ADVERTISEMENT

ರಾಮನಗರ: ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ಭಾಗ್ಯ

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿತರಣೆ

ಓದೇಶ ಸಕಲೇಶಪುರ
Published 28 ಫೆಬ್ರುವರಿ 2024, 4:25 IST
Last Updated 28 ಫೆಬ್ರುವರಿ 2024, 4:25 IST
ಕನಕಪುರದಲ್ಲಿ ಇತ್ತೀಚೆಗೆ ನಡೆದ ಉದ್ಯೋಗಮೇಳದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಲ್ಯಾಪ್‌ಟಾಪ್‌ಗಳನ್ನು ಕಾರ್ಮಿಕರ ಮಕ್ಕಳಿಗೆ ವಿತರಿಸಿದರು. ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಆಲದಕಟ್ಟಿ ಇದ್ದರು
ಕನಕಪುರದಲ್ಲಿ ಇತ್ತೀಚೆಗೆ ನಡೆದ ಉದ್ಯೋಗಮೇಳದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಲ್ಯಾಪ್‌ಟಾಪ್‌ಗಳನ್ನು ಕಾರ್ಮಿಕರ ಮಕ್ಕಳಿಗೆ ವಿತರಿಸಿದರು. ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಆಲದಕಟ್ಟಿ ಇದ್ದರು   

ರಾಮನಗರ: ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕರ ಮಕ್ಕಳ ಶಿಕ್ಷಣ ಉತ್ತೇಜಿಸುವ ಸಲುವಾಗಿ ನೀಡುವ ಲ್ಯಾಪ್‌ಟಾಪ್‌ಗೆ ಜಿಲ್ಲೆಯ 240 ವಿದ್ಯಾರ್ಥಿಗಳ ಆಯ್ಕೆಯಾಗಿದ್ದಾರೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ನೋಂದಾಯಿತ ಕಾರ್ಮಿಕರ ಮಕ್ಕಳು ಲ್ಯಾಪ್‌ಟಾಪ್ ಪಡೆಯಲು ಅರ್ಹರಾಗಿದ್ದಾರೆ. ಈ ಬಾರಿ ಪ್ರಥಮ ಪಿಯುಸಿಯ 532 ಹಾಗೂ ದ್ವಿತೀಯ ಪಿಯುಸಿಯ 622 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,154 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಅರ್ಹರನ್ನು ಗುರುತಿಸಿರುವ ಇಲಾಖೆ ತಾಲ್ಲೂಕುವಾರು ವಿತರಣೆಗೆ ಕ್ರಮ ಕೈಗೊಂಡಿದೆ.

ತಲಾ 60 ಹಂಚಿಕೆ: ‘ಜಿಲ್ಲೆಗೆ 246 ಟ್ಯಾಪ್‌ಟಾಪ್‌ಗಳು ಬಂದಿದ್ದು, ನಾಲ್ಕು ತಾಲ್ಲೂಕುಗಳಿಗೆ ತಲಾ 60 ಲ್ಯಾಪ್‌ಟಾಪ್‌ಗಳನ್ನು ಹಂಚಿಕೆ ಮಾಡಲಾಗಿದೆ. ಹೆಚ್ಚುವರಿಯಾಗಿ 5 ಲ್ಯಾಪ್‌ಟಾಪ್‌ಗಳಿದ್ದು, ಹೆಚ್ಚುವರಿ ಬೇಡಿಕೆ ಬರುವ ತಾಲ್ಲೂಕಿಗೆ ವಿತರಣೆ ಮಾಡಲು ಉಳಿಸಿಕೊಳ್ಳಲಾಗುವುದು’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಆಲದಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಲ್ಯಾಪ್‌ಟಾಪ್ ವಿತರಣೆಗಾಗಿ ಜಿಲ್ಲೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಅರ್ಜಿ ಕರೆದಾಗ ಒಟ್ಟು 1,154 ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಕನಕಪುರ (ಹಾರೋಹಳ್ಳಿ ಒಳಗೊಂಡು) ತಾಲ್ಲೂಕಿನಲ್ಲಿ 57, ಚನ್ನಪಟ್ಟಣದಲ್ಲಿ 56 ಹಾಗೂ ರಾಮನಗರ ಮತ್ತು ಮಾಗಡಿಯಲ್ಲಿ 60 ಅರ್ಜಿಗಳನ್ನು ಲ್ಯಾಪ್‌ಟಾಪ್ ವಿತರಣೆಗೆ ಸದ್ಯ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.

