ADVERTISEMENT

ಮಾಗಡಿ: ಮತದಾನ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 5:13 IST
Last Updated 5 ಏಪ್ರಿಲ್ 2024, 5:13 IST
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಚುನಾವಣಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಜಾಥಾ ನಡೆಯಿತು
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಚುನಾವಣಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಜಾಥಾ ನಡೆಯಿತು   

ಮಾಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಪಂಚಾಯಿತಿ ಇ.ಒ ಕೃಷ್ಣ.ಸಿ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿ, ಪ್ರಜಾಪ್ರಭುತ್ವದ ಆಧಾರ ಸ್ತಂಭ ಮತದಾನವನ್ನು ಕಡ್ಡಾಯವಾಗಿ ಚಲಾಯಿಸಿ ಸಂವಿಧಾನ ಪ್ರಕಾರ ಪ್ರಜೆಗಳೇ ಪ್ರಭುಗಳು ಎಂದು ನಿರೂ‍ಪಿಸಬೇಕೆಂದು ಹೇಳಿದರು. ಮತದಾನ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪ್ರಜೆಗಳಿಗೆ ನೀಡಲಾಗಿದೆ ಎಂದರು.

ಏ.26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ 18ವರ್ಷ ತುಂಬಿರುವ ಮತದಾರರು ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಹಕ್ಕು ಚಲಾಯಿಸಬೇಕು ಎಂದರು.

ADVERTISEMENT

ತಹಶೀಲ್ದಾರ್ ಶರತ್ ಕುಮಾರ್ ಮಾತನಾಡಿ, ದೇಶದ ಪ್ರಜೆಗಳೆಲ್ಲರೂ ಕಡ್ಡಾಯವಾಗಿ ಸಂವಿಧಾನ ಓದಿಕೊಳ್ಳಬೇಕು. ಮೂಲಭೂತ ಹಕ್ಕು ಮತ್ತು ಕರ್ತವ್ಯ ಓದಿ ಕರಗತ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಮತ ಮಾರಿಕೊಳ್ಳಬಾರದು ಎಂದರು.

ಮತಗಟ್ಟೆಗೆ ತೆರಳಿ ನಿರ್ಭೀತಿಯಿಂದ ಮತಚಲಾಯಿಸಿ ಪ್ರಜಾಪ್ರಭುತ್ವಕ್ಕೆ ಮೆರುಗು ತರಬೇಕು. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಚಂದ್ರಶೇಖರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ರಾಜಣ್ಣ, ಅಕ್ಷರ ದಾಸೋಹ ಅಧಿಕಾರಿ ಗಂಗಾಧರ್, ಐಇಸಿ ಸಂಯೋಜಕ ರವಿ ಅತ್ನಿ ಮತದಾನ ಕುರಿತು ಮಾತನಾಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಹಾಯಕ ಪ್ರಾಧ್ಯಾಪಕರು, ತಾಲ್ಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿಯು ಕೆಂಪೇಗೌಡ ಸರ್ಕಲ್, ಕೋಟೆ ಬಯಲಿನಲ್ಲಿ ಜಾಗೃತಿ ಜಾಥಾ ನಡೆಸಿದರು.

ಕೋಟೆ ಬಯಲಿನಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.