ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ರಾಮನಗರ ಜಿಲ್ಲೆಯವರು ಯಾರು ಇರಲಿಲ್ಲವೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದರು.
ತಾಲ್ಲೂಕಿನ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಗುರುವಾರ ಪ್ರವಾಸ ಮಾಡಿ, ಕಾರ್ಯಕರ್ತರ ಸಭೆ ನಡೆಸಿ ಬಳಿಕ ಕಾಡಂಕನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ‘ದೇವೇಗೌಡರು ಹಾಸನದಿಂದ ಬಂದು ಮುಖ್ಯಮಂತ್ರಿ, ಪ್ರಧಾನಿಯಾದರು. ಮಗನನ್ನೂ ಮುಖ್ಯಮಂತ್ರಿ ಮಾಡಿದರು. ಸೊಸೆ, ಮಗ ಆಯ್ತು, ಈಗ ಅಳಿಯನನ್ನು ಕರೆದುಕೊಂಡು ಬಂದಿದ್ದಾರೆ. ಸ್ಪರ್ಧಿಸುವ ಶಕ್ತಿ ಇದ್ದವರು ರಾಮನಗರ ಜಿಲ್ಲೆಯಲ್ಲಿ ಯಾರೂ ಇರಲಿಲ್ಲವೇ’ ಎಂದು ಲೇವಡಿ ಮಾಡಿದರು.
‘ಇವರಿಗೆ ಬೇರೆಯವರನ್ನು ಬೆಳೆಸಲು ಆಗುವುದಿಲ್ಲವೆ ಎಂಬುದನ್ನು ಮತದಾರರು ಕೇಳಬೇಕು. ಚನ್ನಪಟ್ಟಣದಿಂದ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಇಲ್ಲಿನ ಬಡವರಿಗೆ 500 ಮನೆ ಕೊಡಲಿಲ್ಲ. ಪೆನ್ನು, ಪೇಪರ್ ಎಲ್ಲಾ ಅವರ ಕೈಯಲ್ಲೇ ಇತ್ತು. ಇಲ್ಲಿಗೆ ಎಷ್ಟು ಮನೆ ಕೊಟ್ಟಿದ್ದಾರೆ, ನಿಮ್ಮ ಕಷ್ಟವನ್ನು ಕೇಳಲು ಎಷ್ಟು ಬಾರಿ ಬಂದಿದ್ದಾರೆ’ ಎಂದು ಕುಮಾರಸ್ವಾಮಿ ಹೆಸರು ಹೇಳದೇ ಅವರು ಟೀಕಿಸಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲರಿಗೂ ಸೌಲಭ್ಯ ಕೊಟ್ಟಿದ್ದೇವೆ. ಇಲ್ಲಿ ಜೆಡಿಎಸ್, ಬಿಜೆಪಿ ಎಂದು ವಿಂಗಡಿಸಿಲ್ಲ. ಜಾತಿ ವಿಂಗಡಣೆ ಮಾಡಿಲ್ಲ. ಎಲ್ಲಾ ಜಾತಿವರಿಗೂ ಪಕ್ಷಾತೀತವಾಗಿ ಯೋಜನೆಯನ್ನು ತಲುಪಿಸಿದ್ದೇವೆ. ಇದನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು.
ಸಂಸದರ ಸಮ್ಮುಖದಲ್ಲಿ ತಾಲ್ಲೂಕಿನ ಹಲವಾರು ಗ್ರಾಮಗಳ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಅಧ್ಯಕ್ಷ ರಘುನಂದನ್ ರಾಮಣ್ಣ, ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಗಂಗಾಧರ್, ಮಾಜಿ ಶಾಸಕ ಎಂ.ಸಿ. ಅಶ್ವತ್ಥ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ದುಂತೂರು ವಿಶ್ವನಾಥ್, ಮಲುವೇಗೌಡ, ಶಿವಮಾದು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.