ADVERTISEMENT

ರಾಮನಗರ: ಇನ್ನೂ ಸ್ವಚ್ಛತೆ ಕಾಣದ ರಾಜಕಾಲುವೆ, ಚರಂಡಿ

ಹೆಚ್ಚುತ್ತಿದೆ ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಕರಣ; ನಗರಸಭೆ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

ಓದೇಶ ಸಕಲೇಶಪುರ
Published 22 ಜುಲೈ 2024, 6:56 IST
Last Updated 22 ಜುಲೈ 2024, 6:56 IST
ರಾಮನಗರದ ರೈಲ್ವೆ ಕೆಳ ಸೇತುವೆ ಸಮೀಪದ ರಾಜಕಾಲುವೆಯಲ್ಲಿ ಗಿಡಗಂಟಿ ಬೆಳೆದು ನಿಂತಿರುವುದು
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ರಾಮನಗರದ ರೈಲ್ವೆ ಕೆಳ ಸೇತುವೆ ಸಮೀಪದ ರಾಜಕಾಲುವೆಯಲ್ಲಿ ಗಿಡಗಂಟಿ ಬೆಳೆದು ನಿಂತಿರುವುದು ಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ರಾಮನಗರ: ಮಳೆಗಾಲಕ್ಕೆ ಮುಂಚೆ ನಗರದ ರಾಜಕಾಲುವೆ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯ. ಆದರೆ, ರಾಮನಗರ ನಗರಸಭೆ ಕರ್ತವ್ಯ ಮೈ ಮರೆತು ಕುಳಿತಿದೆ. ಮುಂಗಾರು ಮಳೆ ಶುರುವಾಗಿ ದಿನಗಳು ಉರುಳಿದರೂ ನಗರದ ರಾಜಕಾಲುವೆ ಹಾಗೂ ಚರಂಡಿಗಳು ಇದುವರೆಗೆ ಸ್ವಚ್ಛತೆ ಕಂಡಿಲ್ಲ.

ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಾರಕ ರೋಗಕ್ಕೆ ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬರು ಬಲಿಯಾಗಿದ್ದಾರೆ. ನಗರದಲ್ಲಿ ಡೆಂಗಿ ಸೇರಿದಂತೆ ವೈರಾಣು ಜ್ವರದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಷ್ಟಾದರೂ, ಸಾಂಕ್ರಾಮಿಕ ರೋಗಗಳ ಉಲ್ಭಣಕ್ಕೆ ಕಾರಣವಾಗುವ ರಾಜಕಾಲುವೆ ಮತ್ತು ಚರಂಡಿಗಳ ಸ್ವಚ್ಛತೆಯನ್ನು ನಗರಸಭೆ ಕೈಗೊಂಡಿಲ್ಲ.

ಆಳೆತ್ತರದ ಗಿಡಗಂಟಿ: ಆಳೆತ್ತರಕ್ಕೆ ಬೆಳೆದಿರುವ ಗಿಡಗಂಟಿ ಹಾಗೂ ಹುಲ್ಲು ರಾಜಕಾಲುವೆಯನ್ನು ಆವರಿಸಿಕೊಂಡಿದೆ. ಕಾಲುವೆಗೆ ಸಂಪರ್ಕ ಕಲ್ಪಿಸುವ ಚರಂಡಿಗಳಲ್ಲಿ ಹೂಳು ತುಂಬಿಕೊಂಡು, ಅಲ್ಲಲ್ಲಿ ಕೊಳಚೆ ನಿಂತು ಗಬ್ಬೆದ್ದು ನಾರುತ್ತಿದೆ. ಕಾಲುವೆ ಮತ್ತು ಚರಂಡಿಗಳು ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿವೆ. ಬೀಡಾಡಿ ಹಂದಿಗಳು ಬಿದ್ದು ಒದ್ದಾಡುವ ಈ ಜಾಗಗಳಲ್ಲಿ ಜನ ಮೂಗು ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದೆ.

