ರಾಮನಗರ: ತಾಲ್ಲೂಕಿನ ಬಿಳಗುಂಬ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ಶಾಲೆಗೆ ದಾನಿಗಳು ಧ್ವನಿವರ್ಧಕ, ಐ.ಡಿ ಕಾರ್ಡ್, ಶೂ, ಸಾಕ್ಸ್, ಟೈ, ಬೆಲ್ಟ್, ಸೇರಿದಂತೆ ಇತರ ಸಾಮಗ್ರಿಗಳನ್ನು ವಿತರಿಸಿದರು.
ನಾಡಪ್ರಭು ಕೆಂಪೇಗೌಡರ ಅಭಿಮಾನಿಗಳ ಬಳಗ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದ್ದ ಜಯಂತ್ಯುತ್ಸವವನ್ನು ಬಿಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಗೌಡ ಉದ್ಘಾಟಿಸಿದರು.
‘ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಇತಿಹಾಸ ಹಾಗೂ ಅವರ ಆದರ್ಶಗಳನ್ನು ಯುವಜನರು ಅರಿತುಕೊಳ್ಳಬೇಕು. ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು ಎಂಬ ಮಾತಿನಂತೆ, ನಮ್ಮ ಚರಿತ್ರೆಯ ಬಗ್ಗೆ ನಮ್ಮ ಅರಿವಿದ್ದಾಗ ಮಾತ್ರ ಹೊಸ ಸಾಧನೆ ಮಾಡಲು ಸಾಧ್ಯ’ ಎಂದು ಅವರು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪರಿಸರ ಪ್ರೇಮಿ ಬಿ.ಟಿ. ರಾಜೇಂದ್ರ, ‘ಕೆಂಪೇಗೌಡರ ಕುರಿತು ಶಾಲಾ ಹಂತದಲ್ಲೇ ತಿಳಿಸುವ ಕೆಲಸವಾಗಬೇಕಿದೆ. ಅವರು ಕಟ್ಟಿದ ಕೆರೆಗಳು, ಕೋಟೆಗಳು ಹಾಗೂ ಪೇಟೆಗಳ ಬಗ್ಗೆ ಅರಿವು ಮೂಡಿಸಬೇಕು. ಆ ಮೂಲಕ, ನಮ್ಮನ್ನಾಳಿದವರ ಚರಿತ್ರೆಯ ಕುರಿತು ಅವರಿಗೆ ಜಾಗೃತಿ ಮೂಡಿಸಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಮಾತನಾಡಿ, ‘ಕೆಂಪೇಗೌಡರ ಸೇವೆ ಅನನ್ಯ. ಅವರು ನಿರ್ಮಿಸಿದ ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಅವರು ಪ್ರತಿ ವರ್ಗದವರಿಗೂ ಪೇಟೆಗಳನ್ನು ಸ್ಥಾಪಿಸಿದ್ದಾರೆ. ಅವರು ನಿರ್ಮಿಸಿದ ಕೆರೆಗಳು ಕೆಲವು ಕಣ್ಮರೆಯಾಗಿವೆ. ಅವುಳಿಗೆ ಮರುಜೀವ ನೀಡುವ ಕೆಲಸವಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಪಂಚಾಯಿತಿ ಪಿಡಿಒ ಮಹೇಶ್, ಸದಸ್ಯ ಕೆಂಚೇಗೌಡ, ಪಶು ವೈದ್ಯ ಮಲ್ಲೇಶ್, ಮುಖ್ಯ ಶಿಕ್ಷಕಿ ಲತಾ, ಎಸ್‌ಡಿಎಂಸಿ ಅಧ್ಯಕ್ಷ ಯೋಗಾನಂದ, ಬಿ.ಟಿ. ರಾಮಯ್ಯ, ಮಹದೇವಣ್ಣ, ರಾಜಣ್ಣ, ಅನಿಲ್, ತಿಮ್ಮಣ್ಣ, ಭಾಗ್ಯಮ್ಮ, ಅರುಣ್ ಕುಮಾರ್, ಉಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.