ರಾಮನಗರ: ಜಿಲ್ಲಾ ವಕೀಲರ ಸಂಘದ 40 ಮಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ಅಮಾನತು ಮಾಡಬೇಕೆಂದು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಜಿಲ್ಲಾಧಿಕಾರಿಗೆ ಗಡುವು ಕೊಟ್ಟಿದ್ದ ವಕೀಲರು, ಡಿ.ಸಿ ಕಚೇರಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿಗೆ ದಿಗ್ಭಂಧನ ಹಾಕಿದರು.
ಮಧ್ಯಾಹ್ನ ವಕೀಲರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿಗೆ, ವಕೀಲರು ಸಂಜೆ 5 ಗಂಟೆವರೆಗೆ ಗಡುವು ಕೊಟ್ಟಿದ್ದರು. ಆದರೆ, ಡಿ.ಸಿ 6 ಗಂಟೆಯಾದರೂ ವಕೀಲರ ಭೇಟಿ ಮಾಡಿ ತಮ್ಮ ನಿರ್ಧಾರ ತಿಳಿಸಲಿಲ್ಲ. ಬದಲಿಗೆ, ವಕೀಲರ ನಿಯೋಗ ಬಂದು ತಮ್ಮನ್ನು ಭೇಟಿ ಮಾಡಬೇಕು ಎಂದು ಪೊಲೀಸರ ಬಳಿ ಹೇಳಿ ಕಳುಹಿಸಿದರು.
ಇದಕ್ಕೆ ಒಪ್ಪದ ವಕೀಲರು, ಎಲ್ಲರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ನಿರ್ಧಾರ ತಿಳಿಸಲಿ ಎಂದರು. ಅದಕ್ಕೆ ಡಿ.ಸಿ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಕೆರಳಿದ ವಕೀಲರು, ಡಿ.ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಡಿ.ಸಿ ಅವರು ಕಚೇರಿಯಿಂದ ಹೊರ ಹೋಗದಂತೆ ತಡೆಯಲು, ಕಚೇರಿಯ ಎರಡೂ ದ್ವಾರಗಳಿಗೆ ಅಡ್ಡ ಕುಳಿತು ಧರಣಿ ಆರಂಭಿಸಿದರು.
ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ರಾಮನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಶ್ರೀವತ್ಸ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿರುವ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಧರಣಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.