ADVERTISEMENT

ಮಾಗಡಿ: ನಿಲ್ಲಿಸಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:16 IST
Last Updated 22 ನವೆಂಬರ್ 2024, 15:16 IST
ಮಾಗಡಿ ತಾಲ್ಲೂಕಿನ ಕಲ್ಯಾ ಗ್ರಾಮದ ಜಯಣ್ಣ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್ ವಾಹನ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದು
ಮಾಗಡಿ ತಾಲ್ಲೂಕಿನ ಕಲ್ಯಾ ಗ್ರಾಮದ ಜಯಣ್ಣ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್ ವಾಹನ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದು   

ಮಾಗಡಿ: ತಾಲ್ಲೂಕಿನ ಕಲ್ಯಾ ಗ್ರಾಮದಲ್ಲಿ ಶುಕ್ರವಾರ ಅಂಗಡಿ ಮುಂದೆ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಏಕಾಏಕಿ ಬೆಂಕಿ ತಗುಲಿದ್ದು, ದ್ವಿಚಕ್ರ ವಾಹನವು ಬಹುತೇಕ ಸುಟ್ಟು ಕರಕಲಾಗಿದೆ. ಮಾಗಡಿಯಲ್ಲಿ ಈವರೆಗೆ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಎರಡನೇ ಪ್ರಕರಣವಿದು. 

ಈ ಎಲೆಕ್ಟ್ರಿಕ್ ವಾಹನವು ಜಯಣ್ಣ ಎಂಬುವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಪ್ರತಿಕ್ರಿಯಿಸಿದ ವಾಹನದ ಮಾಲೀಕ ಜಯಣ್ಣ, ‘ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸಿದ್ದೆ. ಶುಕ್ರವಾರ ಮಧ್ಯಾಹ್ನ ಧ್ವನಿ ವರ್ಧಕ ಅಂಗಡಿ ಮುಂದೆ ನಿಲ್ಲಿಸಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಅಕ್ಕಪಕ್ಕದಲ್ಲಿದ್ದವರು ತಕ್ಷಣವೇ ಬೆಂಕಿಯನ್ನು ನಂದಿಸಿದ್ದಾರೆ. ಆದಾಗ್ಯೂ, ದ್ವಿಚಕ್ರ ವಾಹನವು ಶೇ 75ರಷ್ಟು ಸುಟ್ಟು ಹೋಗಿದೆ’ ಎಂದು ಹೇಳಿದರು. 

ADVERTISEMENT

₹90 ಸಾವಿರ ಹಣ ಕೊಟ್ಟು ಖರೀದಿಸಿದ ವಾಹನವು ಸುಟ್ಟು ಕರಕಲಾಗಿದ್ದು, ಕಂಪನಿಯವರೇ ಈ ವಾಹನವನ್ನು ದುರಸ್ತಿ ಮಾಡಿಕೊಡಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನವೇ ಬಳಸುವುದಿಲ್ಲ ಎಂದು ಹೇಳಿದರು. 

ನಿಲ್ಲಿಸಿದ ವಾಹನಕ್ಕೆ ಬೆಂಕಿ ಕಾಣಿಸಿಕೊಂಡಿದ್ದರಿಂದಾಗಿ ಕೇವಲ ದ್ವಿಚಕ್ರ ವಾಹನ ಸುಟ್ಟು ಹೋಗಿದೆ. ಒಂದು ವೇಳೆ ವಾಹನ ಚಾಲನೆ ಮಾಡುತ್ತಿದ್ದಾಗ ಬೆಂಕಿ ಅವಘಡ ಸಂಭವಿಸಿದ್ದರೆ, ನನಗೂ ಅಪಾಯ ಎದುರಾಗುತ್ತಿತ್ತು ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.