ರಾಮನಗರ: ‘ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅವರಿಗೆ ವಯಸ್ಸಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಅವರ ಕಣ್ಣಿಗೆ ಕಾಣಿಸುತ್ತಿಲ್ಲ’ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿರುಗೇಟು ನೀಡಿದರು.
ಸೋಮವಾರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಲಿಂಗಪ್ಪ ಸುಳ್ಳು ಆರೋಪ ಮಾಡುವುದನ್ನು ಬಿಡಲಿ. ನಾವು ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಮ್ಮ ಜತೆಬಂದು ನೋಡಲಿ’ ಎಂದು ಆಹ್ವಾನ ನೀಡಿದರು.
ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ ಎಂಬ ವಿರೋಧ ಪಕ್ಷದ ನಾಯಕರ ಆರೋಪಕ್ಕೆ ಉತ್ತರಿಸಿ, ಈಗ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇನೆ. ಜನತೆಯ ಸಮಸ್ಯೆ ಪರಿಹಾರ ಮಾಡಲು ಮುಂದಾಗಿದ್ದೇವೆ. ಇದನ್ನು ಅಭಿವೃದ್ಧಿ ಅನ್ನದೇ ಮತ್ತೇನು ಎಂದು ಹೇಳಬೇಕು ಎಂದು ಪ್ರಶ್ನಿಸಿದರು.
ಮುಂದಿನ ತಿಂಗಳು ಬಸ್ ವ್ಯವಸ್ಥೆ ಮಾಡಿಸುತ್ತೇವೆ. ಅಂದು ವಿಕ್ಷಪದವರು ನಮ್ಮ ಜತೆಗೆ ಬರಲಿ, ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡುತ್ತೇವೆ ಎಂದರು.
‘ನಾವು ಏನೇ ಅಭಿವೃದ್ಧಿ ಕಾರ್ಯ ಮಾಡಿದರೂ ವಿಪಕ್ಷದ ಮುಖಂಡರು ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ವಿರೋಧ ಪಕ್ಷಗಳು ಕಾಮಗಾರಿಯಲ್ಲಿ ರಾಜಕೀಯ ಮಾಡದೆ ನಮಗೂ ಸಹಕಾರ ನೀಡಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮೊಂದಿಗೆ ಕೈ ಜೋಡಿಸಲಿ. ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣವಿದೆ. ನಮ್ಮ ಪಕ್ಷದಲ್ಲಿ ಮಾತ್ರವಲ್ಲ. ಜನತೆ ಯಾರಿಗೆ ಬೆಂಬಲ ನೀಡಬೇಕೆಂಬುದನ್ನು ತಿಳಿದಿದ್ದಾರೆ. ಅವರಿಗೆ ಬೆಂಬಲ ನೀಡುತ್ತಾರೆ’ ಎಂದು ಹೇಳಿದರು.
ರಾಮನಗರ ನಗರಸಭೆ ವ್ಯಾಪ್ತಿಯಲ್ಲಿನ ವಾರ್ಡ್‍ಗಳಲ್ಲಿ ₹9.87 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಪಾರ್ಕ್ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ₹450 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದ್ದು, ಎಲ್ಲರಿಗೂ ಅನುಕೂಲವಾಗಲಿದೆ. ನಿವೇಶನ ಹಂಚಿಕೆ ವಿಷಯವಾಗಿ ಈ ಹಿಂದೆಯೇ ಭೂಮಿಪೂಜೆ ಮಾಡಲಾಗಿತ್ತು. ಆದರೆ, ಅಲ್ಲಿಯು ರಾಜಕೀಯ ಮಾಡಿ ನಿಲ್ಲಿಸಿದರು ಎಂದು ಹೇಳಿದರು.
ಜೆಡಿಎಸ್ ಮುಖಂಡರು ಜೊತೆಗಿದ್ದರು. ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.