ADVERTISEMENT

ಕುಮಾರಸ್ವಾಮಿಗೆ ಮತ ಕೇಳುವ ಹಕ್ಕಿಲ್ಲ: ಡಿ.ಕೆ. ಶಿವಕುಮಾರ್

ಕ್ಷೇತ್ರ ಜನತೆ ಒಂದೂ ಯೋಜನೆ ನೀಡದೆ ಎಚ್‌ಡಿಕೆ; ಡಿ.ಕೆ. ಶಿವಕುಮಾರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 16:29 IST
Last Updated 4 ನವೆಂಬರ್ 2024, 16:29 IST
ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ ಗ್ರಾಮದಲ್ಲಿ ಕಾಂಗ್ರೆಸ್ ಪರ ಪ್ರಚಾರ ಸಭೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಅಭ್ಯರ್ಥಿ ಸಿ.ಪಿ. ಯೋಗೇಶ್ವರ್, ಇತರರು ಹಾಜರಿದ್ದರು
ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ ಗ್ರಾಮದಲ್ಲಿ ಕಾಂಗ್ರೆಸ್ ಪರ ಪ್ರಚಾರ ಸಭೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಅಭ್ಯರ್ಥಿ ಸಿ.ಪಿ. ಯೋಗೇಶ್ವರ್, ಇತರರು ಹಾಜರಿದ್ದರು   

ಚನ್ನಪಟ್ಟಣ: ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಈ ಭಾಗದ ಜನರಿಗೆ ಒಂದೇ ಒಂದು ಉತ್ತಮ ಯೋಜನೆ ನೀಡಿಲ್ಲ. ಇಲ್ಲಿನ ಬಡವರಿಗೆ ಸಹಾಯ ಮಾಡದ ಅವರು ಇಲ್ಲಿನ ಜನರ ಮತ ಕೇಳುವ ಹಕ್ಕು ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಗಚಗೆರೆ ಹಾಗೂ ಭೂಹಳ್ಳಿ ಗ್ರಾಮಗಳಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಕುಮಾರಸ್ವಾಮಿ ನೀನು ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಒಂದೇ ಒಂದು ದಿನ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಲು ಬಂದಿಲ್ಲ. ರಾಜ್ಯೋತ್ಸವದಂದು ಇಲ್ಲಿ ಕನ್ನಡ ಧ್ವಜ ಹಾರಿಸಲಿಲ್ಲ. ಹಾಗಾದರೆ ನಿನಗೆ ಶಾಸಕ ಸ್ಥಾನ ಏಕೆ ಬೇಕು?. ಹಾಗದರೆ ನಿನ್ನ ಮತ್ತು ಈ ಚನ್ನಪಟ್ಟಣ ಕ್ಷೇತ್ರದ ಜನರ ನಡುವೆ ಭಾವನಾತ್ಮಕ ಸಂಬಂಧ ಎಲ್ಲಿದೆ ಎಂದು ಏಕವಚನದಲ್ಲಿ ಹರಿಹಾಯ್ದರು.

