ರಾಮನಗರ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಗಳು ನಿಶಾ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೆಲ ದಿನಗಳಿಂದ ಹರಿದಾಡುತ್ತಿದ್ದ ಮಾತುಗಳಿಗೆ ಇದೀಗ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಈ ಕುರಿತು ಕನಕಪುರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್, ‘ನಿಶಾ ಅವರು ಕಾಂಗ್ರೆಸ್ ಸೇರುವುದಾಗಿ ಹಲವು ದಿನಗಳಿಂದ ಹೇಳುತ್ತಿದ್ದಾರೆ. ಈ ಕುರಿತು ಪಕ್ಷದೊಳಗೂ ಚರ್ಚೆ ನಡೆಯುತ್ತಿದೆ. ಅವರ ತೀರ್ಮಾನದ ಬಗ್ಗೆ ಜಿಲ್ಲೆಯ ಮುಖಂಡರು ಹಾಗೂ ನಾಯಕರ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಅಂತಿಮವಾಗಿ ನಿಶಾ ಸೇರ್ಪಡೆ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ಹೇಳಿದರು.
ನನ್ನದೇ ಕನಸುಗಳಿವೆ: ಕಾಂಗ್ರೆಸ್ ಸೇರ್ಪಡೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಿಶಾ, ‘ನನಗೆ ನನ್ನದೇ ಆದ ರಾಜಕೀಯ ಕನಸುಗಳಿವೆ. ರಾಜಕೀಯದಲ್ಲಿ ತಳಮಟ್ಟದಿಂದ ಬೆಳೆದು ನನ್ನ ತಂದೆ ಮಾಡಿದ ಸಾಧನೆ ಕುರಿತು ನನಗೆ ಹೆಮ್ಮೆ ಹಾಗೂ ಗೌರವವಿದೆ. ಅದರಂತೆ, ನನ್ನದೇ ರಾಜಕೀಯ ಹಾದಿ ನಿರ್ಮಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ’ ಎಂದು ಹೇಳಿದರು.
ಯೋಗೇಶ್ವರ್ ಅವರ ರಾಜಕೀಯ ಎದುರಾಳಿಗಳಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರನ್ನು ನಿಶಾ ಅವರು ಆಗಾಗ ಭೇಟಿ ಮಾಡುವುದರೊಂದಿಗೆ ಕಾಂಗ್ರೆಸ್ ಸೇರ್ಪಡೆಯ ಮಾತುಗಳು ಕೇಳಿ ಬಂದಿದ್ದವು.
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಪ್ರಾಧಿಕಾರದ (ಬಿಎಂಐಸಿ) ಅಧ್ಯಕ್ಷ ರಘುನಂದನ್ ರಾಮಣ್ಣ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಹ ನಿಶಾ ಭಾಗವಹಿಸಿದ್ದರು. ಡಿ.ಕೆ. ಸುರೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರೊಂದಿಗೆ ಅವರು ಕಾಣಿಸಿಕೊಂಡಿದ್ದರು.
ಕಾಂಗ್ರೆಸ್ ಸೇರಲು ಈಗಾಗಲೇ ನಿರ್ಧರಿಸಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ನಾಯಕರು ಯಾವಾಗ ಸೇರಿಸಿಕೊಳ್ಳುತ್ತಾರೆಂದು ನಾನು ಸಹ ಕಾಯುತ್ತಿದ್ದೇನೆ
– ನಿಶಾ ಯೋಗೇಶ್ವರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.