ADVERTISEMENT

ರಾಮನಗರ: ಆರ್‌ಟಿಒ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ನಿಯಮಮೀರಿ ನೋಂದಣಿ, ಮಧ್ಯವರ್ತಿಗಳ ಹಾವಳಿ ಬಗ್ಗೆ ದೂರು: ಹಲವು ದಾಖಲೆ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 0:54 IST
Last Updated 19 ಅಕ್ಟೋಬರ್ 2024, 0:54 IST
ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಮೇಲೆ ಶುಕ್ರವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಕಚೇರಿ ಆವರಣದಲ್ಲಿ ಗುಂಫು ಗುಂಪಾಗಿ ನಿಂತಿದ್ದವರನ್ನು ವಿಚಾರಣೆ ನಡೆಸಿದರು. (ಬಲಚಿತ್ರ) ಆರ್‌ಟಿಒ ಆವರಣದಲ್ಲಿ ನಿಂತಿದ್ದವರನ್ನು ವಿಚಾರಿಸಿ ಅವರ ವಿವರ ಸಂಗ್ರಹಿಸಿದ ಲೋಕಾಯುಕ್ತ ಪೊಲೀಸರು
ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಮೇಲೆ ಶುಕ್ರವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಕಚೇರಿ ಆವರಣದಲ್ಲಿ ಗುಂಫು ಗುಂಪಾಗಿ ನಿಂತಿದ್ದವರನ್ನು ವಿಚಾರಣೆ ನಡೆಸಿದರು. (ಬಲಚಿತ್ರ) ಆರ್‌ಟಿಒ ಆವರಣದಲ್ಲಿ ನಿಂತಿದ್ದವರನ್ನು ವಿಚಾರಿಸಿ ಅವರ ವಿವರ ಸಂಗ್ರಹಿಸಿದ ಲೋಕಾಯುಕ್ತ ಪೊಲೀಸರು   

ರಾಮನಗರ: ನಗರದ ಬೆಂಗಳೂರು– ಮೈಸೂರು ರಸ್ತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ‌ ಇರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಮೇಲೆ‌ ಲೋಕಾಯುಕ್ತ ಪೊಲೀಸರ ತಂಡ ಶುಕ್ರವಾರ ದಾಳಿ ನಡೆಸಿದೆ.

ಕಚೇರಿಯಲ್ಲಿ ನಿಯಮಮೀರಿ ನೋಂದಣಿ ಹಾಗೂ ಏಜೆಂಟರ ಹಾವಳಿಯ ದೂರಿನ ಹಿನ್ನೆಲೆಯಲ್ಲಿ, ಲೋಕಾಯುಕ್ತ ಎಸ್‌ಪಿ ಸ್ನೇಹಾ ನೇತೃತ್ವದ ತಂಡವು ಮಧ್ಯಾಹ್ನ ಕಚೇರಿಗೆ ದಿಢೀರ್‌ ದಾಳಿ ನಡೆಸಿ, ಕಚೇರಿಯ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಿತು.

ಕಚೇರಿ ಒಳಗಡೆ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ತಂಡ, ಪ್ರತಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಿತು. ಹಾಗೆಯೇ, ಕಚೇರಿ ಆವರಣದಲ್ಲಿದ್ದ ಕೆಲ ಏಜೆಂಟರು ಸೇರಿದಂತೆ ವಿವಿಧ ಕೆಲಸಗಳಿಗೆ ಬಂದಿದ್ದವರನ್ನು ಸಹ ವಿಚಾರಣೆ ನಡೆಸಿ, ಅವರ ವಿವರವನ್ನು ಪಡೆದುಕೊಂಡಿತು.

