ADVERTISEMENT

ರಾಮನಗರದಲ್ಲಿ ‘ಪಾರ್ಟಿ’ ರಾಜಕೀಯ!

ಓದೇಶ ಸಕಲೇಶಪುರ
Published 27 ಫೆಬ್ರುವರಿ 2024, 7:42 IST
Last Updated 27 ಫೆಬ್ರುವರಿ 2024, 7:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಮನಗರ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಚುನಾವಣೆಯ ಕಾವು ಸಹ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮತದಾರರನ್ನು ಸೆಳೆಯಲು ಈಗಾಗಲೇ ಗಿಫ್ಟ್ ಬಾಕ್ಸ್‌ಗಳನ್ನು ಮನೆಮನೆಗೆ ವಿತರಣೆ ಮಾಡುತ್ತಿರುವ ರಾಜಕೀಯ ಪಕ್ಷವೊಂದು ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಭರ್ಜರಿ ಪಾರ್ಟಿ ಆಯೋಜಿಸುತ್ತಿದೆ. 

ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಹೆಸರಿನಲ್ಲಿ ಮದ್ಯ ಹಾಗೂ ಮಾಂಸದೂಟದ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ರಾಮನಗರ ಮತ್ತು ಚನ್ನಪಟ್ಟಣದ ಹಲವೆಡೆ ಪಾರ್ಟಿ ಆಯೋಜಿಸಲಾಗಿದೆ. ಆ ಮೂಲಕ ಚುನಾವಣೆ ಕೆಲಸಕ್ಕೆ ಅಣಿಗೊಳಿಸಲಾಗುತ್ತಿದೆ. 

ADVERTISEMENT

ತಾಲ್ಲೂಕು ಮತ್ತು ಹೋಬಳಿ ಮಟ್ಟದ ಪಕ್ಷದ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಪ್ರತಿನಿಧಿಗಳು ಹಾಗೂ ಸಂಘ–ಸಂಸ್ಥೆಗಳ ಪದಾಧಿಕಾರಿಗಳಿಗೆ ಪಾರ್ಟಿ ನಡೆಯುತ್ತಿವೆ. 

ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಮಾತ್ರ ಈ ಪಾರ್ಟಿಗಳಿಗೆ ಪ್ರವೇಶ. ಯಾವುದೇ ಕಾರಣಕ್ಕೂ ಮೊಬೈಲ್‌ನಲ್ಲಿ ಪಾರ್ಟಿಯ ಫೋಟೊ ತೆಗೆಯುವಂತಿಲ್ಲ. ವಿಡಿಯೊ ಚಿತ್ರೀಕರಿಸುವಂತಿಲ್ಲ ಎಂಬ ಷರತ್ತು ಕೂಡ ಹಾಕಲಾಗಿದೆ.

ಒಟ್ಟಿನಲ್ಲಿ ಚುನಾವಣಾ ಅಧಿಸೂಚನೆ ಪ್ರಕಟಗೊಂಡು ಮಾದರಿ ನೀತಿ ಸಂಹಿತಿ ಜಾರಿಯಾಗುವುದಕ್ಕೆ ಮುಂಚೆಯೇ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಚುನಾವಣಾ ಕೆಲಸಕ್ಕೆ ಹುರಿದುಂಬಿಸಲು ಪಾರ್ಟಿ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. 

‘ಈ ಬಾರಿ ಚುನಾವಣೆಯಲ್ಲಿ ಪ್ರತಿ ಮತವೂ ಅತ್ಯಂತ ಮುಖ್ಯ. ಯಾರನ್ನೂ ಕಡೆಗಣಿಸುವಂತಿಲ್ಲ. ಹಾಗಾಗಿ, ಎಲ್ಲರನ್ನೂ ಹಿಡಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಪಾರ್ಟಿ, ಉಡುಗೊರೆ ವಿತರಣೆ ಸಹಜವಾಗಿದೆ’ ಎಂದು ರಾಜಕೀಯ ಪಕ್ಷವೊಂದರ ಸ್ಥಳೀಯ ಮುಖಂಡರು ಹೇಳಿದರು.

ಉತ್ಸಾಹ ತುಂಬಲು ಪಾರ್ಟಿ

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಸಲದ ಚುನಾವಣೆಯು ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದೆ. ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ಗೆ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವುದರಿಂದ ಪ್ರತಿ ಮುಖಂಡರು ಹಾಗೂ ಕಾರ್ಯಕರ್ತರು ಮುಖ್ಯವಾಗಿದ್ದಾರೆ. ಪಕ್ಷದ ಪರ ಕೆಲಸ ಮಾಡಲು ಉತ್ಸಾಹ ತುಂಬುವುದಕ್ಕೆ ಪಾರ್ಟಿ ಏರ್ಪಡಿಸಲಾಗುತ್ತಿದೆ’ ಎಂದು ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮನಗರದಲ್ಲಿ ಚೀನಾ ಗಿಫ್ಟ್‌ ಹಾವಳಿ

ಕೋಲಾರ: ‘ಚುನಾವಣೆಯೇ ಘೋಷಣೆ ಆಗಿಲ್ಲ ಆಗಲೇ ಲೂಟಿ ಮಾಡಿರುವ ಹಣದಿಂದ ಚೀನಾದಿಂದ ತರಿಸಿರುವ ಕುಕ್ಕರ್, ಡೈನಿಂಗ್ ಸೆಟ್ ಹಂಚುತ್ತಿದ್ದಾರೆ. ಚೀನಾ ವಸ್ತುಗಳ ಗುಣಮಟ್ಟ ಎಲ್ಲರಿಗೂ ಗೊತ್ತಿರುವ ವಿಚಾರವೇ. ಕಾಂಗ್ರೆಸ್‌ನವರು 55 ವರ್ಷಗಳಿಂದ ಗಿಫ್ಟ್ ಸಂಸ್ಕೃತಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದರೆ ಗಿಫ್ಟ್ ಕೊಡುವ ಅವಶ್ಯವೇನಿತ್ತು?  ಜನರು ತೆಗೆದುಕೊಳ್ಳಲಿ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.