ರಾಮನಗರ: ಜಿಲ್ಲಾ ವಕೀಲರ ಸಂಘದ 40 ಮಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ಅಮಾನತು ಮಾಡಬೇಕೆಂದು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದ ವಕೀಲರು, ತಮ್ಮ ಬೇಡಿಕೆ ಈಡೇರಿಕೆಗೆ ಸಂಜೆ 5 ಗಂಟೆವರೆಗೆ ಗಡುವು ಕೊಟ್ಟಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ವಕೀಲರನ್ನು ಭೇಟಿ ಮಾಡಿದ ಡಿ.ಸಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು, ಪಿಎಸ್ಐ ವಿರುದ್ಧ ನಡೆಯುತ್ತಿರುವ ತನಿಖೆ ಮೂರ ದಿನದೊಳಗೆ ಮುಗಿಯಲಿದೆ. ವರದಿಯಲ್ಲಿ ಅವರು ತಪ್ಪು ಮಾಡಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದರಿಂದ ಕೆರಳಿದ ವಕೀಲರು, ಒಂದು ವಾರದಿಂದ ನಮ್ಮ ಬೇಡಿಕೆಗೆ ಸ್ಪಂದಿಸದ ನೀವು ಮತ್ತೆ ಮೂರು ದಿನ ಕಾಲಾವಕಾಶ ಕೇಳುತ್ತಿರುವುದು ನಮ್ಮ ಹೋರಾಟವನ್ನು ನೀವು ಎಷ್ಟು ಹಗುರವಾಗಿ ಪರಿಗಣಿಸಿದ್ದೀರಿ ಎಂಬುದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ನಾವು ಒಪ್ಪುವುದಿಲ್ಲ. ಸಂಜೆ 5ರವರೆಗೆ ಸಮಯ ಕೊಡುತ್ತೇವೆ. ಅಷ್ಟರೊಳಗೆ ನಿಮ್ಮ ಸ್ವಿಚ್ ಯಾರ ಬಳಿ ಇದೆಯೊ ಅವರ ಜೊತೆ ಚರ್ಚೆ ಮಾಡಿ ಅಮಾನತು ನಿರ್ಧಾರ ತಿಳಿಸಬೇಕು. ಇಲ್ಲದಿದ್ದರೆ, ಡಿ.ಸಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ಆಗ ಕಾನೂನು ಸಚಿವರು ಬರುವವರೆಗೆ ಧರಣಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.