ADVERTISEMENT

ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಜನ ಎರಡು ಬಾರಿ ಶಾಸಕರಾಗಿ ಆಯ್ಕೆ ಮಾಡಿ ಕಳುಹಿಸಿದ್ದೀರಿ. ಅವರು ನಿಮ್ಮ ಜನಪ್ರತಿನಿಧಿಯಾಗಿ ನಿಮ್ಮ ಊರಿಗೆ ಬಂದು ಏನು ಕೆಲಸ ಮಾಡಿದ್ದಾರೆ ಎಂಬುದನ್ನು ನೀವೆ ಆಲೋಚಿಸಿ. ಜನರಿಗೆ ಸಹಾಯ ಮಾಡಲು ಕುಮಾರಸ್ವಾಮಿಗೆ ಸಾಧ್ಯವಿರಲಿಲ್ಲವೇ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ವಿಧಾನಸಭೆ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅದನ್ನು ಜಾರಿಗೊಳಿಸಿದ್ದೇವೆ. ಬೆಲೆ ಏರಿಕೆ ಸಮಸ್ಯೆಗೆ ಮುಕ್ತಿ ನೀಡಿ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಶ್ರಮಿಸಿದ್ದೇವೆ. ಇಂತಹ ಒಂದೇ ಒಂದು ಯೋಜನೆಯನ್ನು ನೀಡದ ಕುಮಾರಸ್ವಾಮಿ ಇಲ್ಲಿ ಬಂದು ಮತ ಕೇಳುತ್ತಿದ್ದಾರೆ. ಈ ಭಾಗದ ಜನರ ಕಷ್ಟಕ್ಕೆ ಸ್ಪಂದಿಸಿದ್ದರೆ ಕುಮಾರಣ್ಣನಿಗೆ ಮತ ಕೇಳುವ ಹಕ್ಕಿತ್ತು. ಆದರೆ ಅವರು ಇಲ್ಲಿಯ ಜನರನ್ನು ಕೈಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ’ ಎಂದು ಲೇವಡಿ ಮಾಡಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ವೆಂಕಟೇಶ್, ಡಾ.ಎಂ.ಸಿ. ಸುಧಾಕರ್, ಬೈರತಿ ಸುರೇಶ್, ದೆಹಲಿಯಲ್ಲಿ ಕರ್ನಾಟಕ ಸರ್ಕಾರದವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಗಣಿಗ ರವಿ, ನೆಲಮಂಗಲ ಶ್ರೀನಿವಾಸ್, ಕೊತ್ತನೂರು ಮಂಜು, ಪೊನ್ನಣ್ಣ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿಗೌಡ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಮಾಜಿ ಶಾಸಕರಾದ ಎಂ.ಸಿ. ಅಶ್ವಥ್, ರಾಜು, ಚಿತ್ರನಟ ಸಾಧು ಕೋಕಿಲ, ಬಿಬಿಎಂಪಿ ಮಾಜಿ ಮೇಯರ್ ಪದ್ಮಾವತಿ, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಡಿ.ಕೆ. ಶಿವಕುಮಾರ್ ಅವರು ತಾಲ್ಲೂಕಿನ ಕೋಡಂಬಹಳ್ಳಿ, ಎಲೆತೋಟದಹಳ್ಳಿ, ಅಕ್ಕೂರು, ನಗರದ ಹಲವು ವಾರ್ಡ್‌ಗಳಲ್ಲಿ ಯೋಗೇಶ್ವರ್ ಪರ ಪ್ರಚಾರ ನಡೆಸಿದರು. ಡಿ.ಕೆ. ಶಿವಕುಮಾರ್ ತಂಡಕ್ಕೆ ಎಲ್ಲೆಡೆ ಭರ್ಜರಿ ಸ್ವಾಗತ ದೊರೆಯಿತು.

ವಂಶಪಾರಂಪರ್ಯ ಆಡಳಿತ ಕೊನೆಗೊಳ್ಳಲಿ...

‘ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯನ್ನು ನಾವು ಯಾರೂ ಬಯಸಿರಲಿಲ್ಲ. ಕುಮಾರಸ್ವಾಮಿ ಅವರು ನನಗೆ ವಿಶ್ವಾಸ ದ್ರೋಹ ಮಾಡಿದರು. ಚನ್ನಪಟ್ಟಣವನ್ನು ಬಿಟ್ಟು ಹೇಳದೆ ಕೇಳದೆ ಮಂಡ್ಯಕ್ಕೆ ಹೋದ ಕಾರಣಕ್ಕೆ ನಾನು ಇಂದು ನಿಮ್ಮ ಮುಂದೆ ಅಭ್ಯರ್ಥಿಯಾಗಿ ನಿಂತಿದ್ದೇನೆ. ಕ್ಷೇತ್ರದಲ್ಲಿ ವಂಶಪಾರಂಪರ್ಯ ಆಡಳಿತ ಕೊನೆಗೊಳ್ಳಬೇಕು. ಇಲ್ಲಿಯ ಜನತೆ ತಾಲ್ಲೂಕಿನ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಹೇಳಿದರು.

ಕುಮಾರಸ್ವಾಮಿ ಅವರು ಪುತ್ರ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಚನ್ನಪಟ್ಟಣದಲ್ಲಿ ಇದು ಅವರ ಕೊನೆಯ ಪ್ರಯತ್ನವಾಗಿದೆ.
ಡಿ.ಕೆ. ಶಿವಕುಮಾರ್‌, ಡಿಸಿಎಂ
ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವರಾದ ರಾಮಲಿಂಗಾರೆಡ್ಡಿ ಚಲುವರಾಯಸ್ವಾಮಿ ಇತರರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.