ರಾಮನಗರ: ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಇತ್ತೀಚೆಗೆ ಸಾಕುಪ್ರಾಣಿಗಳನ್ನು ಕೊಂದು ಆತಂಕ ಸೃಷ್ಟಿಸಿದ್ದ ಚಿರತೆ ಕಡೆಗೂ ಸೆರೆಯಾಗಿದೆ. ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಒಂದು ವರ್ಷದ ಚಿರತೆ ಶುಕ್ರವಾರ ಬೆಳಿಗ್ಗೆ ಸೆರೆಯಾಗಿದೆ. ಇದರೊಂದಿಗೆ ಗ್ರಾಮಸ್ಥರ ಆತಂಕ ನಿವಾರಣೆಯಾಗಿದೆ.
ಸಂಜೆ ಹಾಗೂ ನಸುಕಿನಲ್ಲಿ ಗ್ರಾಮದ ಹೊರವಲಯದಲ್ಲಿ ಚಿರತೆ ಓಡಾಡುತ್ತಿತ್ತು. ಸಮೀಪದ ಮನೆಗಳಲ್ಲಿರುವ ಕುರಿ, ಕರು, ಮೇಕೆ, ಕೋಳಿ ಹಾಗೂ ಸಾಕುನಾಯಿಗಳ ಮೇಲೆ ದಾಳಿ ನಡೆಸಿ ಹೊತ್ತೊಯ್ದಿತ್ತು. ಚಿರತೆ ಹಾವಳಿಗೆ ಬೇಸತ್ತಿದ್ದ ಜನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಅದರಂತೆ, ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ವಿಷಯ ತಿಳಿದು ಬೆಳಿಗ್ಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು, ಬೋನಿನಲ್ಲಿದ್ದ ಚಿರತೆಯನ್ನು ವಲಯ ಅರಣ್ಯಾಧಿಕಾರಿ ಕಚೇರಿಗೆ ತೆಗೆದುಕೊಂಡು ಹೋದರು. ರಾತ್ರಿ ಅರಣ್ಯ ಪ್ರದೇಶಕ್ಕೆ ಚಿರತೆಯನ್ನು ಬಿಡಲಾಗುವುದು ಎಂದು ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.