ADVERTISEMENT

‘ಟಿಪ್ಪುನಗರ, ಟ್ರೂಪ್‌ಲೈನ್, ಹುಣಸನಹಳ್ಳಿ ರಸ್ತೆ, ಐಜೂರು, ವಿವೇಕಾನಂದನಗರ, ರಾಯರದೊಡ್ಡಿ, ಬಾಲಗೇರಿ, ಕೆಂಪೇಗೌಡ ವೃತ್ತ, ಮಾಗಡಿ ರಸ್ತೆ, ಅರ್ಕಾವತಿ ಬಡಾವಣೆ, ವಿನಾಯಕನಗರ, ಗಾಂಧಿನಗರ, ಶೆಟ್ಟಿಹಳ್ಳಿ ಬೀದಿ, ಕೊತ್ತಿಪುರ ಸೇರಿದಂತೆ ನಗರದ ಯಾವುದೇ ಬಡಾವಣೆಗೆ ಹೋದರೂ ಅಲ್ಲಿರುವ ರಾಜಕಾಲುವೆ ಮತ್ತು ಚರಂಡಿಗಳು ಸೊಳ್ಳೆಗಳ ಸಂತಾನಕ್ಕೆ ರಕ್ಷೆಯಾಗಿವೆ’ ಎಂದು ಸ್ಥಳೀಯ ನಿವಾಸಿ ಶ್ರೀಧರ್ ಹೇಳಿದರು.

ಅರ್ಕಾವತಿ ಒಡಲಿಗೆ ಕಲುಷಿತ: ನಗರದ ಹೃದಯಭಾಗದಲ್ಲಿ ಹರಿಯುವ ಅರ್ಕಾವತಿ ನದಿಯು ನಗರದ ಕೊಳಚೆ ಬಂದು ಸೇರುವ ಕಡೆಯ ತಾಣವಾಗಿದೆ. ಜನವಸತಿ ಪ್ರದೇಶಗಳಿಗೆ ಹೊಂದಿಕೊಂಡಂತೆ ಹರಿಯುವ ನದಿಯ ಒಡಲಿನಿಂದಿಡಿದು ದಡದವರೆಗೆ ಕಳೆಗಳು ಆವರಿಸಿಕೊಂಡಿವೆ. ವರ್ಷವಾದರೂ ಸ್ವಚ್ಛತೆ ಕಾಣದಿರುವುದರಿಂದ ನಗರದುದ್ದಕ್ಕೂ ನದಿ ದಡವು ಕುರುಚಲು ಕಾಡಿನಂತೆ ಭಾಸವಾಗುತ್ತದೆ.

‘ವಿವಿಧ ಬಡಾವಣೆಗಳ ಶೌಚಾಲಯದ ನೀರು ವರ್ಷಗಳಿಂದ ನೇರವಾಗಿ ನದಿಯನ್ನು ಸೇರುತ್ತಿದೆ. ಕೆಲವೆಡೆ ಜನರು ಸಹ ವಿವಿಧ ರೀತಿಯ ತ್ಯಾಜ್ಯವನ್ನು ನದಿಗೆ ಎಸೆಯುವುದು ಸಾಮಾನ್ಯವಾಗಿದೆ. ಗಬ್ಬೆದ್ದು ನಾರುತ್ತಿರುವ ನದಿಗೆ ಇಳಿಯಲಾಗದ ಸ್ಥಿತಿ ಇದೆ. ಜೊತೆಗೆ ಹೂಳು ತುಂಬಿಕೊಂಡಿದೆ. ನದಿಗೆ ಶೌಚ ನೀರು ಸೇರದಂತೆ ಎಚ್ಚರಿಕೆ ವಹಿಸಬೇಕಿದೆ’ ಎಂದು ನಗರಸಭೆಯ ಮಾಜಿ ಸದಸ್ಯೆ ಕಮಲಮ್ಮ ಹೇಳಿದರು.

ನೆಪಕ್ಕಷ್ಟೇ ಕಾರ್ಯಪಡೆ: ‘ಮಳೆಗಾಲ ನಿರ್ವಹಣೆಗೆ ಸಂಬಂಧಿಸಿದಂತೆ ಮೇ ತಿಂಗಳಲ್ಲೇ ಹಿಂದಿನ ಜಿಲ್ಲಾಧಿಕಾರಿ ಸಭೆ ನಡೆಸಿದ್ದಾರೆ. ಸ್ವಚ್ಛತೆ, ಪ್ರವಾಹ ಸ್ಥಿತಿ ನಿರ್ವಹಣೆ ಸೇರಿದಂತೆ ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಕಾರ್ಯಪಡೆ ರಚಿಸುವಂತೆ ಸೂಚನೆ ನೀಡಿದ್ದರು. ಆದರೆ, ಅಂತಹ ಯಾವುದೇ ಕೆಲಸ ರಾಮನಗರ ನಗರಸಭೆಯಲ್ಲಿ ನಡೆದಿಲ್ಲ’ ಎಂದು

