ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಒತ್ತು: ಸಂಸದ ಸಿ.ಎನ್‌. ಮಂಜುನಾಥ್‌ ಪತ್ನಿ ಅನಸೂಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 7:28 IST
Last Updated 8 ಜೂನ್ 2024, 7:28 IST
ಕನಕಪುರ ಕೆಂಕೆರಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ಅನಸೂಯ ಅವರನ್ನು ಬಿಜೆಪಿ ಜೆಡಿಎಸ್‌ ಮಹಿಳಾ ಪದಾಧಿಕಾರಿಗಳು ಸ್ವಾಗತಿಸಿದರು
ಕನಕಪುರ ಕೆಂಕೆರಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ಅನಸೂಯ ಅವರನ್ನು ಬಿಜೆಪಿ ಜೆಡಿಎಸ್‌ ಮಹಿಳಾ ಪದಾಧಿಕಾರಿಗಳು ಸ್ವಾಗತಿಸಿದರು   

ಕನಕಪುರ: ‘ನಮಗೆ ನೀವು ಶಕ್ತಿ ಕೊಟ್ಟಿದ್ದೀರಿ. ಹೊಸ ಬದಲಾವಣೆಗೆ ಮುನ್ನುಡಿ ಬರೆದಿದ್ದೀರಿ. ಇಲ್ಲಿ ಆಗಬೇಕಿರುವ ಕೆಲಸಗಳನ್ನು ಮೊಲದ ವೇಗದಲ್ಲಿ ಮಾಡದಿದ್ದರೂ ಆಮೆ ವೇಗದ ತಾಳ್ಮೆಯಿಂದ ಪ್ರಧಾನವಾಗಿ ಮಾಡೋಣ. ಯಾರು ಧೃತಿಗೆಡಬೇಕಾಗಿಲ್ಲ’ ಎಂದು ನೂತನ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಪತ್ನಿ ಅನಸೂಯ ಅಭಿಪ್ರಾಯಪಟ್ಟರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಡಾ.ಸಿ.ಎನ್‌.ಮಂಜುನಾಥ್‌ ಗೆಲುವು ಸಾಧಿಸಿದ ಮೇಲೆ ಮೊದಲ ಬಾರಿಗೆ ಪತಿ ಪರವಾಗಿ ಕನಕಪುರ ತಾಲ್ಲೂಕಿಗೆ ಶುಕ್ರವಾರ ಭೇಟಿ ನೀಡಿ ಕೆಂಕೇರಮ್ಮ ದೇವಿಗೆ ಪೂಜೆ ನೆರವೇರಿಸಿ ಮಾತನಾಡಿದರು.

‘ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ಮತದಾರರು ಪ್ರೀತಿಯಿಂದ ಸ್ವಾಗತಿಸಿದರು. ಶೇ50ರಷ್ಟು ಮತ ಸಿಗುತ್ತದೆ. ಇಬ್ಬರಿಗೂ 50-50 ಎಂದು ಹೇಳಿದ್ದರು. ನಾವು ಒಂದು ಪರ್ಸೆಂಟ್‌ ಹೆಚ್ಚಿಗೆ ಕೊಡಿ ಎಂದು ಮನವಿ ಮಾಡಿದ್ದೆವು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ನಮಗೆ ಹೆಚ್ಚಿಗೆ ಮತ ಕೊಡುತ್ತಾರೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ’ ಎಂದು ಹೇಳಿದರು.

ADVERTISEMENT

‘ಕ್ಷೇತ್ರದಲ್ಲಿ ಜನರ ಅಪೇಕ್ಷೆಯಂತೆ ಬದಲಾವಣೆ ಆಗಿದೆ. ಆದರೆ, ಮುಂದೆ ಯಾವುದೇ ಸಂಘರ್ಷಕ್ಕೂ ಒಳಗಾಗಬೇಡಿ. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳೋಣ. ಇಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಎರಡು ಪಕ್ಷದ ಮುಖಂಡರ ಜತೆಗೂಡಿ ಮಾಡೋಣ’ ಎಂದರು.

ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು ಮಾತನಾಡಿ, ಎರಡು ಪಕ್ಷದ ಕಾರ್ಯಕರ್ತರು, ಮುಖಂಡರ ಶ್ರಮದಿಂದ ಡಾಕ್ಟರ್‌ಗೆ ಒಳ್ಳೆಯ ಲೀಡ್‌ ಬಂದಿದೆ. ಮುಂದಿನ ಚುನಾವಣೆಯಲ್ಲೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದರು.

ಡಾಕ್ಟರ್‌ ಗೆಲುವಿಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಮುಡಿ ತೆಗೆಸಿಕೊಂಡು ಬಂದಿರುವ ಯೂನಿಸ್‌ ಅಲಿಖಾನ್‌ ಅವರನ್ನು ಅಭಿನಂದಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ.ಕುಮಾರ್‌, ಜೆಡಿಎಸ್‌ ಬಿಜೆಪಿ ಮುಖಂಡರಾದ ಪುಟ್ಟರಾಜು, ಸಿದ್ದಮರೀಗೌಡ, ಶಿವಕುಮಾರ್‌, ರಾಜೇಶ್‌, ಪುಟ್ಟರಾಜು, ಕಾಳೇಗೌಡ, ಅಣ್ಣಾನಾಯ್ಕ್‌, ಕುಮಾರ್‌, ರಾಜಗೋಪಾಲ್‌, ನಾರಾಯಣ, ಮಂಜು ಕುಮಾರ್‌, ಮುತ್ತಣ್ಣ, ಶಿವಶಂಭುಲಿಂಗೇಗೌಡ, ಶೋಭಾ, ಗೀತಾ ನಾಗರಾಜು, ಪ್ರಮೀಳಾಮೂರ್ತಿ ಇದ್ದರು.

ಕನಕಪುರ ಕೆಂಕೇರಮ್ಮ ದೇವಾಲಯದ ಬಳಿ ಅನಸೂಯ ಅವರು ಮಲೇ ಮಹದೇಶ್ವರ ಬೆಟ್ಟದಲ್ಲಿ ಮುಡಿ ಕೊಟ್ಟಿದ್ದ ಯೂನಿಸ್‌ ಅಲಿಖಾನ್‌ ಅವರನ್ನು ಅಭಿನಂದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.