ADVERTISEMENT

‘ಕಚೇರಿಯಲ್ಲಿ ನಿಯಮಬಾಹಿರ
ವಾಗಿ ಕೆಲವರು ವಾಹನಗಳನ್ನು ನೋಂದಣಿ ಮಾಡುತ್ತಿದ್ದಾರೆ. ಅದರಲ್ಲಿ ಕಚೇರಿಯಲ್ಲಿರುವ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಭಾಗಿಯಾಗಿದ್ದಾರೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಲಂಚ ಕೊಡದಿದ್ದರೆ ಯಾರೂ ಕೆಲಸ ಮಾಡುವುದಿಲ್ಲ ಎಂಬ ದೂರುಗಳು ಬಂದಿದ್ದವು. ಹಾಗಾಗಿ, ಡಿವೈಎಸ್‌ಪಿ ನೇತೃತ್ವದ ತಂಡ ಮಧ್ಯಾಹ್ನ ಕಚೇರಿ ಮೇಲೆ ದಾಳಿ ನಡೆಸಿದೆ’ ಎಂದು ಲೋಕಾಯುಕ್ತ ಎಸ್‌ಪಿ ಸ್ನೇಹಾ ಗೌತಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾಳಿ ವೇಳೆ ಕಚೇರಿಯಲ್ಲಿ ವಿವಿಧ ದಾಖಲೆಗಳನ್ನು ಪರಿಶೀಲಿಸಿ, ತನಿಖೆಗಾಗಿ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೊರಗಿದ್ದ ಕೆಲ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗಿದೆ. ಯಾರನ್ನೂ ಬಂಧಿಸಿಲ್ಲ. ಪ್ರಕರಣ ಸಹ ದಾಖಲಿಸಿಕೊಂಡಿಲ್ಲ. ಸದ್ಯ ವಶಕ್ಕೆ ಪಡೆದಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ, ಏನಾದರೂ ನಿಯಮಬಾಹಿರ ಚಟುವಟಿಕೆಗಳು ನಡೆದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಹೇಳಿದರು.

ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದು ಹಾಗೂ ಅಧಿಕಾರಿಗಳು ಐದಾರು ತಿಂಗಳಿಂದ ಕಡತಗಳನ್ನು ವಿಲೇವಾರಿ ಮಾಡದೆ ಹಾಗೆಯೇ ಇಟ್ಟುಕೊಂಡಿರುವುದು ದಾಳಿ ವೇಳೆ ಗೊತ್ತಾಗಿದೆ
ಸ್ನೇಹಾ, ರಾಮನಗರ ಲೋಕಾಯುಕ್ತ ಎಸ್‌ಪಿ

ಮಧ್ಯವರ್ತಿ ಬಳಿ ಕೀ!

‘ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ನಾವು ದಾಳಿ ನಡೆಸಿದಾಗ ಕಚೇರಿಯ ದಾಖಲೆಗಳ ಕೊಠಡಿಯಲ್ಲಿ ನಾಗೇಶ್ ಎಂಬ ಮಧ್ಯವರ್ತಿ ನಮ್ಮ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಪರಿಶೀಲನೆ ನಡೆಸಿದಾಗ ಜೇಬಿನಲ್ಲಿ ದಾಖಲೆ ಕೊಠಡಿಯ ಕೀ ಪತ್ತೆಯಾಯಿತು. ಆತ ಯಾಕೆ ಅಲ್ಲಿಗೆ ಬಂದಿದ್ದ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗಿದೆ’ ಎಂದು ಲೋಕಾಯುಕ್ತ ಎಸ್‌ಪಿ ಸ್ನೇಹಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ತಿಂಗಳಲ್ಲಿ 2ನೇ ದಾಳಿ

ನಗರದ ಆರ್‌ಟಿಒ ಕಚೇರಿ ಮೇಲೆ ಮೂರು ತಿಂಗಳಲ್ಲಿ ಎರಡು ಬಾರಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಂತಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಹಳೆ ಹಾಗೂ ಜಪ್ತಿಯಾದ ಟ್ರಾಕ್ಟರ್‌ಗಳ ನೋಂದಣಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಜೂನ್‌ ತಿಂಗಳಲ್ಲಿ ಲೋಕಾಯುಕ್ತ ಪೊಲೀಸರ ದೊಡ್ಡ ತಂಡವೇ ಕಚೇರಿ ಮೇಲೆ ದಾಳಿ ನಡೆದಿತ್ತು. ಬಳಿಕ ಸಾರಿಗೆ ಅಧಿಕಾರಿ ಶಿವಕುಮಾರ್ ಹಾಗೂ ದಲ್ಲಾಳಿ ಟ್ರಾಕ್ಟರ್ ಸತೀಶ್ ಎಂಬಾತನನ್ನು ಬಂಧಿಸಲಾಗಿತ್ತು. ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಅಧೀನ ನ್ಯಾಯಾಲಯಗಳು ತಿರಸ್ಕರಿಸಿದ್ದು ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಹಳೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿರುವಾಗ ಮತ್ತೊಮ್ಮೆ ದಾಳಿ ನಡೆದಿರುವುದು ಆರ್‌ಟಿಒ ಕಚೇರಿ ಅಕ್ರಮ ಚಟುವಟಿಕೆ ಹಾಗೂ ಭ್ರಷ್ಟಾಚಾರದ ಕೂಪವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.