‘ಎರಡು ತಿಂಗಳಿಂದ ನಗರಸಭೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಲ್ಲ. ಅವರಿದ್ದಿದ್ದರೆ ಇಷ್ಟೊತ್ತಿಗಾಗಲೇ ಒಂದು ಸಭೆಯನ್ನಾದರೂ ಮಾಡುತ್ತಿದ್ದರು. ಸದ್ಯ ಇರುವ ಸದಸ್ಯರು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ, ಅಧಿಕಾರಿಗಳು ಸಹ ತಮಗಿಷ್ಟ ಬಂದಂತೆ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ. ಹೇಳುವವರು ಮತ್ತು ಕೇಳುವವರೇ ಇಲ್ಲವಾಗಿದೆ’ ಎಂದು ಸ್ಥಳೀಯ ಮುಖಂಡ ಸಮದ್ ಬೇಸರ ವ್ಯಕ್ತಪಡಿಸಿದರು.

ಸ್ವಚ್ಛತಾ ಕಾರ್ಯಗಳ ಕುರಿತು ಮಾಹಿತಿ ಪಡೆಯಲು ನಗರಸಭೆಯ ಪರಿಸರ ಎಂಜಿನಿಯರ್ ಸುಬ್ರಮಣ್ಯ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ರಾಮನಗರದ ಹುಣಸನಹಳ್ಳಿ ರಸ್ತೆ ಪಕ್ಕದ ರಾಜಕಾಲುವೆಯ ಸ್ಥಿತಿ
ಅಂಕಿಅಂಶ...131ಜಿಲ್ಲೆಯಲ್ಲಿ ವರದಿಯಾಗಿರುವ ಡೆಂಗಿ ಪ್ರಕರಣ10ಸಕ್ರಿಯ ಪ್ರಕರಣ1,360ಇದುವರೆಗೆ ನಡೆದಿರುವ ಡೆಂಗಿ ಪರೀಕ್ಷೆ
ಒಂದು ದಿನದ ಹಿಂದೆಯಷ್ಟೇ ರಾಮನಗರ ಪೌರಾಯುಕ್ತನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಮಳೆಗಾಲ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವೆ
ಜಯಣ್ಣ ಪೌರಾಯುಕ್ತ ರಾಮನಗರ
ಸಾಂಕ್ರಾಮಿಕ ರೋಗಗಳು ತೀವ್ರಗೊಳ್ಳುವುದಕ್ಕೆ ಮುಂಚೆ ನಗರಸಭೆಯು ಸೊಳ್ಳೆಗಳ ತಾಣಗಳಾದ ನಗರದ ರಾಜಕಾಲುವೆ ಮತ್ತು ಚರಂಡಿಗಳ ಸ್ವಚ್ಛತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು
ಶ್ರೀಧರ್ ಗಾಂಧಿನಗರ ನಿವಾಸಿ
ಮಳೆಗಾಲ ಶುರುವಾದರೂ ನಗರಸಭೆಯವರು ಇಲ್ಲಿಯವರೆಗೆ ರಾಜಕಾಲುವೆ ಮತ್ತು ಚರಂಡಿಗಳ ಸ್ವಚ್ಛತೆ ಕಾರ್ಯ ಕೈಗೊಳ್ಳದೆ ಏನು ಮಾಡುತ್ತಿದ್ದರು? ನಗರದ ಜನರ ಆರೋಗ್ಯ ಕಾಳಜಿಯ ಕುರಿತು ನಿರ್ಲಕ್ಷ್ಯ ಸರಿಯಲ್ಲ
ಸಮದ್ ಐಜೂರು ನಿವಾಸಿ
ಸ್ವಚ್ಛತೆ ಮಾಡಲು ಹಿಟಾಚಿಗಳಿಲ್ಲ
‘ಮಳೆಗಾಲ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಅವರು ಕಾರ್ಯಪಡೆ ರಚಿಸಿದ್ದಾರೆ. ನಗರಸಭೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದವರು ಸೇರಿದಂತೆ ಕೆಲವರಿಗೆ ಅದರ ಜವಾಬ್ದಾರಿ ವಹಿಸಲಾಗಿದೆ. ಹಿಟಾಚಿ ಇಲ್ಲದಿರುವುದರಿಂದ ನಗರದ ರಾಜಕಾಲುವೆಗಳ ಸ್ವಚ್ಛತೆ ಇನ್ನು ಆಗಿಲ್ಲ. ಬಾಡಿಗೆ ಪಡೆದು