ADVERTISEMENT

ಹಾರೋಹಳ್ಳಿ: ಒಡೆದ ಹೆಂಚು, ಸೋರುವ ಶಾಲೆ

ಶಿಥಿಲಾವಸ್ಥೆಯಲ್ಲಿ ತೋಕಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ; ಆತಂಕದಲ್ಲಿ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 4:58 IST
Last Updated 7 ಜುಲೈ 2024, 4:58 IST
ಶಿಥಿಲಾವಸ್ಥೆಯಲ್ಲಿರುವ ಹಾರೋಹಳ್ಳಿ ತಾಲ್ಲೂಕಿನ ತೋಕಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಶಿಥಿಲಾವಸ್ಥೆಯಲ್ಲಿರುವ ಹಾರೋಹಳ್ಳಿ ತಾಲ್ಲೂಕಿನ ತೋಕಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಹಾರೋಹಳ್ಳಿ: ಅಕ್ಷರ ಜ್ಞಾನಕ್ಕಾಗಿ ಈ ಶಾಲೆಗೆ ಬರುವ ಇಲ್ಲಿನ ಮಕ್ಕಳು ಶಿಥಿಲ ಕೊಠಡಿಗಳು, ಒಡೆದಿರುವ ಹೆಂಚುಗಳು, ಸೋರುವ ಚಾವಣಿ, ಪಾಚಿಗಟ್ಟಿದ ಗೋಡೆಗಳು, ಕಿತ್ತು ಬಂದಿರುವ ನೆಲದಲ್ಲೇ ಕುಳಿತು, ನಿತ್ಯ ಭಯದಲ್ಲೇ ಪಾಠ ಕೇಳಬೇಕು. ಶಿಕ್ಷಕರು ಸಹ ಆತಂಕದಲ್ಲೇ ಶಾಲೆಗೆ ಬಂದು, ಮಕ್ಕಳಿಗೆ ಜ್ಞಾನ ಧಾರೆಯೆರೆಯಬೇಕು.

ತಾಲ್ಲೂಕಿನ ತೋಕಸಂದ್ರ ಗ್ರಾಮದಲ್ಲಿರುವ ಸುಮಾರು 81 ವರ್ಷಗಳಷ್ಟು ಹಳೆಯದಾಗಿರುವ, ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು. 1943ರಲ್ಲಿ ಶುರುವಾದ ಶಾಲೆಯು ನೂರಾರು ವಿದ್ಯಾರ್ಥಿಗಳ ಬದುಕು ರೂಪಿಸಿದೆ. ಆದರೆ, ಶಾಲಾ ಕಟ್ಟಡದ ಭವಿಷ್ಯ ಮಾತ್ರ ಶೋಚನಿಯವಾಗಿದೆ.

60 ವರ್ಷದ ಹಿಂದಿನ ಕಟ್ಟಡ: ಸುಮಾರು 60 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಟ್ಟಡ ಇದುವರೆಗೆ ಸರಿಯಾಗಿ ದುರಸ್ತಿ ಕಂಡಿಲ್ಲ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಶಾಲಾ ಕಟ್ಟಡವು ತನ್ನ ಸುಸ್ಥಿರತೆ ಕಳೆದುಕೊಂಡಿದೆ. ಇತ್ತ ದುರಸ್ತಿಯೂ ಇಲ್ಲದೆ, ಅತ್ತ ಹೊಸ ಕಟ್ಟಡದ ನಿರೀಕ್ಷೆಯೂ ಹುಸಿಯಾಗುತ್ತಲೇ ಬಂದಿದೆ.

ADVERTISEMENT

‘ಶಾಲೆಯಲ್ಲಿ ಒಂದರಿಂದ 7ನೇ ತರಗತಿವರೆಗೆ ಸುಮಾರು 110 ಮಕ್ಕಳಿದ್ದಾರೆ. ಶಾಲೆಯಲ್ಲಿ  ಒಟ್ಟು 8 ಕೊಠಡಿಗಳಿವೆ. ಆ ಪೈಕಿ 3 ಕೊಠಡಿಗಳು ಸ್ವಲ್ಪಮಟ್ಟಿಗೆ ಸುಸ್ಥಿತಿಯಲ್ಲಿದ್ದು, ಉಳಿದ 5 ಕೊಠಡಿಗಳು ಸಂಪೂರ್ಣ ಶಿಥಿಲವಾಗಿವೆ’ ಎಂದು ಶಾಲೆಯವರು ಕಟ್ಟಡದ ದುಃಸ್ಥಿತಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಮಳೆ ನೀರು ಸೋರಿ ಶಿಥಿಲಗೊಂಡು ಪಾಚಿಗಟ್ಟಿರುವ ತೋಕಸಂದ್ರ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ

ಶೋಚನೀಯ ಪರಿಸ್ಥಿತಿ: ‘ಕೊಠಡಿಗಳ ಬಾಗಿಲು ಮುರಿದಿವೆ. ಕಿಟಕಿಯ ಬೋಲ್ಟ್‌ಗಳು ಮುರಿದಿದ್ದು, ಕೊಂಡಿ ಕಳಚಿದೆ. ಬೇಸಿಗೆಯಲ್ಲಿ ಬಿಸಿಲು ಸೂಸುವ ಒಡೆದ ಹೆಂಚಿನ ಕಿಂಡಿಗಳಿಂದ ಮಳೆಗಾಲದಲ್ಲಿ ನೀರು ಸೋರುತ್ತದೆ. ಜೋರು ಗಾಳಿ–ಮಳೆ ಬಂದಾಗಲೆಲ್ಲಾ ಹೆಂಚುಗಳು ಸರ್ರನೆ ಜಾರಿ ಬೀಳುತ್ತವೆ. ಮಳೆ ಬಂದರೆ, ಶಾಲೆಯ ಸ್ಥಿತಿ ನರಕವೆನಿಸುತ್ತದೆ’ ಎಂದು ಬೇಸರ ತೋಡಿಕೊಂಡರು.

