ಮಾಗಡಿ: ತಾಲ್ಲೂಕಿನ ತಿಪ್ಪಸಂದ್ರ ಮರಡಿಗುಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯದ ಏಕೈಕ ಸಂಸ್ಕೃತ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿ 12 ವರ್ಷದ ಬಳಿಕ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ.
ನೂರು ಎಕರೆ ವಿಶಾಲ ಅರಣ್ಯ ಪ್ರದೇಶದಲ್ಲಿ ಸಂಸ್ಕೃತ ವಿ.ವಿ ತಲೆಯೆತ್ತಿ ನಿಂತಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮರಡಿಗುಟ್ಟೆ ಬಳಿ 100 ಎಕರೆ ಭೂಮಿಯನ್ನು 2012ರಲ್ಲಿ ಸಂಸ್ಕೃತ ವಿ.ವಿಗಾಗಿ ಮೀಸಲಿಡಲಾಗಿತ್ತು.
ಸಾಕಷ್ಟು ಅಡೆತಡೆಯು ಕಟ್ಟಡ ಪೂರ್ಣಗೊಳ್ಳಲು 12 ವರ್ಷ ಹಿಡಿದಿವೆ. 2022ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಸಚಿವರಾಗಿದ್ದ ಡಾ. ಅಶ್ವತ್ ನಾರಾಯಣ ಶಂಕುಸ್ಥಾಪನೆ ನೆರವೇರಿಸಿದ್ದರು.
ಎರಡು ವರ್ಷದ ಬಳಿಕ ಸರ್ಕಾರದ ₹30 ಕೋಟಿ ಅನುದಾನದಲ್ಲಿ 5 ಎಕರೆ ಜಾಗದಲ್ಲಿ ವಿ.ವಿ ಆಡಳಿತ ಕಚೇರಿ, ವಿದ್ಯಾರ್ಥಿ ನಿಲಯ ಹಾಗೂ ನಾನಾ ವಿಭಾಗಗಳ ಕಚೇರಿಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸುಣ್ಣ, ಬಣ್ಣಗಳಿಂದ ಹೊಸ ಕಟ್ಟಡಗಳು ಕಂಗೊಳಿಸುತ್ತಿವೆ.
ವಿಳಂಬಕ್ಕೆ ಕಾರಣ: ವಿ.ವಿಗೆ ನೀಡಿದ್ದ ಭೂಮಿ ಅರಣ್ಯ ಇಲಾಖೆಗೆ ಸೇರಿತ್ತು. ಅದನ್ನು ಪಡೆಯಲು ಅರಣ್ಯ, ಉನ್ನತ ಶಿಕ್ಷಣ ಮತ್ತು ಕಂದಾಯ ಇಲಾಖೆಗಳ ಮಧ್ಯಸ್ಥಿಕೆಯಲ್ಲಿ ಸರ್ವೆ ಮಾಡಿ ಸಂಪುಟದ ಅನುಮೋದನೆ ಪಡೆದು ನೋಂದಣಿಗೆ ಸಮಯ ತೆಗೆದುಕೊಂಡಿತ್ತು.
ಮರಡಿಗುಟ್ಟೆ ಅರಣ್ಯ ಪ್ರದೇಶದ ಜಾಗದಲ್ಲಿ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ಇದ್ದ ಕಾರಣ ರೈಲ್ವೆ ಇಲಾಖೆ ಜತೆ ಚರ್ಚಿಸಿ ಒಪ್ಪಂದಕ್ಕೆ ಬರಲು ಮತ್ತಷ್ಟು ವಿಳಂಬವಾಯಿತು.
ನೂತನ ಸಂಸ್ಕೃತ ವಿ.ವಿಯಲ್ಲಿ ಬೋಧನಾ ವಿಷಯಗಳಾದ ವೇದಾಂತ, ಭಾಷಾ ಶಾಸ್ತ್ರ, ಜೋತಿಷ, ಆಗಮ ಶಾಸ್ತ್ರ, ಆತ ಶಾಸ್ತ್ರ ಮತ್ತು ಆಯುರ್ವೇದ, ಯೋಗ ಶಾಖೆ ಇರಲಿವೆ. ಜತೆಗೆ ಬೋಧನಾ ವಿಭಾಗ, ಸಂಶೋಧನಾ ವಿಭಾಗ, ಪ್ರಚಾರ ಮತ್ತು ಮುದ್ರಣಾ ವಿಭಾಗ ಇರಲಿದೆ.
ಬಾಲಗಂಗಾಧರನಾಥ, ಪೇಜಾವರ ಮತ್ತು ಶಿವಕುಮಾರ ಶ್ರೀಗಳ ಹೆಸರಿನಲ್ಲಿ ಅಧ್ಯಯನ ಪೀಠಗಳು ಇರಲಿವೆ. ಮಠಗಳು ಇದಕ್ಕೆ ಆರ್ಥಿಕ ನೆರವು ನೀಡಲಿವೆ.
ವಿ.ವಿ ಹೊಸ ಕಟ್ಟಡವು ಕರ್ನಾಟಕ ಸೇರಿ ದೇಶದ ಸಂಸ್ಕೃತ ವಿವಿಗಳ ಪೈಕಿ 16ನೆಯದು. ಈ ಕಟ್ಟಡದಲ್ಲಿ ರಾಜ್ಯದ 31 ಸಂಸ್ಕೃತ ಕಾಲೇಜು, 490 ಸಂಸ್ಕೃತ ವಿ.ವಿಗೆ ಸೇರಿದ ಪಾಠಶಾಲೆ, 35 ಸಂಸ್ಕೃತ ವಿವಿ ಬೋಧನಾ ಶಾಖೆ, 11 ಸಂಸ್ಕೃತ ಅಧ್ಯಯನ ಕೇಂದ್ರ, 126 ವಿದೇಶಿಯ ಸಂಸ್ಕೃತ ಅಧ್ಯಯನ ಕೇಂದ್ರಗಳು ಈ ಕಟ್ಟಡದಲ್ಲಿ ಪ್ರತ್ಯೇಕವಾಗಿ ಆಡಳಿತ ನಿಯಂತ್ರಿಸಲಿವೆ.
ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ 15 ಕೊಠಡಿ ಇರಲಿವೆ. 60 ವಿದ್ಯಾರ್ಥಿನಿಯರು ಸೇರಿ ಒಟ್ಟು 120 ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದು.
ಚಾಮರಾಜಪೇಟೆಯಲ್ಲಿರುವ ಸಂಸ್ಕೃತ ವಿ.ವಿ ಕಚೇರಿಯನ್ನು ತಿಪ್ಪಸಂದ್ರಕ್ಕೆ ಸ್ಥಳಾಂತರಿಸುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ರಸ್ತೆ ವಿದ್ಯುತ್ ಭದ್ರತೆ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು.ಎಚ್.ಸಿ.ಬಾಲಕೃಷ್ಣ. ಮಾಗಡಿ ಶಾಸಕ
ಬಹು ವರ್ಷಗಳ ಮಹತ್ವಾಕಾಂಕ್ಷಿ ಯೋಜನೆ ಈಗ ಪೂರ್ಣವಾಗಿದ್ದು, ಸಂಸ್ಕೃತ ವಿ.ವಿ ಕಟ್ಟಡ ಬಹಳ ಸುಂದರವಾಗಿ ನಿರ್ಮಾಣವಾಗಿದೆ. ವಿ.ವಿ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದು ಈ ಭಾಗದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.