ಸ್ವಚ್ಛತೆ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಸದ್ಯ ಚಾಮುಂಡೇಶ್ವರಿ ಕರಗ ಮಹೋತ್ಸವ ನಡೆಯುತ್ತಿರುವುದರಿಂದ ಅದು ಮುಗಿದ ಬಳಿಕ ಸ್ವಚ್ಛತೆ ಕೆಲಸ ಕೈಗೊಳ್ಳಲಾಗುವುದು’ ಎಂದು ಹೆಸರು ಹೇಳಲಿಚ್ಛಿಸದ ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು. ‘ರೋಗ ಭೀತಿಯಲ್ಲೇ ಜೀವನ’ ‘ಮಳೆ ಶುರುವಾದಾಗಿನಿಂದ ನಗರದಲ್ಲಿ ಸೊಳ್ಳೆಗಳ ಕಾಟವು ಹೆಚ್ಚಾಗಿದೆ. ಇದರಿಂದಾಗಿ ಡೆಂಗಿ ಚಿಕನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಮಕ್ಕಳಿಂದಿಡಿದು ವೃದ್ಧರವರೆಗೆ ಜ್ವರ ಸಾಮಾನ್ಯವಾಗಿದೆ. ಆಸ್ಪತ್ರೆಗೆ ಹೋದರೆ ರಕ್ತ ಪರೀಕ್ಷೆ ಮಾಡಿಸದ ಹೊರತು ಸಾಂಕ್ರಾಮಿಕ ರೋಗದ ಆತಂಕ ಹೋಗುವುದಿಲ್ಲ. ಉಳ್ಳವರು ಪರೀಕ್ಷೆ ಮಾಡಿಸುತ್ತಾರೆ. ಬಡವರು ಏನು ಮಾಡಬೇಕು? ನಗರಸಭೆಯವರು ನಗರವನ್ನು ಶುಚಿಯಾಗಿಟ್ಟರೆ ಜನ ಸಾಂಕ್ರಾಮಿಕ ರೋಗಗಳ ಭಯವಿಲ್ಲದೆ ಆರೋಗ್ಯವಾಗಿರುತ್ತಾರೆ’ ಎಂದು ಅರ್ಕಾವತಿ ಬಡಾವಣೆಯ ರಕ್ಷಿತ್ ಹೇಳಿದರು.
‘ಡೆಂಗಿ ನಿರ್ಲಕ್ಷ್ಯ ಬೇಡ’
‘ಮಳೆಗಾಲದಲ್ಲಿ ಹೆಚ್ಚಾಗಿ ಹರಡುವ ಡೆಂಗಿ ಜ್ವರದ ಕುರಿತು ಜನ ನಿರ್ಲಕ್ಷ್ಯಿಸಬಾರದು. ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಈ ಜ್ವರವು ಸೊಳ್ಳೆ ಕಡಿತದಿಂದ ಬರುತ್ತಿದೆ. ಅದಕ್ಕಾಗಿ ಸೊಳ್ಳೆಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದೇ ರೋಗ ನಿಯಂತ್ರಣಕ್ಕಿರುವ ಪ್ರಮುಖ ದಾರಿ. ನೀರು ಶೇಖರಣೆ ಪರಿಕರಗಳಾದ ಸಿಮೆಂಟ್ ತೊಟ್ಟಿ ಬ್ಯಾರಲ್ ಮಣ್ಣಿನ ಮಡಿಕೆಗಳಲ್ಲಿ ನಿಲ್ಲುವ ನೀರೇ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿವೆ. ಹಾಗಾಗಿ ಇಲ್ಲಿನ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವ ಜೊತೆಗೆ ಆಗಾಗ ಶುಚಿಗೊಳಿಸಬೇಕು. ರಾಜಕಾಲುವೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ವಿಪರೀತ ಜ್ವರ ಮೈ ಮೇಲೆ ಕೆಂಪು ಗಂದೆಗಳು ಕಣ್ಣಿನ ಹಿಂಭಾಗ ನೋವು ತಲೆ ನೋವು ಮಾಂಸಖಂಡಗಳ ನೋವು ಈ ರೋಗದ ಪ್ರಮುಖ ಲಕ್ಷಣಗಳಾಗಿದ್ದು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಜಿಲ್ಲಾ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ. ಶಶಿಧರ್ ಸಲೆಹ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.