ರಾಮನಗರ: ತಾಲ್ಲೂಕಿನ ಲಕ್ಕಪ್ಪನಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಸುಮಾರು 6 ತಿಂಗಳ ಎರಡು ಗಂಡು ಚಿರತೆಗಳು ಕಳೇಬರ ಸೋಮವಾರ ಪತ್ತೆಯಾಗಿದೆ. ವಿಷಯ ತಿಳಿದು ರಾಮನಗರ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಎರಡೂ ಚಿರತೆಗಳು ಸತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಯಂಗಯ್ಯನಕೆರೆ ಪ್ರದೇಶದಲ್ಲಿ ಚಿರತೆಗಳ ಮರಣೋತರ ಪರೀಕ್ಷೆ ನಡೆಸಿದ ಪಶುವೈದ್ಯ ಡಾ. ನಜೀರ್ ಅಹ್ಮದ್, ತಲೆಗೆ ತೀವ್ರ ಪೆಟ್ಟು ಬಿದ್ದಿರುವುದರಿಂದಲೇ ಚಿರತೆಗಳು ಸತ್ತಿರುವುದನ್ನು ದೃಢಪಡಿಸಿದರು.
‘ದುಷ್ಕರ್ಮಿಗಳು ಚಿರತೆಗಳ ತಲೆಗೆ ಹೊಡೆದು ಕೊಂದಿರುವ ಅನುಮಾನವಿದೆ. ಕೃತ್ಯ ಎಸಗಿದವರ ಪತ್ತೆಗೆ ಇಲಾಖೆ ಕ್ರಮ ಕೈಗೊಳ್ಳಲಿದೆ’ ಎಂದು ಉಪ ಅರಣ್ಯ ಸಂರಕ್ಷಾಧಿಕಾರಿ ಎಂ. ರಾಮಕೃಷ್ಣಪ್ಪ ತಿಳಿಸಿದರು.
ಲಕ್ಕಪ್ಪನಹಳ್ಳಿ ಗ್ರಾಮದ ಪಕ್ಕದ ಗುಡ್ಡ ಪ್ರದೇಶದಲ್ಲಿ ನೆಲೆಸಿರುವ ಚಿರತೆಗಳು ಆಹಾರ ಅರಸಿ ಗ್ರಾಮಗಳತ್ತ ಬರುವುದ ಸಾಮಾನ್ಯವಾಗಿದೆ. ಕಳೆದ ತಿಂಗಳು ಬನ್ನಿಕುಪ್ಪೆಯಲ್ಲಿ ಇಟ್ಟಿದ್ದ ಬೋನಿನಲ್ಲಿ 6 ತಿಂಗಳ ಗಂಡು ಚಿರತೆ ಸೆರೆಯಾಗಿತ್ತು.
ಉಪ ವಲಯ ಅರಣ್ಯಾಧಿಕಾರಿಗಳಾದ ರಾಜಶೇಖರಯ್ಯ, ವಾಸು, ಮಿಥುನ್, ಅರಣ್ಯ ರಕ್ಷಕ ಶಾಂತಕುಮಾರ್, ಸಿಬ್ಬಂದಿ ಮಂಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.