ಸಮಿತಿಯಿಂದ ಆಯ್ಕೆ: ‘ಅರ್ಹ ಅರ್ಜಿಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರ ನೇತೃತ್ವದ ಜಿಲ್ಲಾ ಮೇಲ್ವಿಚಾರಣ ಸಮಿತಿ ಅಂತಿಮಗೊಳಿಸಿದೆ. ಕಾರ್ಮಿಕರ ಪೂರ್ವಾಪರ ಹಾಗೂ ಅವರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಲ್ಯಾಪ್‌ಟಾಪ್ ವಿತರಣೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದಕ್ಕೂ ಮುಂಚೆ ತಾಲ್ಲೂಕು ಮಟ್ಟದ ಕಾರ್ಮಿಕ ನಿರೀಕ್ಷಕರಿಂದಲೂ ವರದಿ ಪಡೆದು ಪರಿಶೀಲಿಸಲಾಗಿದೆ’ ಎಂದು ಹೇಳಿದರು.

‘ಸಲ್ಲಿಕೆಯಾಗಿದ್ದ ಒಟ್ಟು ಅರ್ಜಿಗಳ ಪೈಕಿ 619 ತಿರಸ್ಕೃತಗೊಂಡಿವೆ. ಅದರಲ್ಲಿ ರಾಮನಗರದಲ್ಲಿ 286, ಕನಕಪುರ 297, ಚನ್ನಪಟ್ಟಣ 27 ಹಾಗೂ ಮಾಗಡಿಯಲ್ಲಿ 9 ಅರ್ಜಿಗಳಿವೆ. ಮಾನದಂಡದ ಪ್ರಕಾರ ಕಟ್ಟಡ ಕಾರ್ಮಿಕರಲ್ಲದವರು, ಅಫಿಡೇವಿಟ್‌ನಲ್ಲಿ ಮಕ್ಕಳ ಹೆಸರು ತಪ್ಪಾಗಿರುವುದು, ಅಗತ್ಯ ದಾಖಲೆ ಲಗತ್ತಿಸದಿರುವುದು, ಈಗಾಗಲೇ ಟ್ಯಾಬ್ ಪಡೆದವರು ಹಾಗೂ ಅಂತಿಮ ದಿನಾಂಕ ಮುಗಿದ ಬಳಿಕ ಸಲ್ಲಿಕೆಯಾದ ಅರ್ಜಿಗಳು ಸೇರಿವೆ’ ಎಂದು ಮಾಹಿತಿ ನೀಡಿದರು.

ರಾಮನಗರದಲ್ಲೇ ಹೆಚ್ಚು ಅರ್ಜಿ

ಲ್ಯಾಪ್‌ಟಾಪ್‌ಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ರಾಮನಗರ ತಾಲ್ಲೂಕು ಮುಂದಿದೆ. ಇಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಒಟ್ಟು 512 ಅರ್ಜಿಗಳು ಬಂದಿವೆ. ಉಳಿದಂತೆ ಕನಕಪುರದಲ್ಲಿ (ಹಾರೋಹಳ್ಳಿ ಒಳಗೊಂಡು) 405 ಮಾಗಡಿಯಲ್ಲಿ 122 ಹಾಗೂ ಚನ್ನಪಟ್ಟಣದಲ್ಲಿ 115 ಅರ್ಜಿಗಳು ಸಲ್ಲಿಕೆಯಾಗಿವೆ.

ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರಾಮನಗರ ಮತ್ತು ಕನಕಪುರದಲ್ಲಿ ವಿತರಿಸಲಾಗಿದೆ
–ಸುಭಾಷ್ ಆಲದಕಟ್ಟಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಾರ್ಮಿಕ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.