ADVERTISEMENT

‘ಲೋಕಸಿರಿ’ಯಲ್ಲಿ ಜಾನಪದ ಕಥೆಗಳ ಮೆಲುಕು

​ಪ್ರಜಾವಾಣಿ ವಾರ್ತೆ
Published 16 ಮೇ 2023, 5:46 IST
Last Updated 16 ಮೇ 2023, 5:46 IST
ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಮಂಟೇಯಪ್ಪ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಸನ್ಮಾನಿಸಿದರು
ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಮಂಟೇಯಪ್ಪ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಸನ್ಮಾನಿಸಿದರು   

ರಾಮನಗರ: ಜಾನಪದ ಲೋಕದಲ್ಲಿ ಶನಿವಾರ ಸಂಜೆ ನಡೆದ ಲೋಕಸಿರಿ– 83 ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದ ಮಂಟೇಯಪ್ಪ ನೀಲಗಾರ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.

ಬಾಲ್ಯದ ನೆನಪುಗಳೊಂದಿಗೆ ಕಲೆ ಕಲಿತ ರಸ ನಿಮಿಷಗಳನ್ನು ಮಂಟೇಯಪ್ಪ ಸಭಿಕರ ಜೊತೆ ಹಂಚಿಕೊಂಡರು. ಸಿದ್ದಪ್ಪಾಜಿ, ಮಾದೇಶ್ವರ, ಅರ್ಜುನ ಜೋಗಿ, ಮೈದಾಳ ರಾಮನ ಕಥೆಗಳ ಕೆಲವು ಸಾಲುಗಳನ್ನು ಹಾಡಿದರು.

ಕಲಾವಿದರನ್ನು ಗೌರವಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ನಿರಂತರವಾಗಿ ಏಳು ವರ್ಷಗಳಿಂದ ತಿಂಗಳ ಅತಿಥಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ADVERTISEMENT

ಕರ್ನಾಟಕ ಜಾನಪದ ಪರಿಷತ್ತಿನ ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯ ರಾಂಪುರ ಮಾತನಾಡಿ ಅಭಿಜಾತ, ತಳಮಟ್ಟದ ಕಲಾವಿದ ಮಂಟೇಯಪ್ಪನನ್ನು ಜಾನಪದ ಪರಿಷತ್ತು ಗುರುತಿಸಿರುವುದು ಅಭಿನಂದನಾರ್ಹ ವಿಷಯ. ಜನಪದ ಎನ್ನುವುದು ವಿಜ್ಞಾನ, ನಾವೆಲ್ಲ ಜಾನಪದವನ್ನು ಅಪ್ಪಿಕೊಳ್ಳಬೇಕಿದೆ. ಸಂದೇಶಗಳನ್ನು ಹೊತ್ತು ಒಂದೂರಿನಿಂದ ಮತ್ತೊಂದೂರಿಗೆ ಕಲಾವಿದರು ಹೋಗುವುದರ ಜೊತೆಗೆ ಕಲೆಯನ್ನು ಪಸರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಶಾರ್ವಿಕಾ ಎಂಟರ್ ಪ್ರೈಸಸ್‌ ಮಾಲೀಕ ಎಸ್‌.ವಿ. ಕಿರಣ್, ಜಾನಪದ ಲೋಕದ ಆಡಳಿತಾಧಿಕಾರಿ ಕೆ. ಸರಸವಾಣಿ ಇದ್ದರು. ಕ್ಯುರೇಟರ್‌ ಯು.ಎಂ. ರವಿ ಸಂವಾದ ನಡೆಸಿಕೊಟ್ಟರು. ರಂಗಸಹಾಯಕ ಎಸ್. ಪ್ರದೀಪ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಎಚ್.ಎಲ್.ನಾಗೇಗೌಡ ಕಲಾ ಶಾಲೆಯ ವಿದ್ಯಾರ್ಥಿಗಳು, ನೇತಾಜಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.