನ್ನು ತಲುಪಬೇಕಿದೆ. ಆಡಳಿತದ ದೃಷ್ಟಿಯಿಂದ ಯಲಹಂಕ ಕೊಡಿಗೇಹಳ್ಳಿ ಮಡಿವಾಳ ಹಾಗೂ ನವ ಬೆಂಗಳೂರನ್ನು ಕೆಂಪೇಗೌಡರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ರಾಜಧಾನಿಯಾದ್ಯಂತ 570 ಕೆರೆಗಳನ್ನು ನಿರ್ಮಿಸಿದ್ದರು. ಎಲ್ಲಾ ಸಮುದಾಯಗಳ ಶ್ರೇಯೋಭಿವೃದ್ಧಿಗೂ ಶ್ರಮಿಸಿದ ಅವರು 16 ಪೇಟೆಗಳನ್ನು ಸ್ಥಾಪಿಸಿ ಅನುಕೂಲ ಮಾಡಿಕೊಟ್ಟಿದ್ದರು’ ಎಂದು ಹೇಳಿದರು. ಜನಪ್ರತಿನಿಧಿಗಳ ಅನುಪಸ್ಥಿತಿ ಜಿಲ್ಲಾ ಮಟ್ಟದ ಕಾರ್ಯಕ್ರಮವಾದರೂ ಯಾವೊಬ್ಬ ಜನಪ್ರತಿನಿಧಿಯೂ ಭಾಗವಹಿಸಲಿಲ್ಲ. ಸ್ಥಳೀಯ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಸ್ವಲ್ಪ ತಡವಾಗಿ ಬರಲಿದ್ದಾರೆ ಎಂದು ವೇದಿಕೆ ಕಾರ್ಯಕ್ರಮವನ್ನು ಮಧ್ಯಾಹ್ನ ಶುರು ಮಾಡಲಾಯಿತು. ಕಡೆವರೆಗೂ ಬರಲಿಲ್ಲ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸಂಸದ ಡಾ. ಸಿ.ಎನ್. ಮಂಜುನಾಥ್ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಆಹ್ವಾನಪತ್ರಿಕೆಯಲ್ಲಿದ್ದ ಬಹುತೇಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಸಭಾಂಗಣದಲ್ಲಿ ಎದ್ದು ಕಾಣುತ್ತಿದ್ದ ಖಾಲಿ ಖುರ್ಚಿಗಳು ವಿದ್ಯಾರ್ಥಿಗಳಿಂದಾಗಿ ತುಂಬಿದವು. ಮೆರವಣಿಗೆಗೂ ವಿದ್ಯಾರ್ಥಿಗಳೇ ಕಳೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.