ಚನ್ನಪಟ್ಟಣ: ತಾಲ್ಲೂಕಿನ ಮೈಲನಾಯಕನ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಕೊಲ್ಲಾಪುರದಮ್ಮ ದೇವಿಯ ಕೊಂಡ ಹಾಗೂ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
24 ವರ್ಷಗಳ ಬಳಿಕ ನಡೆದ ದೇವಿಯ ಕೊಂಡೋತ್ಸವಕ್ಕೆ ಬುಧವಾರ ರಾತ್ರಿ ಸೌದೆ ಹಾಕಿ ಅಗ್ನಿ ಸ್ಪರ್ಶ ಮಾಡಲಾಯಿತು.
ಮುಂಜಾನೆ ಆರು ಗಂಟೆಯ ಸಮಯದಲ್ಲಿ ದೇವಿಯ ಕರಗ ಮತ್ತು ಕಳಸ ಹೊತ್ತ ಇಬ್ಬರು ಅರ್ಚಕರು ಕೊಂಡ ಹಾಯ್ದರು. ಈ ದೃಶ್ಯವನ್ನು ಸಾವಿರಾರು ಭಕ್ತರು ಕಣ್ಮುಂಬಿಕೊಂಡು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದರು.
ಕೊಂಡದ ಬಳಿಕ ತಾಲ್ಲೂಕಿನ ಹರೂರು ಗ್ರಾಮದಿಂದ ಹೂಹೊಂಬಾಳೆ ಮೂಲಕ ಹರೂರು ಮಾರಮ್ಮ, ಮೊಗೇನಹಳ್ಳಿ ಮಾರಮ್ಮ, ಲಕ್ಕೋಜನಹಳ್ಳಿ ಆದಿಶಕ್ತಿ, ಕವಣಾಪುರ ಮಾರಮ್ಮ, ಹನುಮಾಪುರದೊಡ್ಡಿ ಮಾರಮ್ಮ, ಕದಲೂರು ಪಟ್ಟಲದಮ್ಮ, ದಶವಾರ ಬಿಸಿಲಮ್ಮ, ತೊರೆಹೊಸೂರು ಮಾರಮ್ಮನ ಜೊತೆ ಕೊಲ್ಲಾಪುರದಮ್ಮ ದೇವಿಯ ಪೂಜಾ ಕುಣಿತ ನಡೆಯಿತು. ಇದಕ್ಕೆ ಕಂಸಾಳೆ, ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಜೊತೆಗೂಡಿದವು.
ಬಳಿಕ ದೇವಿಯ ಸಿಡಿ ಉತ್ಸವ ನಡೆಸಲಾಯಿತು.
ಈ ವೇಳೆ ವಿವಿಧ ಹರಕೆಗಳನ್ನು ಹೊತ್ತ ಭಕ್ತರು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸಿಡಿಯನ್ನು ಆಡುವ ಮೂಲಕ ಹರಕೆಯನ್ನು ತೀರಿಸಿದರು. ಸತತ ಎಂಟು ಗಂಟೆಗಳ ಕಾಲ ಸಿಡಿಮದ್ದು ಸಿಡಿಸಲಾಯಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಕಳೆದ ಎರಡು ದಿನಗಳ ಕಾಲ ವಿವಿಧ ದೇವತೆಗಳ ಉತ್ಸವ ನಡೆದಿತ್ತು. ಮಂಗಳವಾರ ಮುಂಜಾನೆ ಬಸವಪ್ಪನ ಕೊಂಡೋತ್ಸವ, ಬುಧವಾರ ಮುಂಜಾನೆ ಶ್ರೀ ಮಾರಮ್ಮ ದೇವಿಯ ಕೊಂಡೋತ್ಸವ ನಡೆದಿತ್ತು.
ಶುಕ್ರವಾರ ಗ್ರಾಮದಲ್ಲಿ ಹರಿಸೇವೆ ನಡೆಯಿತು. ಗ್ರಾಮದ ಪ್ರತಿಮನೆಯಲ್ಲೂ ಮಾಂಸದೂಟ ಮಾಡಿ ಬಂಧುಬಳಗದವರಿಗೆ ಉಣಬಡಿಸಿದರು. ಇದರೊಂದಿಗೆ ಹಬ್ಬಕ್ಕೆ ತೆರೆಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.