ADVERTISEMENT

ನಾಳೆ ಮತ ಎಣಿಕೆ; ಬಿಗಿ ಬಂದೋಬಸ್ತ್

ಲೋಕಸಭೆ ಚುನಾವಣೆ: 22 ಸುತ್ತಿನ ಮತ ಎಣಿಕೆ; 160 ತಂಡಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 3:07 IST
Last Updated 3 ಜೂನ್ 2024, 3:07 IST

ಪ್ರಜಾವಾಣಿ ವಾರ್ತೆ

ರಾಮನಗರ: ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತ ಏಣಿಕೆ ಕಾರ್ಯವು ನಗರದ ಹೊರವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 4ರಂದು ನಡೆಯಲಿದೆ. ಒಟ್ಟು 22 ಸುತ್ತಿನ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಶುರುವಾಗಲಿದ್ದು, ಮಧ್ಯಾಹ್ನ 2ರೊಳಗೆ ಮುಗಿಯಲಿದೆ. ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ಚುನಾವಣಾಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದರು.

‘ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 2,829 ಮತಗಟ್ಟೆಗಳಿವೆ. 137 ಇವಿಎಂ ಟೇಬಲ್‌ಗಳು ಹಾಗೂ 15 ಅಂಚೆ ಮತಗಳ ಎಣಿಕೆ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. 18 ಕೊಠಡಿಗಳಲ್ಲಿ 160 ತಂಡಗಳು ಎಣಿಕೆ ಕಾರ್ಯ ನಡೆಸಲಿದೆ. ಪ್ರತಿ ತಂಡದಲ್ಲಿ ಮೂವರು ಅಧಿಕಾರಿಗಳು ಇರಲಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಮತ ಏಣಿಕೆಗೆ ಸಂಬಂಧಿಸಿದಂತೆ ಈಗಾಗಲೇ ಅಭ್ಯರ್ಥಿಗಳ ಏಜೆಂಟರಿಗೆ ಪಾಸ್ ವಿತರಿಸಲಾಗಿದೆ. ಕೇಂದ್ರದಲ್ಲಿ ಅವರಿಗಾಗಿ ಪ್ರತ್ಯೇಕವಾದ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಕ್ಕೆ ಮೊಬೈಲ್, ಸ್ಮಾರ್ಟ್ ವಾಚ್, ಕ್ಯಾಲುಕ್ಯುಲೇಟರ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಾರ್ತಿಕ್ ರೆಡ್ಡಿ ಮಾತನಾಡಿ, ‘ಎಣಿಕೆ ದಿನ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಅಂದು ಪಟಾಕಿ ಸಿಡಿಸುವಂತಿಲ್ಲ. ಮೆರವಣಿಗೆ ನಡೆಸಿ ಘೋಷಣೆ ಕೂಗುವುದಕ್ಕೆ ಅವಕಾಶವಿರುವುದಿಲ್ಲ. ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಅನ್ವಯವಾಗಲಿದೆ. ಎಂದು ತಿಳಿಸಿದರು.

‘ಎಣಿಕೆ ಕಾರ್ಯಕ್ಕೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. 650ಹೆಚ್ಚು ಪೊಲೀಸರು, 3 ಕೆಎಸ್‌ಆರ್‌ಪಿ ತುಕಡಿ, 4 ಡಿಆರ್ ತುಕಡಿಯನ್ನು ನಿಯೋಜಿಸಲಾಗಿದೆ. ಕೇಂದ್ರದ ಸುತ್ತಲೂ ಮೂರು ಸುತ್ತಿನ ಭದ್ರತೆ ಒದಗಿಸಲಾಗಿದೆ. ಕಾನೂನು ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.