ಈಗಿರುವ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟುವಂತೆ ಹಲವು ವರ್ಷಗಳಿಂದ ಶಾಲಾ ಶಿಕ್ಷಕರು ಬೇಡಿಕೆ ಇಡುತ್ತಾ, ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೂ ನೂತನ ಕಟ್ಟಡ ನಿರ್ಮಾಣಕ್ಕೆ ಕಾಲ ಕೂಡಿ ಬಂದಿಲ್ಲ. ಬಡವರಿಗೆ ಅಕ್ಷರ ಜ್ಞಾನ ನೀಡುವ ಇಂತಹ ಹಳ್ಳಿ ಸರ್ಕಾರಿ ಶಾಲೆಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕಳಕಳಿ ಇಲ್ಲವಾಗಿದೆ.

ಹಾರೋಹಳ್ಳಿ ತಾಲ್ಲೂಕಿನ ತೋಕಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ತೋಕಸಂದ್ರ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಹಳೆಯದಾಗಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಕಟ್ಟಡದ ದುರಸ್ತಿಗಾಗಿ ಈ ಸಲದ ಕ್ರಿಯಾಯೋಜನೆಯಲ್ಲಿ ಶಾಲೆಯನ್ನು ಸೇರಿಸಲಾಗಿದೆ. ಹೊಸ ಕೊಠಡಿ ನಿರ್ಮಾಣಕ್ಕೆ ಅನುದಾನದ ಕೊರತೆ ಇದೆ
– ಸ್ವರೂಪ ಕೆ.ಎಸ್. ಕ್ಷೇತ್ರ ಶಿಕ್ಷಣಾಧಿಕಾರಿ ಹಾರೋಹಳ್ಳಿ
ಶಾಲೆಯ ಕೊಠಡಿಗಳು ಹಳೆಯದಾಗಿರುವುದರಿಂದ ಬೀಳುವ ಹಂತ ತಲುಪಿವೆ. ಕೂಡಲೇ ಅವುಗಳನ್ನು ನೆಲಸಮ ಮಾಡಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು. ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕು
– ಶಿವರುದ್ರ ಹಳೆ ವಿದ್ಯಾರ್ಥಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೋಕಸಂದ್ರ
ಶಾಲಾ ಕಟ್ಟಡ ಹಳೆಯದಾಗಿದ್ದು ಅದನ್ನು ದುರಸ್ತಿ ಮಾಡಿಕೊಡುವಂತೆ ಅಥವಾ ಹೊಸ ಕಟ್ಟಡ ನಿರ್ಮಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ
– ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೋಕಸಂದ್ರ
‘ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಿ’
‘ಶಾಲಾ ಕಟ್ಟಡ ಶಿಥಿಲವಾಗಿರುವುದರಿಂದ ಅಲ್ಲಿ ಮಕ್ಕಳ ಜೀವಕ್ಕೆ ಸುರಕ್ಷತೆಯ ಗ್ಯಾರಂಟಿ ಸಿಗಬೇಕಿದೆ. ಕಟ್ಟಡ ಹಳೆಯದಾಗಿದ್ದರೆ ಯಾವ ತಂದೆ–ತಾಯಿ ತಾನೇ ತಮ್ಮ ಮಕ್ಕಳನ್ನು ಇಲ್ಲಿಗೆ ಕಳಿಸುತ್ತಾರೆ. ಶಿಕ್ಷಣ ಇಲಾಖೆಯವರು ತೋಕಸಂದ್ರ ಶಾಲೆಗೆ ತಕ್ಷಣ ಭೇಟಿ ನೀಡಿ ಇಲ್ಲಿನ ಸ್ಥಿತಿಯನ್ನು ಪರಿಶೀಲಿಸಬೇಕು. ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು’ ಎಂದು ತೋಕಸಂದ್ರದ ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದರಾಜು ಒತ್ತಾಯಿಸಿದರು. ಶಾಲೆಗೆ ಸೇರಿಸಲು ಪಾಲಕರ ಹಿಂದೇಟು ‘ಈ ಶಾಲೆಯಲ್ಲಿ ಶಿಕ್ಷಣ ಪೂರೈಸಿದ ಹಲವರು ಅತ್ಯುತ್ತಮ ಹುದ್ದೆಯಲ್ಲಿದ್ದಾರೆ. ಈ ಶಾಲೆಗೆ ಒಂದು ಘನತೆ ಇದೆ. ಹಾಗಾಗಿ ತೋಕಸಂದ್ರ ಸೇರಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಟ್ಟಡ ಶಿಥಿಲವಾಗಿರುವ ಕಾರಣಕ್ಕೆ ಪಾಲಕರು ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ’ ಎಂದು ಶಿಕ್ಷಕರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.