ಕನಕಪುರ: ದಾಯಾದಿಗಳ ನಡುವೆ ಜಮೀನಿನ ವಿಷಯಕ್ಕೆ ಶುರುವಾದ ಜಗಳವು ಮಹಿಳೆಯೊಬ್ಬರ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ತಾಲ್ಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭದ್ರೇಗೌಡನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗೌರಮ್ಮ (55) ಕೊಲೆಯಾದವರು. ಕೃತ್ಯದ ಬಳಿಕ ಕೊಟ್ಟಗಾಳು ಗ್ರಾಮದ ಆರೋಪಿ ಸ್ವಾಮಿ(35) ತಲೆ ಮರೆಸಿಕೊಂಡಿದ್ದಾನೆ. ರಸ್ತೆಗೆ ಹೊಂದಿಕೊಂಡಂತೆ ಗೌರಮ್ಮ ಮತ್ತು ಸ್ವಾಮಿ ಜಮೀನಿದೆ. ದಾಯಾದಿಗಳ ನಡುವೆ ಜಮೀನು ವಿಷಯಕ್ಕೆ ಕೆಲ ವರ್ಷಗಳಿಂದ ಜಗಳ ನಡೆಯುತ್ತಿತ್ತು.
ಬೆಳಿಗ್ಗೆ ಇಬ್ಬರು ಜಮೀನು ಮಟ್ಟ ಮಾಡುವಾಗ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಆಗ ಸ್ವಾಮಿ ಕೆಲಸಕ್ಕೆ ಬಳಸುವ ಕುಡುಗೋಲು ಮತ್ತು ಸನಿಕೆಯಿಂದ ಗೌರಮ್ಮ ಅವರ ಕತ್ತು, ಹೊಟ್ಟೆ, ಕೈ–ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗೌರಮ್ಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.
ಕೃತ್ಯದ ಬಳಿಕ ಆರೋಪಿ ಸ್ವಾಮಿ ಜಮೀನಿನಿಂದ ಪರಾರಿಯಾಗುವಾಗ, ರಸ್ತೆಯಲ್ಲಿ ಆತನ ರಕ್ತಸಿಕ್ತ ಬಟ್ಟೆಯನ್ನು ಗಮನಿಸಿದವರು ಅನುಮಾನಗೊಂಡು ಗ್ರಾಮದ ಇತರರಿಗೆ ವಿಷಯ ತಿಳಿಸಿದ್ದಾರೆ. ನಂತರ, ಜಮೀನಿನತ್ತ ಬಂದು ನೋಡಿದಾಗ, ಗೌರಮ್ಮ ಅವರ ಶವ ರಕ್ತಸಿಕ್ತವಾಗಿ ಬಿದ್ದಿತ್ತು. ಬಳಿಕ ಠಾಣೆಗೆ ಮಾಹಿತಿ ನೀಡಿದರು ಎಂದು ಹೇಳಿದರು.
ಶವವನ್ನು ದಯಾನಂದ ಸಾಗರ್ ಆಸ್ಪತ್ರೆಗೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಆರೋಪಿ ಸ್ವಾಮಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಚನ್ನಪಟ್ಟಣ ಡಿವೈಎಸ್ಪಿ ಕೆ.ಸಿ. ಗಿರಿ, ಇನ್‌ಸ್ಪೆಕ್ಟರ್‌ಗಳಾದ ಕೃಷ್ಣ ಲಮಾಣಿ, ಮಿಥುನ್ ಶಿಲ್ಪಿ, ಸಬ್‌ಇನ್‌ಸ್ಪೆಕ್ಟರ್ ಮನೋಹರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.