ಕನಕಪುರ: ಅರಣ್ಯ ಮತ್ತು ಸಾಗುವಳಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ರೈತ ಮುಖಂಡರೊಂದಿಗೆ ಕೊಳಗೊಂಡನಹಳ್ಳಿಯಲ್ಲಿ ಬುಧವಾರ ಸಭೆ ನಡೆಸಿದರು.
ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಕಾಡಾನೆಗಳು ಹೊರಬಾರದಂತೆ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಇದರಲ್ಲಿ ಸಾಗುವಳಿ ಭೂಮಿ ಒತ್ತುವರಿ ಮಾಡಲಾಗುತ್ತಿದೆ ಎಂದು ರೈತರು ವಿರೋಧಿಸಿ ಕಾಮಗಾರಿಗೆ ತಡೆವೊಡ್ಡಿದ್ದರು.
ರೈತರು ಮತ್ತು ಅರಣ್ಯ ಇಲಾಖೆ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಮತ್ತು ಸಮಸ್ಯೆ ಪರಿಹರಿಸಿಕೊಳ್ಳಲು ಬನ್ನೇರುಘಟ್ಟ ಎಸಿಎಫ್ ವಿಶಾಲ್ ಪಾಟೀಲ ಮತ್ತು ಆರ್‌ಎಫ್ಒ ಆಂತೋಣಿ ರೇಗೊ ರೈತ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಎ.ಲಕ್ಷ್ಮಿನಾರಾಯಣ ಗೌಡ ಮಾತನಾಡಿ, ರೈಲ್ವೆ ಕಂಬಿ ಅಳವಡಿಸುವುದು ಒಳ್ಳೆಯದು. ಆದರೆ, ಅದರ ನೆಪದಲ್ಲಿ ರೈತರ ಸಾಗುವಳಿ ಭೂಮಿ ಕಬಳಿಸುವುದು ಸರಿಯಲ್ಲ ಎಂದು ಆರೋಪಿಸಿದರು.
ರೈತರು ಹಲವು ತಲೆಮಾರುಗಳಿಂದ ಕೃಷಿ ಮಾಡುತ್ತಾ ಬಂದಿದ್ದಾರೆ. ಆದರೂ, ಅರಣ್ಯ ಅಧಿಕಾರಿಗಳು ರೈತರ ಭೂಮಿಯನ್ನು ಸೇರಿಸಿಕೊಂಡು ರೈಲ್ವೆ ಕಂಬಿ ಅಳವಡಿಸುತ್ತಿದ್ದಾರೆ ಎಂದು ದೂರಿದರು.
ಎಸಿಎಫ್ ವಿಶಾಲ್ ಪಾಟೀಲ್ ಮಾತನಾಡಿ, ಕಾಡಾನೆಗಳು ಹೊರಬರದಂತೆ ರೈಲ್ವೆ ಕಂಬಿ ಅಳವಡಿಸಬೇಕಿದೆ. ರೈತರು ಮತ್ತು ಅರಣ್ಯ ಅಧಿಕಾರಿಗಳು ಒಟ್ಟಾಗಿ ಇಲ್ಲಿ ಕೆಲಸ ಮಾಡಬೇಕಿದೆ. ರೈತರು ಸಹಕಾರ ನೀಡಿದರೆ ಮಾತ್ರ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ರೈತ ಸಂಘದ ಪದಾಧಿಕಾರಿಗಳಾದ ಎಚ್.ಕೆ.ಕೃಷ್ಣಪ್ಪ ಮಾಧವ ಪರಮೇಶಪ್ಪ, ವಿನೋಧಶೆಟ್ಟಿ ಶಿವಶಂಕರಶೆಟ್ಟಿ ಹಾಗೂ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.