ADVERTISEMENT

ಸೋಲೂರು ಹೋಬಳಿ: ಮುಂದುವರಿದ ತೊಡಕು

ಮಾಗಡಿ–ನೆಲಮಂಗಲ ಶಾಸಕರಿಂದಲೇ ಗೊಂದಲ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:38 IST
Last Updated 5 ಅಕ್ಟೋಬರ್ 2024, 15:38 IST
ಸೋಲೂರು ಹೋಬಳಿಯ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ಬೃಂಗೇಶ್ ಮಾತನಾಡಿದರು. ಎನ್‌ಡಿಎ ಮಾಜಿ ಅಧ್ಯಕ್ಷ ಕೆ.ಪಿ. ಆನಂದ್, ಹೋಬಳಿ ಅಧ್ಯಕ್ಷ ಚನ್ನೊವಳ್ಳಿ ಸಿ.ಎಂ.ಮಂಜುನಾಥ್ ಇದ್ದರು.
ಸೋಲೂರು ಹೋಬಳಿಯ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ಬೃಂಗೇಶ್ ಮಾತನಾಡಿದರು. ಎನ್‌ಡಿಎ ಮಾಜಿ ಅಧ್ಯಕ್ಷ ಕೆ.ಪಿ. ಆನಂದ್, ಹೋಬಳಿ ಅಧ್ಯಕ್ಷ ಚನ್ನೊವಳ್ಳಿ ಸಿ.ಎಂ.ಮಂಜುನಾಥ್ ಇದ್ದರು.   

ಕುದೂರು: ಸೋಲೂರು ಹೋಬಳಿ ವಿಚಾರದಲ್ಲಿ ಮಾಗಡಿ ಹಾಗೂ ನೆಲಮಂಗಲ ಶಾಸಕರು ಗೊಂದಲ ಮೂಡಿಸುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಬೃಂಗೇಶ್ ಲೇವಡಿ ಮಾಡಿದರು.

ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿ, ನೆಲಮಂಗಲ ಕ್ಷೇತ್ರದ ಇಬ್ಬರೂ ಶಾಸಕರು ಕಾಂಗ್ರೆಸ್‌ನವರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾಗಡಿಗೂ ಸೋಲೂರು ಹೋಬಳಿಗೂ ಅವಿನಾಭಾವ ಸಂಬಂಧವಿದೆ. ಇದನ್ನು ಮಾಗಡಿಗೆ ಸೇರ್ಪಡೆಗೊಳಿಸಬೇಕು ಎಂದು ಪಣತೊಟ್ಟಿದ್ದಾರೆ. ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರ್ಪಡೆ ಆಗೇ ಹೋಯ್ತು ಎಂದು ತೊಡೆತಟ್ಟಿದ್ದಾರೆ. ಇವರಿಬ್ಬರಲ್ಲೇ ಗೊಂದಲವಿದ್ದು, ಈ ತೊಡಕನ್ನು ಬಗೆಹರಿಸುವವರೇ ಇಲ್ಲ ಎಂದರು.

ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿಸುವಂತೆ ಹೋಬಳಿ ವ್ಯಾಪ್ತಿಯ 6 ಗ್ರಾ.ಪಂ.ಗಳಲ್ಲಿ  ನಿರ್ಣಯ ಮಾಡಿ ಮಾಜಿ ಶಾಸಕ ಎಂ.ವಿ.ನಾಗರಾಜು ನೇತೃತ್ವದಲ್ಲಿ 2019 ರಿಂದ ಇಲ್ಲಿಯವರೆಗೂ ಹೋರಾಟ ನಡೆಸಿ, ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಸೋಲೂರು ನೆಲಮಂಗಲ ತಾಲ್ಲೂಕಿಗೆ ಸೇರಿಸುವಂತೆ ಸಂಸದರು, ಶಾಸಕರು, ಮಾಜಿ ಶಾಸಕರು, ಮಾಜಿ ಜಿ.ಪಂ., ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ನಾಗರಿಕರು ಬಯಸಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಸೋಲೂರನ್ನು ನೆಲಮಂಗಲಕ್ಕೆ ಸೇರಿಸಬೇಕು ಎಂದು ಅವರು ಸ್ವಷ್ಟಪಡಿಸಿದರು.

ADVERTISEMENT

ಈ ಬಗ್ಗೆ ಸಂಸದ ಡಾ.ಕೆ. ಸುಧಾಕರ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಕಾರ್ಯದರ್ಶಿ, ಕಂದಾಯ ಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ, ಸೋಲೂರನ್ನು ನೆಲಮಂಗಲಕ್ಕೆ ಸೇರಿಸಿದ್ದು ತಾವೇ ಎಂದು ಶಾಸಕರು ಹೋಬಳಿ ವ್ಯಾಪ್ತಿಯಲ್ಲಿ ಕಟೌಟ್ ಹಾಕಿಕೊಂಡಿದ್ದಾರೆ. ಈ ಕಟೌಟ್‌ನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಭಾವಚಿತ್ರವೂ ಇದೆ. ಸೋಲೂರಿನ ಕಲ್ಯಾಣ ಮಂಟಪದಲ್ಲಿ ಸೋಲೂರು ಹೋಬಳಿ ನೆಲಮಂಗಲ ತಾಲ್ಲೂಕಿಗೆ ಸೇರ್ಪಡೆಗೊಳಿಸುವ ಬಗ್ಗೆ ಪಕ್ಷಾತೀತ ಸಭೆಯಲ್ಲಿಯೂ ಸಂಸದ ಡಾ.ಕೆ.ಸುಧಾಕರ್ ಅವರನ್ನು ಹೊರಗಿಟ್ಟಿದ್ದಾರೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಸೇರಿಸಿಕೊಂಡು ಕಾಂಗ್ರೆಸ್ ಸಭೆ ಮಾಡಿದ್ದಾರೆ. ಇದು ಅಧಿಕಾರಿಗಳ ಸಭೆಯಲ್ಲ, ಕಾಂಗ್ರೆಸ್ ಕಾರ್ಯಕರ್ತರ ಸಭೆಯಾಗಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಕೆ.ಪಿ.ಆನಂದ್ ಮಾತನಾಡಿ, ಸೋಲೂರು ನೆಲಮಂಗಲಕ್ಕೆ ಸೇರಿಸಲು ಮಾಜಿ ಶಾಸಕ ನಾಗರಾಜು ಅವರ ಶ್ರಮ ಹೆಚ್ಚಿದೆ. ನೆಲಮಂಗಲ ಶಾಸಕರು ಸೋಲೂರಿನಲ್ಲಿ ಯಾರ ಗಮನಕ್ಕೆ ತಾರದೆ ತುರ್ತಾಗಿ ಸಭೆ ನಡೆಸಿರುವುದು ಅನುಮಾನ ಮೂಡಿಸಿದೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರನ್ನು ಸೇರಿಸಿ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಚನ್ನೊವಳ್ಳಿ ಸಿ.ಎಂ.ಮಂಜುನಾಥ್, ತಾಲ್ಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷ ಉಮೇಶ್, ಪೆಮ್ಮನಹಳ್ಳಿ ಮೋಹನ್, ಯುವ ಮೋರ್ಚಾ ಕಾರ್ಯದರ್ಶಿ ದರ್ಶನ್, ಶಾಂತಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.