ಮಾಗಡಿ: ಯಾರೊ ತಮ್ಮ ಬಾಯಿ ಚಪಲ ಹಾಗೂ ತೀಟೆಗೋಸ್ಕರ ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡುತ್ತಾರೆ. ಶಾಸಕರು ಸಹ ಹಾದಿಬೀದಿಯಲ್ಲಿ ಹೋಗುವವರು ಮಾತನಾಡುವಂತೆ ಮಾತನಾಡಬಾರದು ಎಂದು ಮನವಿ ಮಾಡುವೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಶಿಸ್ತಿನಿಂದ ನಡೆಯಬೇಕು. ಕಾರ್ಯಕರ್ತರ ಅಭಿಪ್ರಾಯಕ್ಕೆ ಗೌರವ ಕೊಡಬೇಕು. ಅವರ ಮನಸ್ಸಿಗೆ ನೋವಾಗದಂತೆ, ಧಕ್ಕೆಯಾಗದಂತೆ ಮುಖಂಡರು ನಡೆದುಕೊಳ್ಳಬೇಕು ಎಂದರು.
ನಾನು ಯಾರನ್ನೂ ಮುಖ್ಯಮಂತ್ರಿ ಮಾಡೋಕೆ ಆಗಲ್ಲ, ಇಳಿಸೋಕು ಆಗಲ್ಲ. ನಮ್ಮದೇ ಪಕ್ಷದ ತತ್ವ- ಸಿದ್ದಾಂತ ಹಾಗೂ ಹೈಕಮಾಂಡ್ ಇದೆ. ಸಿ.ಎಂ ಸ್ಥಾನದ ಬಗ್ಗೆ ಅವರು ತೀರ್ಮಾನ ಮಾಡುತ್ತಾರೆ.
ಅದು ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮುದಾಯ ಪ್ರತಿನಿಧಿಸುವ ಅವರು ಅಭಿಪ್ರಾಯ ವ್ಯಕ್ತಪಡಿಸಬಹುದು. ಅವರನ್ನು ಬಿಟ್ಟು ರಾಜಕಾರಣಿಗಳು ಮಾತನಾಡಬಾರದು. ಒಂದು ವೇಳೆ ಮಾತನಾಡಿದರೆ ಸುದ್ದಿಯಾಗುತ್ತದೆ.
ಬೇರೆ ಯಾರೇ ಮಾತನಾಡಿದರೂ ಸುದ್ದಿಯಾಗುವುದಿಲ್ಲ ಎಂದರು.
ಸ್ವಾಮೀಜಿ ಟೀಕೆ ಸರಿಯಲ್ಲ
ಸ್ವಾಮೀಜಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಅವರನ್ನು ಟೀಕೆ ಮಾಡುವುದು ಸರಿಯಲ್ಲ.ಎಲ್ಲಾ ಸ್ವಾಮೀಜಿಗಳು ಅವರವರ ಸಮುದಾಯದವರು ಮುಖ್ಯಮಂತ್ರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ. ಹೀಗಾಗಿ, ರಾಜಕಾರಣಿಗಳು ತಮ್ಮ ಇತಿಮಿತಿಯಲ್ಲಿ ವರ್ತಿಸಬೇಕು ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವು ಕೇವಲ ಮಾಧ್ಯಮ ಸೃಷ್ಟಿ. ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಬದಲಿಗೆ, ಪಕ್ಷ ಬಲವರ್ಧನೆ ಕುರಿತು ಚರ್ಚೆಯಾಗಿದೆ.
ಅಧ್ಯಕ್ಷ ಸ್ಥಾನ ಮತ್ತು ಸಿ.ಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತಿರ್ಮಾನ ಮಾಡಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.