ಮಾಗಡಿ: ಪಟ್ಟಣದ ಚಾರಿತ್ರಿಕ ಗೌರಮ್ಮನಕೆರೆಗೆ ಬುಧವಾರ ಜಿಲ್ಲಾ ಲೋಕಾಯುಕ್ತ ಕ್ಯಾಪ್ಟನ್ ಅಯ್ಯಪ್ಪ ಭೇಟಿ ನೀಡಿ ಕೆರೆಗೆ ಹರಿಯುತ್ತಿರುವ ಒಳಚರಂಡಿ ಕಲುಷಿತ ಕಂಡು ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಳೆಮಸೀದಿ ಮೊಹಲ್ಲಾದ ಮನೆಗಳಿಂದ ಹರಿದು ಬರುತ್ತಿರುವ ಶೌಚಾಲಯದ ಕಲುಷಿತವನ್ನು ಸಿಮೆಂಟ್ ಪೈಪ್ ಮೂಲಕ ಕೆರೆಗೆ ಹರಿಯ ಬಿಡಲಾಗಿದೆ. ಪವಿತ್ರವಾದ ಕೆರೆಗೆ ಒಳಚರಂಡಿ ಕಲುಷಿತ ಹರಿಯ ಬಿಟ್ಟು ಜಲಮೂಲ ನಾಶಕ್ಕೆ ಮುಂದಾಗಿರುವ ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡ ಲೋಕಾಯುಕ್ತ ಎಸ್ಪಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಕೂಡಲೆ ಕೆರೆಗೆ ಹರಿಯುತ್ತಿರುವ ಕಲುಷಿತವನ್ನು ನಿಲ್ಲಿಸಿ ವರದಿ ಸಲ್ಲಿಸಬೇಕು. ಇಲ್ಲವಾದರೆ ಪುರಸಭೆ ಮುಖ್ಯಾಧಿಕಾರಿಯ ವಿರುದ್ಧ ಜಲಮೂಲ ಕಲುಷಿತಗೊಳಿಸಿದ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಸುರೇಂದ್ರಮೂರ್ತಿ ಮಾತನಾಡಿ, 15 ದಿನಗಳ ಹಿಂದೆ ಸಾರ್ವಜನಿಕರು ನೀಡಿದ್ದ ದೂರಿನ ಅನ್ವಯ ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶ ಜೀವನ್ ರಾವ್ ಕುಲಕರ್ಣಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ್ ಕೆ.ಆರ್. ಮತ್ತು ತಂಡದವರು ಗೌರಮ್ಮನಕೆರೆಗೆ ಭೇಟಿ ನೀಡಿ, ಕೆರೆಗೆ ಒಳಚರಂಡಿ ಕಲುಷಿತ ಹರಿಯುವುದನ್ನು ತಡೆಗಟ್ಟುವಂತೆ ಆದೇಶಿಸಿದ್ದರು. ಸಣ್ಣ ನೀರಾವರಿ ಇಲಾಖೆ ಮತ್ತು ಮಾಗಡಿ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಸಹ ಸ್ಥಳದಲ್ಲಿದ್ದು ನ್ಯಾಯಾಧೀಶರ ಆದೇಶವನ್ನು ಪಾಲಿಸುವುದಾಗಿ ಒಪ್ಪಿಕೊಂಡಿದ್ದರು. ಇಲ್ಲಿಯವರೆಗೂ ಕಲುಷಿತ ಹರಿಯದಂತೆ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ ಮಾತನಾಡಿ ಸರ್ಕಾರಕ್ಕೆ ಹಣಬಿಡುಗಡೆಗೆ ಪತ್ರ ಬರೆದಿದ್ದೇವೆ ಎಂದರು. ಇಂಜಿನಿಯರ್ ಪ್ರಶಾಂತ್, ಶಿರಸ್ತೇದಾರ್ ರಶ್ಮಿ, ಕಸಬಾ ಹೋಬಳಿ ಕಂದಾಯ ಅದಿಕಾರಿ ನಟರಾಜ ಮಧು, ಗ್ರಾಮಲೆಕ್ಕಿಗ ದರ್ಶನ್, ರಂಗನಾಥ ಬಾಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.